ಕ್ಯಾಲೆಂಡರ ಬದಲಾದೊಡೆ ಹೊಸವರ್ಷವೇ.? ಉದಾತ್ತ ಚಿಂತನೆ, ಸೂಕ್ತ ನಿರ್ಧಾರವಿರಲಿ.!
ಬದುಕಿನ ಹಿನ್ನೋಟ, ಮುನ್ನೋಟಗಳ ಚಿಂತನೆ ನಡೆಯಲಿ
ಪ್ರತಿದಿನವು ಪೂರ್ವ ದಿಕ್ಕಿನಲ್ಲಿ ಸುಂದರ ಕೆಂಪು ಬಣ್ಣದ ಕಿರಣಗಳೊಂದಿಗೆ ಮೂಡಿಬರುವ ಸೂರ್ಯನಿಗೆ ಹೊಸ ವರ್ಷದ ಸ್ವಾಗತ ಕೋರಲು ಜಗತ್ತು ಸಿದ್ಧವಾಗಿದೆ. 2017ನೇ ವರ್ಷದ ಹಲವಾರು ಗಟ್ಟಿ ನೆನಪುಗಳೊಂದಿಗೆ ಹೊಸ ಆಸೆ, ಆಕಾಂಕ್ಷೆ, ಹೊಸ ಪ್ರೇರಣೆಗಳನ್ನು ಹೊತ್ತುಕೊಂಡು ಬರುವ ನವ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಕಳೆದು ಹೋದ ನಿನ್ನೆಯನ್ನು ಮರೆಯಿಸಿ ಬರಲಿರುವ ನಾಳೆಯ ಬಗೆಗಿನ ಹೊಸ ಭಾವನೆಗಳನ್ನು ನಮ್ಮಲ್ಲಿ ಜಾಗೃತಗೊಳಿಸುತ್ತದೆ.
ಮತ್ತೊಂದು ಹೊಸ ವರ್ಷದ ದಿನದಂದು ಹೊಸ ಮುಂಜಾನೆ ಹುಟ್ಟಿಕೊಳ್ಳುತ್ತದೆ. ಹುಟ್ಟುವ ಅದೇ ಸೂರ್ಯನಾದರೂ ಅದು ನಿತ್ಯನೂತನ ಅದಕ್ಕೆ ಅಂದು. ಸೂರ್ಯೋದಯ ನಿನ್ನೆಗಿಂತ ಭಿನ್ನವಾಗಿ ಹೊಸತು ಹೊಸತ್ತಾಗಿ ಕಾಣಿಸುತ್ತದೆ. ಇದೇ ವೇಳೆಯಲ್ಲಿ ಹೊಸ ಕಾತರಾಕಾಂಕ್ಷಿಗಳಿಗೆ ಉತ್ತರ ಸಿಗುವ ನಿರೀಕ್ಷೆ ಹೆಚ್ಚಾಗುತ್ತದೆ. ಇನ್ನೆಲ್ಲ ಒಳ್ಳೆಯದಾಗಲಿದೆ ಎನ್ನುವ ಬೆಚ್ಚಗಿನ ಭಾವನೆ ಎಲ್ಲರಲ್ಲೂ ಬೇರೂರುತ್ತದೆ.
ಹೊಸ ವರ್ಷ ಅನ್ನೋ ಹೊಸತಕ್ಕೆ ಇರುವ ಗಮ್ಮತ್ತೇ ಅಂತಹದ್ದು. ಈ ಹೊಸ ವರ್ಷ ಪಾಶ್ಚಾತ ರಾಷ್ಟ್ರದ ಸಂಸ ಕೂಡ ಇದು ಪ್ರಪಂದ ಪ್ರತಿಯೊಬ್ಬರ ಮೇಲೆ ಒಳ್ಳೆಯ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.
ಹೊಸ ವರ್ಷದ ಆಗಮನ ಎಂದರೆ ಒಂದು ಅರ್ಥದಲ್ಲಿ ಅನೇಕ ಸಿಹಿ ಕಹಿಗಳ ನೆನಪು ಮತ್ತು ನಿರೀಕ್ಷೆಗಳ ಪುನರಾವರ್ತನೆಯಾಗಿದೆ. 2017ನೇ ವರ್ಷದ ಮನುಷ್ಯ ಬದುಕಿನ ಪತದಲ್ಲಿ ನಡೆದು ಬಂದ ದಾರಿಯತ್ತ ಇನ್ನೋಟ ಬೀರಿದಾಗ ಮನಸ್ಸನ್ನು ಮುತ್ತುವ ಘಟನಾವಳಿಗಳು ನಮ್ಮ ಹೃದಯದಲ್ಲಿ ಸಂತಸಕ್ಕಿಂತಲೂ ಹೆಚ್ಚಾಗಿ ನೋವಿನ ತಂತಿಗಳನ್ನು ಮೀಟುತ್ತದೆ.
ಭಾರತದಲ್ಲಿ ಅತಿವೃಷ್ಠಿ, ಅನಾವೃಷ್ಠಿ, ಭಯೋತ್ಪಾದನೆ ಕೃತ್ಯಗಳು, ಕೋಮುಗಲಭೆಗಳು, ಮಹಿಳೆ ಮತ್ತು ಮುಗ್ದ ಕಂದಮ್ಮಗಳ ಮೇಲೆ ಅತ್ಯಾಚಾರಗಳು, ಮಕ್ಕಳ ಮಾರಾಟಗಳು, ರೈತರ ಆತ್ಮಹತ್ಯೆಗಳು, ನಕ್ಸಲ್ ಅಟ್ಟಹಾಸಗಳು, ಮಿತಿಮಿರಿದ ಭ್ರಷ್ಟಚಾರ ಪ್ರಕರಣಗಳು ಮುಂತಾದ ಘÀಟನೆಗಳು ದೇಶದಲ್ಲಿ ಭಯದ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಿದೆ.
ಇಂತಹ ಅಹಿತಕರ ಘಟನೆಗಳಿಂದ ಜನಸಾಮಾನ್ಯರ ಬದುಕನ್ನು ತತ್ತರಿಸಿದ 2017ಕ್ಕೆ ಕೊನೆಯ ನಮಸ್ಕಾರ ಹೇಳೋಣ. ಹೊಸ ವರ್ಷದ ಮುಂಬೆಳಗಿನಲ್ಲಿ ನಿಂತು ಒಂದು ಪಕ್ಷಿನೋಟ ಹರಿಸಿದಾಗ ಕೃಷಿ, ಕೈಗಾರಿಕೆ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಭಾರತ ಮಹತ್ತರವಾದ ಸಾಧನೆಯ ಮೂಲಕ ಪ್ರಗತಿಯ ಹೆಜ್ಜೆಯನ್ನಿಡುತ್ತಿರುವುದು ನೆಮ್ಮದಿಯ ಸಂಗತಿಯಾಗಿದೆ.
ಕಳೆದು ಹೋದ ವರ್ಷ ನಮಗೆಷ್ಟು ಪ್ರಯೋಜನಕಾರಿಯಾಗಿತ್ತೆಂಬುದು ಅವರವರ ವ್ಯಕ್ತಿತ್ವ ಮತ್ತು ಕಾರ್ಯ ತತ್ಪರತೆಯನ್ನು ಆಧರಿಸಿದೆ. ಅದು ಸೋಮಾರಿಗಳಿಗೆ ಸುಧೀರ್ಘವಾಗಿ, ಪರಿಶ್ರಮಿಗಳಿಗೆ ಕ್ಷಣವಾಗಿ ಕಂಡಲ್ಲಿ ಆಶ್ಚರ್ಯ ಪಡಬೇಕಿಲ್ಲ. ಸಮಯವನ್ನು ಉಪಯೋಗಿಸಿಕೊಳ್ಳುವವರ ಮೇಲೆ ಆ ವರ್ಷದ ಸಂತೋಷ-ದುಖಃಗಳು ನಿಂತಿವೆ.
ಏಕೆಂದರೆ ಕಳೆದು ಹೋದ ಕಾಲ, ಬದುಕು ಮತ್ತು ಭವಿಷ್ಯಕ್ಕೆ ಅತ್ಯಂತ ನಿಕಟವಾದ ಸಂಬಂಧವಿದೆ. ನಮ್ಮ ಬಾಲ್ಯ, ತಾರುಣ್ಯ ಮತ್ತು ಮುಪ್ಪುಗಳು ಕಾಲದ ಉಯ್ಯಾಲೆಯಲ್ಲಿ ತೂಗುತ್ತಿವೆ. ಹುಟ್ಟು ಸಾವಿನ ಭದ್ರತೆ ಅಥÀವಾ ಅಭದ್ರತೆಯ ಮಿಶ್ರ ಅನುಭವಗಳು ಉಂಟಾಗುವುದು ಸ್ವಾಭಾವಿಕ. ಬದುಕಿನಲ್ಲಿ ಅನುಭವ ಎಲ್ಲವನ್ನು ಕಲಿಸುತ್ತದೆ ನಿಜ ಹಾಗೆಂದು ಅನುಭವದ ಮೂಲಕವೇ ಎಲ್ಲವೂ ಸಾಧಿಸಲಾಗುವುದಿಲ್ಲ. ಅದು ನಿರಂತರ. ಪರರ ಅನುಭವ ನಮಗೆ ಪಾಠವಾಗಿ ನಾವು ಸ್ವ-ಸಾಮಥ್ರ್ಯದ ಮೂಲಕ ಮೇಲೇಳಲು ಪ್ರಯತ್ನಿಸಬೇಕು.
ನೂತನ ಜಗತ್ತಿನ ನಿರ್ಮಾಣಕ್ಕಾಗಿ ನಾವು ಹೊಸ ಜೀವನ ದೃಷ್ಠಿಕೋನವನ್ನು ಬೆಳೆಸಿಕೋಳ್ಳಬೇಕು ಹಾಗೂ ಇಲ್ಲಿಯವರೆಗೆ ನಡೆದುಕೊಂಡು ಬಂದ ಜೀವನ ಪರಂಪರೆಯೊಂದಿಗೆ ಇಂದಿನ ಹೊಸ ಪರಂಪರೆಯನ್ನು ಸಮನ್ವಯಗೊಳಿಸಲು ನಾವು ಶಕ್ತರಾಗಬೇಕಾಗಿದೆ. ಹೊಸ ವರ್ಷ ಕಾಲಿಟ್ಟಾಗಲೆಲ್ಲಾ ಹೊಸ ಹರ್ಷೋಲ್ಲಾಸಗಳು ಮೂಡುವುದು ಸಹಜ.
ಆದರೆ ಇದರೊಂದಿಗೆ ಅನೇಕ ಅವ್ಯಕ್ತ ಆತಂಕಗಳು ಕೂಡ ಹುಟ್ಟಿಕೊಳ್ಳುತ್ತವೆ. ಕಾಲ ಉರುಳಿದಂತೆಲ್ಲಾ ಉಡಿಯಲ್ಲಿನ ಸಮಸ್ಯೆಗಳು ಮಡಿಲನ್ನು ಸುಟ್ಟು ಹಾಕುತ್ತದೆ. ಹೆಚ್ಚುತ್ತಿರುವ ಸಾಮಾಜಿಕ ಸಮಸ್ಯೆಗಳ ಆಕ್ರೋಶದ ಹೊಡೆತಕ್ಕೆ ಬದುಕಿನ ಬೆಲೆಯೇ ಗಗನಕ್ಕೇರಿ ಭವಿಷತ್ತು ಭಯದ ಸಂಕೋಲೆಯಲ್ಲಿ ಸಿಕ್ಕಿದೆ.
ಜೀವನ ಮಟ್ಟದಲ್ಲಿ ಸುಧಾರಣೆ ಗಾಳಿ ಗೋಪುರವಾಗಿದೆ. ಹಲವಾರು ತಲ್ಲಣಗಳ, ಆತಂತ್ರದ ಮಧ್ಯೆ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ, ಜೀವನ ಮಟ್ಟ ಸುಧಾರಿಸಿಕೊಳ್ಳಬೇಕಾಗಿದೆ, ಎತ್ತರಿಸಿಕೊಳ್ಳಬೇಕಾಗಿದೆ.
“ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ” ಎಂದು ಡಿ.ವಿ.ಜಿ ಯವರು ಹೇಳಿದಂತೆ ಕಷ್ಟ ನಷ್ಟಗಳನ್ನು ಎದುರಿಸಿ ಮುನ್ನಡೆಯುವುದರಿಂದ ಮಾತ್ರ ಉಜ್ವಲ ಭವಿಷ್ಯ ನಿರ್ಮಾಣ ಸಾದ್ಯ. ನಮ್ಮ ಸುತ್ತಣ ಇರುವ ಜಗತ್ತಿನ ಸುತ್ತ ಕಣ್ಣರಳಿಸಿ ನೋಡಿ ಅನುಭವ ಜ್ಞಾನವನ್ನು ಗ್ರಹಿಸಿ ಬದುಕುವ ದಾರಿಯನ್ನು ಖಚಿತಪಡಿಸಿಕೊಳ್ಳಬೇಕು.
ಚಿಂತನಪರತೆ ಮತ್ತು ಹೊಸ ಆಹ್ವಾನಗಳನ್ನು ಎದುರಿಸುವ ದೃಢಚಿತ್ತ ನಮ್ಮದಾಗಬೇಕು. ಅಕ್ಷಯ ದೀಪದಂತಿರುವ ಕಾಲದ ಪಾತ್ರೆಯಲ್ಲಿ ನಮ್ಮ ಜೀವನ ಎಂಬುದು ಕಿರು ಹಣತೆಯಂತೆ ಮಿಣುಕು ಬೆಳಕು ಚೆಲ್ಲುತ್ತ ಮಿಣುಗುತ್ತಿರುತ್ತದೆ. ಕಾಲನ ಚೀಲದಲ್ಲಿ ಬಿದ್ದು ಕಣ್ಮರೆಯಾಗುತ್ತಿರುವ ನಿನ್ನೆಗಳು ನಮ್ಮ ಪಾಲಿಗೆ ಕಳೆದೇ ಹೋಗುತ್ತವೆ.
ಹೊಸ ವರ್ಷದಲ್ಲಿ ಎನೆಲ್ಲ ಆಗಬೇಕಿದೆ ಎನ್ನುವ ದೊಡ್ಡದೊಂದು ಪಟ್ಟಿ ಮಾಡಲು ಹೊರಡುವಷ್ಟರಲ್ಲಿ ಇನ್ನೊಂದು ವರ್ಷ ಹೊಸ್ತಿಲಲ್ಲಿ ಕಾಯ್ತಿರುತ್ತದೆ. ಏಕೆಂದರೆ ಕಾಲ ಯಾರನ್ನೂ ಕಾಯುವುದಿಲ್ಲ. ಹೊಸ ವರ್ಷವು ಇಂದಿನ ವರ್ಷಗಳಂತೆಯೇ ಬರುತ್ತದೆ. ಆದರೆ ವರ್ಷದ ಮೊದಲನೇ ದಿನ ಹೊಸ ಉತ್ಸಾಹ, ಆಶಯ ಮತ್ತು ಹೊಸ ನಿರ್ಣಯಗಳ ದಿನವಾಗಿರುತ್ತದೆ. ವರ್ಷದ ಮೊದಲನೆ ದಿನದ ಉತ್ಸಾಹವೆ ಬೇರೆ ರೀತಿಯದ್ದು.
ಎಲ್ಲವೂ ಸ್ವಲ್ಪ ಸಮಯದವರೆಗೆ ಹೊಸತ್ತೆನಿಸುತ್ತದೆ. ಹಳೆಯ ದುಃಖ ನೋವುಗಳು ಮುಗಿದವು ಎಂದೆನಿಸುತ್ತದೆ. ಆರಂಭದಲ್ಲಿ ಹೊಸತನ, ಹೊಸ ಭರವಸೆ ಏನೆಲ್ಲಾ ಅಂದುಕೊಂಡು ಜೀವನ ಕಳೆಯುತ್ತೇವೆ. ವರ್ಷಾಂತ್ಯದಲ್ಲಿ ಕಳೆದು ಹೋದ ಹುಮ್ಮಸ್ಸನ್ನು ಹುಡುಕಲು ಮುಂದಾಗುತ್ತೇವೆ. ಇಂಗ್ಲೀಷ ಕ್ಯಾಲೇಂಡರಿನ ಮೊದಲನೇ ದಿನದಂದು ನಮ್ಮ ದೇಶದಲ್ಲಿ ಯಾವುದೇ ಪೂಜೆ, ಪುನಸ್ಕಾರಗಳು ನಡೆಯುವುದಿಲ್ಲ.
ಡಿಸೆಂಬರ್ 31 ರಂದು ಹಳೇ ವರ್ಷಕ್ಕೆ ವಿದಾಯ ಹೇಳುವುದು ಹೊಸ ವರ್ಷದಂದು ಶುಭಾಷಯಗಳನ್ನು ಕೋರುವುದು, ಇಡೀ ವರ್ಷ ಸುಖ ಸಂತೋಷದಿಂದಿರಲಿ ಎಂದು ಹಾರೈಸುವುದು ಇಷ್ಟೇ. ಇಲ್ಲಿ ಯಾವುದೇ ರೀತಿ ಜಂಜಾಟವಿಲ್ಲ. ಕೇವಲ ಡೈರಿ ಅಥವಾ ಕ್ಯಾಲೆಂಡರ್ ಬದಲಾಯಿಸುವುದಷ್ಟೇ ಹೊಸ ವರ್ಷದ ಮಹತ್ವ ಸೀಮಿತಗೊಳ್ಳಬಾರದು. ಹಿಂದಿನ ವರ್ಷ ಮಾಡಿದ ತಪ್ಪುಗಳನ್ನು ನೆನಪಿಸಿಕೊಂಡು ಹೊಸ ವರ್ಷದಲ್ಲಿ ಅದೇ ತಪ್ಪುಗಳನ್ನು ಮಾಡದಿರಲು ತೀರ್ಮಾನ ಮಾಡುವುದಕ್ಕೆ ಇದು ಒಳ್ಳೆಯ ಸಂದರ್ಭ.
ಈ ಹೊಸ ವರ್ಷದಲ್ಲಿ ಜೀವನ ಜಂಜಾಟದಲ್ಲಿ ಕಳೆದು ಹೋಗಿರುವ ಸ್ನೇಹಿತರನ್ನು, ಬಂಧುಗಳನ್ನು ನೆನಪಿಸಿಕೊಳ್ಳಿ. ಹಳೆಯ ವೈರಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಹಾಗೆಯೇ ಹೊಸ ಗೆಳೆಯರನ್ನು, ಸಂಬಂಧಗಳನ್ನು ಬೆಳೆಸಿಕೊಳ್ಳಿರಿ.
ಕೆಲವರು ಹೊಸ ವರ್ಷವನ್ನು ಬಹಳಷ್ಟು ಹೀನಾಯವಾಗಿ ಆಚರಿಸುತ್ತಾರೆ. ಅಂದು ರಾತ್ರಿ ಧಾಬಾ, ರೆಸ್ಟೋರೆಂಟ್‍ಗಳಲ್ಲಿ ಕುಡಿದು ತಿಂದು ಮಜಾಮಾಡುತ್ತ, ಕುಡಿದ ನಿಶೆಯಲ್ಲಿ ಅಸಭ್ಯವಾಗಿ ವರ್ತಿಸುತ್ತ, ಕೆಟ್ಟ ಶಬ್ದಗಳಿಂದ ಒಬ್ಬರಿಗೊಬ್ಬರು ಬೈದುಕೊಳ್ಳುತ್ತಿರುತ್ತಾರೆ ಇಂತಹ ಸಂದರ್ಭಗಳಲ್ಲಿ ಹಲವು ಕಡೆ ಜಗಳಗಳಾಗಿ, ಕೊಲೆಗಳು ನಡೆದ ಘಟನೆಗಳು ಸಂಭವಿಸಿವೆ.
ಇವು ಸಮಾಜದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಹೊಸ ವರ್ಷವನ್ನು ಪ್ರತಿಯೊಬ್ಬರು ಒಳ್ಳೆಯ ಆಲೋಚನೆ, ವಿಚಾರ, ಚಿಂತನೆ, ದೃಢ ನಿರ್ಧಾರ, ಒಳ್ಳೆಯ ಮೌಲ್ಯಗಳು ಮುಂತಾದವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಇಡೀ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬಾಳುವ, ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ವರ್ಷವನ್ನು ಆಚರಿಸಬೇಕು ಅಂದಾಗ ಮಾತ್ರ ಹೊಸ ವರ್ಷಕ್ಕೆ ಅರ್ಥ ಹಾಗೂ ಬೆಲೆ ಬರುತ್ತದೆ.
ಹೊಸ ವರ್ಷವು ಶುಭವಾಗಲಿ ಎಂದು ಹೇಳುವುದಕ್ಕಿಂತ, ಹೊಸ ವರ್ಷವನ್ನು ಶುಭದಾಯಕವನ್ನಾಗಿ ಮಾಡೋಣವೇಂದು ಪಣತೊಡೋಣ ಅಂದರೆ ಒಳ್ಳೆಯದನ್ನು ಮಾಡಲು ಎಲ್ಲರೂ ಆರೋಗ್ಯಕರ ಮನಸ್ಸಿನಿಂದ ಸಕ್ರೀಯವಾಗಿ ಪಾಲ್ಗೊಳಬೇಕು.
ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಪ್ರಾಚೀನ ಆಚಾರ್ಯರು ಋಗ್ವೇದದಲ್ಲಿ ಸೂಚಿಸಿದಂತೆ ಉದಾತ್ತ ಚಿಂತನೆಗಳನ್ನು, ವಿಚಾರಗಳನ್ನು ಸ್ವಾಗತಿಸೋಣ, ಮತ್ತು ಅಳವಡಿಸಿಕೊಳ್ಳೊಣ. ಕಾಲಚಕ್ರ ಪರಿಭ್ರಮಣೆಯಲ್ಲಿ ಒಂದು ವರ್ಷ ಗತಿಸಿ ಬರುವ ಮತ್ತೊಂದು ವರ್ಷ ವಿಶ್ವಮಾನವರ ಪಾಲಿಗೆ ಮಹೋನ್ನತ ವರ್ಷವಾಗಲಿ ಎಂದು ಹಾರೈಸೋಣ. ಸರ್ವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
-ರಾಘವೇಂದ್ರ ಹಾರಣಗೇರಾ.
ಮೊ.9901559873.