ಪ್ರಮುಖ ಸುದ್ದಿ
ಅಕ್ರಮ ಹತ್ತಿ ವ್ಯಾಪಾರ ಕೇಂದ್ರಗಳ ಮೇಲೆ ದಾಳಿ ದಂಡ ವಸೂಲಿ
ಯಾದಗಿರಿ: ಜಿಲ್ಲೆಯಲ್ಲಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ರಸ್ತೆ ಬದಿ ವ್ಯಾಪಾರ ನಡೆಸುತ್ತಿರುವ ಹತ್ತಿ ಖರೀದಿ ಕೇಂದ್ರಗಳ ಮೇಲೆ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರ ಕಚೇರಿಯ ತನಿಖಾ ತಂಡದ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ತನಿಖಾ ತಂಡದ ಅಧಿಕಾರಿ ಶಿವಪುತ್ರ ಅಲ್ಲಾಪುರ ಮತ್ತು ನಿರೀಕ್ಷಕ ಅಮರೇಶ ಹೊಸಮನಿ ಇವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಭೀಮರಾಯನಗುಡಿ, ಶಹಾಪುರ, ಹತ್ತಿಗೂಡುರು, ಸುರಪುರ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ಜೇವರ್ಗಿ ರಸ್ತೆ ಬದಿಯಲ್ಲಿ ಪರವಾನಿಗೆ ಇಲ್ಲದೆ ಹತ್ತಿ ವ್ಯಾಪಾರ ಮಾಡುತ್ತಿದ್ದ ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ.
ತೂಕದ ಯಂತ್ರಗಳನ್ನು, ವ್ಹೇಬ್ರಿಡ್ಜಗಳು ಹಾಗೂ ಹತ್ತಿ ಜಿನ್ನಿಂಗ್ ಪ್ಯಾಕ್ಟರಿಯಲ್ಲಿ ಉಪಯೋಗಿಸುತ್ತಿರುವ ವ್ಹೇಬ್ರಿಡ್ಜಗಳನ್ನು ತಪಾಸಣೆ ಮಾಡಿ ಒಟ್ಟು 15 ಮೊಕದ್ದಮೆಗಳನ್ನು ದಾಖಲಿಸಿ 38,500 ರೂ.ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ತನಿಖಾ ದಳ-10 ಸಹಾಯಕ ನಿಯಂತ್ರಕರರು ತಿಳಿಸಿದ್ದಾರೆ.