ಪ್ರಮುಖ ಸುದ್ದಿ

ನಗರಸಭೆ ನೂತನ ಅಧ್ಯಕ್ಷೆ ಕಾಂತಮ್ಮ, ಉಪಾಧ್ಯಕ್ಷರಾಗಿ ಡಾ.ಇಜೇರಿ ಆಯ್ಕೆ

ನೂತನ ಅಧ್ಯಕ್ಷೆ ಕಾಂತಮ್ಮ, ಉಪಾಧ್ಯಕ್ಷರಾಗಿ ಡಾ.ಇಜೇರಿ ಅವಿರೋಧ ಆಯ್ಕೆ

ಯಾದಗಿರಿಃ  ಕಳೆದ ಹದಿನಾಲ್ಕು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲೆಯ ಶಹಾಪುರ ನಗರಸಭೆ  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ಜರುಗಿತು.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಮಹಿಳೆ)ಕ್ಕೆ ಮೀಸಲಿದ್ದ ಕಾರಣ ಇಡಿ ನಗರಸಭೆ ಸದಸ್ಯರಲ್ಲಿ ವಾರ್ಡ್ ನಂ.21ರ ಸದಸ್ಯೆ ಕಾಂತಮ್ಮ ಹಣಮಂತ್ರಾಯ ಏಕೈಕ ಸದಸ್ಯೆಯಾದ ಪರಿಣಾಮ ಅಂತಿಮವಾಗಿ ಅವರೊಬ್ಬರೆ ನಾಮ ಪತ್ರ ಸಲ್ಲಿಸಿದ್ದರು. ಸುಲಭವಾಗಿ ಅವರೇ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಆದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಕಾರಣ ಹಲವಾರು ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದರು. ಕೊನೆ ಗಳಿಗೆಯಲ್ಲಿ ಮಾಜಿ ಸಚಿವ ದರ್ಶನಾಪುರ ಸೂಚನೆ ಮೇರೆಗೆ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ. 3 ರ ಸದಸ್ಯ ಡಾ.ಬಸವರಾಜ ಇಜೇರಿ ನಾಮಪತ್ರ ಸಲ್ಲಿಸಿದರು. ಅವರ ಅನತಿಯಂತೆ ಕೊನೆವರೆಗೂ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಡಾ. ಇಜೇರಿ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಚುನಾವಣೆ ಫಲಿತಾಂಶವನ್ನು ಚುನಾವಣೆ ಅಧಿಕಾರಿ ಹಾಗೂ ಸಹಾಯಕ ಆಯುಕ್ತ ಡಾ.ಜಗಧೀಶ ಕೆ. ನಾಯಕ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

ಶನಿವಾರ ಬೆಳಗ್ಗೆ 11ರೊಳಗೆ ನಾಮಪತ್ರ ಸಲ್ಲಿಕೆಯಾಗಿದ್ದವು. 12 ಗಂಟೆಗೆ ಪರಿಶೀಲನೆ ತದನಂತರ ಮದ್ಯಾಹ್ನ 1 ಗಂಟೆಗೆ ಫಲಿತಾಂಶ ಪ್ರಕಟಿಸಲಾಯಿತು. ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಇಬ್ಬರು ಕಾಂಗ್ರೆಸ್ ಪಕ್ಷದವರಾಗಿದ್ದು, ನಗರಸಭೆಯಲ್ಲಿ ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 16 ಸದಸ್ಯರ ಬಲ ಹೊಂದಿದೆ. ಹೀಗಾಗಿ ನಗರಸಭೆ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿದೆ.

ಮೊದಲನೇ ಅವಧಿಯಲ್ಲಿ 3 ಜನ ಅಧ್ಯಕ್ಷರು.!

ನಗರಸಭೆಯ ಐದು ವರ್ಷದ ಆಡಳಿತಾವಧಿಯಲ್ಲಿ ಒಟ್ಟು ನಾಲ್ಕು ಜನ ಅಧ್ಯಕ್ಷ, 2 ಉಪಾಧ್ಯಕ್ಷರಾಗಿ ಹೊರಹೊಮ್ಮಿರುವುದು ರಾಜಕೀಯ ಹಿತಾಸಕ್ತಿ ಎಂಬುದು ಸಾಬೀತು ಪಡಿಸುತ್ತದೆ.

ಪ್ರತಿ ವರ್ಷಕ್ಕೊಮ್ಮೆ ಅಧ್ಯಕ್ಷರನ್ನಾಗಿ ನೇಮಿಸಿ ಅಧಿಕಾರ ಹಂಚಿಕೆಯಾಗಿರುವದರಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿವೆ ಎನ್ನಬಹುದು. ಮೊದಲನೇ ಅವಧಿಯ 30 ತಿಂಗಳಲ್ಲಿ 10 ತಿಂಗಳಿಗೊಮ್ಮೆ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮೊದಲನೇ ಅಧ್ಯಕ್ಷರಾಗಿ ರಾಯಪ್ಪ ಸಾಲಿಮನಿ, ಎರಡನೇ ಅಧ್ಯಕ್ಷ ಖಾಸಿಂಸಾಬ ಮತ್ತು ಮೂರನೇ ಅಧ್ಯಕ್ಷ ನಾಗಪ್ಪ ತಹಸೀಲ್ದಾರ ಸಾಮಾನ್ಯ ಮೀಸಲಾತಿಯಡಿ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ತರುವಾಯ ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಪಂಗಡ ಸ್ಥಾನ ಮೀಸಲು ಬಂದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ಎರಡನೇ ಅವಧಿ ಸುಮಾರು ಹದಿನೈದು ತಿಂಗಳು ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಜಿಲ್ಲಾಧಿಕಾರಿಗಳ ಆಡಳಿತದಲ್ಲಿಯೇ ಕಾರ್ಯಚಟುವಟಿಕೆಗಳು ನಡೆದಿದ್ದವು.
ಅಂತಿಮವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು, ಶನಿವಾರ ಚುನಾವಣೆ ನಡೆಸಲಾಯಿತು. ಅದೇ ಅಧ್ಯಕ್ಷ ಸ್ಥಾನ ಎಸ್‍ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ವರ್ಗ ಮೀಸಲಿನಡಿ ಚುನಾವಣೆ ನಡೆಯಿತು.

ಕೊನೆಯ ಗಳಿಗೆಯಲ್ಲಿ ನಗರಸಭೆ ಅಧಿಕಾರವಹಿಸಿಕೊಂಡ ನೂತನ ಅಧ್ಯಕ್ಷೆ ಕಾಂತಮ್ಮ, ಉಪಾಧ್ಯಕ್ಷ ಡಾ.ಇಜೇರಿ ವಿಳಂಬ ನೀತಿ ಅನುಸರಿಸದೆ ನಗರಾಭಿವೃದ್ಧಿಗೆ ಶ್ರಮಿಸಲಿ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ಮೆರವಣಿಗೆಃ ನೂತನ ಅಧ್ಯಕ್ಷೆ ಕಾಂತಮ್ಮ ಹಾಗೂ ಉಪಾಧ್ಯಕ್ಷ ಡಾ.ಇಜೇರಿಯವರನ್ನು ನಗರಸಭೆ ಸದಸ್ಯರು ಆಯ ವಾರ್ಡ್‍ನ ನಿವಾಸಿಗಳು ಹೂವಿನಹಾರ ಹಾಕಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ನಗರಸಭೆಯಿಂದ ಡಾ.ಇಜೇರಿಯವರನ್ನು ಅವರ ಮನೆವರೆಗೂ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಮಾರ್ಗ ಮಧ್ಯೆ ಸಾಕಷ್ಟು ಜನರು ಅಭಿನಂದನೆ ಸಲ್ಲಿಸಿದರು. ಅದೇ ರೀತಿ ನೂತನ ಅಧ್ಯಕ್ಷೆ ಕಾಂತಮ್ಮ ಇವರನ್ನು ಮೆರವಣಿಗೆ ಮೂಲಕ ಹಳಿಸಗರ ಅವರ ಮನೆವರೆಗೆ ಮೆರವಣಿಗೆ ಮೂಲಕ ತೆರಳಿದರು. ಕಾಂಗ್ರೆಸ್ ಕಾರ್ಯಕರ್ತರು ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಬಸವೇಶ್ವರ ವೃತ್ತದಲ್ಲಿ ಪ್ರತಿಮೆಗೆ ಹೂವಿನ ಮಾಲೆ ಹಾಕಿ ನಮಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Related Articles

Leave a Reply

Your email address will not be published. Required fields are marked *

Back to top button