ಹೆಲ್ಮೆಟ್ ಜೀವ ರಕ್ಷಣೆಗೆ ಸಹಕಾರಿ, ಕುಟುಂಬ ನಿಮ್ಮನ್ನೆ ನಂಬಿದ್ದಾರೆಂಬ ಅರಿವಿರಲಿಃ ಸಿಪಿಐ ನಾಗರಾಜ
ಉಚಿತ ಹೆಲ್ಮೆಟ್ ವಿತರಣೆ-ಪೊಲೀಸರಿಂದ ಶ್ಲಾಘನೀಯ
ಯಾದಗಿರಿಃ ಪ್ರತಿಯೊಬ್ಬ ಬೈಕ್ ಸವಾರ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ತೊಟ್ಟು ಬೈಕ್ ನಡೆಸುವದರಿಂದ ಅಪಘಾತ ಸಂದರ್ಭದಲ್ಲಿ ನಿಮ್ಮ ಜೀವ ರಕ್ಷಣೆಗೆ ಇದು ಸಹಕಾರವಾಗಲಿದೆ. ದೇಹದ ಯಾವುದೇ ಅಂಗಕ್ಕೆ ಪೆಟ್ಟು ಬಿದ್ದರೂ ಅದನ್ನು ಸೂಕ್ತ ಚಿಕಿತ್ಸೆಯಿಂದ ಸರಿಪಡಿಸಬಹುದು ಆದರೆ ತಲೆಗೆ ಹಾನಿಯಾದಲ್ಲಿ ಸರಿಪಡಿಸಲು ಕಷ್ಟಸಾಧ್ಯವೆಂದು ನಗರ ಠಾಣೆ ಸಿಪಿಐ ನಾಗರಾಜ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರ ಸಮೀಪದ ಭೀಮರಾಯನ ಗುಡಿ ಹತ್ತಿರದ ಶ್ರೀಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಜ್ವತಿಯಿಂದ ಆಯೋಜಿಸಿದ ಉಚಿತ ಹೆಲ್ಮೆಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾನವನಾಗಿ ಜನ್ಮವೆತ್ತ ಮೇಲೆ ಒಂದಿಲ್ಲೊಂದು ದಿನ ಸಾವು ನಿಶ್ಚಿತ ಆದರೆ ಸಾವನ್ನು ನಮ್ಮ ಕೈಯಾರ ಬರಮಾಡಿಕೊಳ್ಳುವದಕ್ಕಿಂತ ಆದಷ್ಟು ಎಚ್ಚರವಹಿಸಬೇಕು. ಶೇ.100 ರಲ್ಲಿ ಪ್ರತಿಶತ 90 ರಷ್ಟು ಜೀವನ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಶೇ.10 ರಷ್ಟು ಮಾತ್ರ ದೇವರ ಇಚ್ಛೆಯಂತೆ ನಡೆಯಲಿ ಎನ್ನಬೇಕು. ನಾವು ಮುಂಜಾಗೃತವಹಿಸದೆ ಎಲ್ಲಾ ದೇವರ ಇಚ್ಚೇಯಂದು ಹೋದಲ್ಲಿ ನಮ್ಮ ಕೈಯಾರ ನಾವು ಕೆಟ್ಟದನ್ನು ಮಾಡಿಕೊಂಡಂತೆ.
ನಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳುವಷ್ಟು ಬುದ್ಧಿಶಕ್ತಿ ದೇವರ ನೀಡಿದ್ದಾನೆ. ಕಾರಣ ಮನುಷ್ಯ ಒಳಿತನ್ನೆ ಮಾಡಬೇಕು ಒಳಿತು ಮಾಡದಾಗದಿದ್ದರೆ ಕೆಟ್ಟದ್ದನ್ನು ಮಾಡಲೇ ಬಾರದು ಸುಮ್ಮನಿರಬೇಕು. ಮಣಿಕಂಠ ಕಾಟನ್ ಮಿಲ್ ಮಾಲೀಕರು ಮತ್ತು ಅವರ ಸಹೋದರರು ಹೆಲ್ಮೆಟ್ ಉಚಿತವಾಗಿ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ಉತ್ತಮ ಕಾರ್ಯಕ್ಕೆ ನಾಗರಿಕರು ಕೈಲಾದ ಸಹಾಯ ಸಹಕಾರ, ಪ್ರೋತ್ಸಾಹ ನೀಡಬೇಕು.
ನಗರದಲ್ಲಿ ವಾಹನ ಸಂಚಾರ ದಟ್ಟವಾಗಿದೆ. ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಜನರು ಹೆಲ್ಮೆಟ್ ಧರಿಸಿ ಬೈಕ್ ಸಂಚಾರ ಮಾಡಬೇಕು. ಇದರಿಂದ ನಿಮ್ಮ ಜೀವನಕ್ಕೆ ಒಳಿತು. ನಿಮ್ಮ ಮೇಲೆ ಭರವಸೆ ಇಟ್ಕೊಂಡು ಮನೆಯಲ್ಲಿದ್ದ ಹೆಂಡತಿ, ಮಕ್ಕಳು ತಂದೆ ತಾಯಂದಿರ ಹಿತಕ್ಕಾದರೂ ಹೆಲ್ಮೆಟ್ ಧರಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತರಾಗಿದ್ದಾರೆ. ಅವರನ್ನು ಬದುಕಿಸುವ ಜವಬ್ದಾರಿ ನಿಮ್ಮ ಮೇಲೆ ಇದೆ. ಅಪಘಾತ ಸಂದರ್ಭದಲ್ಲಿ ಸಾಕಷ್ಟು ಜೀವಗಳು ಕಳೆದುಕೊಂಡ ಎಷ್ಟೋ ಕುಟುಂಬಗಳು ಇಂದು ಬೀದಿಪಾಲಾಗಿವೆ. ಸಾಕಷ್ಟು ನಿದರ್ಶನಗಳು ನಿಮ್ಮ ಕಣ್ಮುಂದಿವೆ. ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂದು ಮನವಿ ಮಾಡಿದರು.
ಗ್ರಾಮೀಣ ಸಿಪಿಐ ಮಹ್ಮದ್ ಸಿರಾಜ್ ಮಾತನಾಡಿ, ಹೆಲ್ಮೆಟ್ ನಿಮ್ಮ ಜೀವ ರಕ್ಷಕ. ಇದನ್ನು ಸಮರ್ಪಕವಾಗಿ ಬಳಸಬೇಕು. ಬೆಂಗಳೂರ ಸೇರಿದಂತೆ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹೆಲ್ಮೆಟ್ ಬಳಸುತ್ತಾರೆ. ಆದರೆ ಕೆಲವು ನಗರ ಪ್ರದೇಶದಲ್ಲಿ ಸಾಕಷ್ಟು ತಿಳುವಳಿಕೆ ಇದ್ದರೂ ಇಂದಿಗೂ ಹೆಲ್ಮೆಟ್ ಬಳಕೆಯಾಗುತ್ತಿಲ್ಲ ಇದು ವಿಷಾಧನೀಯ. ಹೀಗಾಗಿ ಸಾಕಷ್ಟು ಜೀವ ಹಾನಿ ಸಂಭವಿಸಿದ ವರದಿಗಳು ಕಾಣಬಹುದು.
ಮಣಿಕಂಠ ಕಾಟನ್ ಜಿನ್ನಿಂಗ್ ಮಿಲ್ ವತಿಯಿಂದ ಉಚಿತ ಹೆಲ್ಮೆಟ್ ವಿತರಣೆ ಉತ್ತಮ ಕಾರ್ಯವಾಗಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಅಗತ್ಯವಿದೆ. ಹೆಲ್ಮೆಟ್ ಪಡೆದುಕೊಂಡ ಪ್ರತಿಯೊಬ್ಬರು ಹತ್ತು ಜನಕ್ಕೆ ಈ ಕುರಿತು ಹೆಲ್ಮೆಟ್ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಕಾಟನ್ ಮಿಲ್ ಮಾಲೀಕರಾದ ಬಿ.ಎ.ಬಸವರಾಜ ಅಧ್ಯಕ್ಷತೆವಹಿಸಿದ್ದರು. ಭೀ.ಗುಡಿ ಪಿಎಸ್ಐ ತಿಪ್ಪಣ್ಣ ರಾಠೋಡ, ಪಿಎಸ್ಐ ಜಯಶ್ರೀ ಉಪಸ್ಥಿತರಿದ್ದರು. ಗುರು ಮಣಿಕಂಠ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ 100 ಹೆಲ್ಮೆಟ್ಗಳನ್ನು ಉಚಿತವಾಗಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಗಳನ್ನು ಕಾಟನ್ ಮಿಲ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.