ಎಸ್‍ಸಿಪಿ/ಟಿಎಸ್‍ಪಿ ಯೋಜನೆ ಪೂರ್ಣವಾಗದಿದ್ದರೆ ಅಧಿಕಾರಿಗಳಿಗೆ ಜೈಲುಃ ಸಚಿವ ಪ್ರಿಯಾಂಕ್ ಖರ್ಗೆ
ಯಾದಗಿರಿ: ವಿವಿಧ ಇಲಾಖೆಗಳಲ್ಲಿನ ಎಸ್‍ಸಿಪಿ/ಟಿಎಸ್‍ಪಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ಯೋಜನೆಯ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಅನುದಾನ ಬಳಸಿಕೊಂಡು ಮುಗಿಸದಿದ್ದರೆ ಅಂತಹ ಅಧಿಕಾರಿಗಳು ಕಾನೂನಿನ ಪ್ರಕಾರ ಜೈಲಿಗೆ ಹೋಗಬೇಕಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2014-15 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುರುಮಠಕಲ್‍ನಲ್ಲಿ ಎಸ್‍ಸಿಪಿ/ಟಿಎಸ್‍ಪಿ ಯೋಜನೆಡಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‍ಐಡಿಎಲ್) ಮತ್ತು ನಿರ್ಮಿತಿ ಕೇಂದ್ರ ಕೈಗೊಂಡಿರುವ ಯೋಜನೆಗಳ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಎಸ್‍ಸಿಪಿ/ಟಿಎಸ್‍ಪಿ ಯೋಜನೆಗಳ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಮುಂತಾದ ಇಲಾಖೆಗಳು ಬಳಸಿಕೊಂಡು ಗುರಿ ಸಾಧಿಸುವ ಮೂಲಕ ನಿಗದಿತ ಸಮಯದಲ್ಲಿ ಫಲಾನುಭವಿಗಳಿಗೆ ಯೋಜನೆಗಳ ಲಾಭ ಸಮರ್ಪಕವಾಗಿ ತಲುಪುವಂತಾಗಬೇಕು ಎಂದು ಸೂಚಿಸಿದರು.
2015-16ನೇ ಸಾಲಿನ ನಗರಾಭಿವೃದ್ಧಿ ಕೋಶದ ಅಡಿಯಲ್ಲಿನ ನನೆಗುದಿಗೆ ಬಿದ್ದ ವಿವಿಧ ಕಾಮಗಾರಿಗಳನ್ನು ಆದಷ್ಟು ತುರ್ತಾಗಿ ಮುಗಿಸಬೇಕು ಎಂದು ಅವರು ತಾಕೀತು ಮಾಡಿದರು.ಮೂರು ವರ್ಷಗಳಾದರೂ ವಿವಿಧ ಕಾಮಗಾರಿಗಳೂ ಪೂರ್ಣಗೊಳ್ಳದೆ ಬಾಕಿ ಉಳಿದಿವೆ. ಇದಕ್ಕೆ ಕಾರಣವೇನು, ಏನು ಮಾಡುತ್ತಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು,
ಮಾರ್ಚ್ ಅಂತ್ಯದೊಳಗೆ ಪ್ರತಿಯೊಂದು ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಭಿವೃದ್ಧಿ ಪಡಿಸಬೇಕಾಗಿದೆ. ಟೆಂಡರ್ ಕರೆಯದೆ ಬಾಕಿ ಇರುವ ಕಾಮಗಾರಿಗಳಿಗೆ ಅತೀ ಶೀಘ್ರವೇ ಟೆಂಡರ್ ಕರೆಯಬೇಕು ಎಂದು ತಿಳಿಸಿದರು.
ನಗರಸಭೆ ಮತ್ತು ಪುರಸಭೆಗಳಲ್ಲಿ 14 ನೇ ಹಣಕಾಸು ಯೋಜನೆ ಹಾಗೂ ಎಸ್.ಎಫ್.ಸಿ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಪ್ರಗತಿ ಕಡಿಮೆ ಇದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕಾಗಿಸಬೇಕು.
ಹೊಸ ಕಾಮಗಾರಿಗಳಿಗಾಗಿ ಪ್ರಸ್ತಾವನೆಯನ್ನು ಶೀಘ್ರದಲ್ಲಿಯೇ ಸಲ್ಲಿಸಿ ಎಂದು ಅವರು ತಿಳಿಸಿದರು.
ಪ್ರತಿಮೆಗಳಿಗೆ 70 ಲಕ್ಷ ಅನುದಾನ ಬಳಸಿಲ್ಲ ಖರ್ಗೆ ಗರಂ
2010-11 ನೇ ಸಾಲಿನಲ್ಲಿ ಯಾದಗಿರಿ ನಗರದಲ್ಲಿ ವಿವಿಧ ನಾಯಕರ ಪ್ರತಿಮೆ ಸ್ಥಾಪನೆ, ಅಥವಾ ಸ್ಥಾಪಿತ ಪ್ರತಿಮೆಗಳ ಆವರಣ ಸುಂದರೀಕರಣಕ್ಕಾಗಿ 60 ರಿಂದ 70 ಲಕ್ಷ ರೂ.ಅನುದಾನ ನೀಡಲಾಗಿದ್ದು, ಸದ್ಬಳಿಕೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಅನುದಾನ ಬಂದಿರುವದನ್ನು ಗಮನಿಸಿ ಆ ಪ್ರಕಾರ ಕೆಲಸ ಮಾಡಬೇಕು. ಇಲ್ಲಿಯವರೆಗೆ ಅನುದಾನ ಏಕೆ ಬಳಕೆ ಮಾಡಿಲ್ಲ.? ವಿಳಂಬಕ್ಕೆ ಕಾರಣವೇನು,? ಈ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ನಗರಸಭೆ ಆಯುಕ್ತರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳ ಬಗ್ಗೆ ಸಚಿವರು ಮಾಹಿತಿ ಕೇಳಿದಾಗ, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ರೈತ ಫಲಾನುಭವಿಗಳ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಒದಗಿಸದಿರುವುದರಿಂದ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರು, ಅಗತ್ಯ ವಿದ್ಯುತ್ ಪೂರೈಕೆ ಮಾಡುವಂತೆ ಜೆಸ್ಕಾಂ ಇಲಾಖೆ ಅಧಿಕಾರಿಗೆ ಸೂಚಿಸಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ ಪದವಿ ಪೂರ್ವ ಕಾಲೇಜು ಕಟ್ಟಡಗಳನ್ನು ಅತೀ ಶೀಘ್ರದಲ್ಲಿ ಮುಗಿಸಿ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಬೇಕು ಎಂದರು.
ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತಾ ಅವರು ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಭಾಗದಲ್ಲಿ ಬಹಳಷ್ಟು ನಕಲು(ಕಾಪಿ) ನಡೆಯುತ್ತಿದ್ದು, ಇದನ್ನು ತಡೆಗಟ್ಟಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ ಅವರು, ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ತುರ್ತು ಮುಗಿಸಬೇಕಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ 10 ರೈತ ಸಂಪರ್ಕ ಕಟ್ಟಡ ಕಾಮಗಾರಿಗಳ ಕೈಗೆತ್ತಿಕೊಳ್ಳಲಾಗಿದೆ. ಇನ್ನೂ ಪೂರ್ಣಗೊಂಡಿಲ್ಲ. ಕಟ್ಟಡ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಮುಗಿಸಬೇಕು ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಡಾ:ಚೇತನಾ ಪಾಟೀಲ ಅವರಿಗೆ ಸೂಚಿಸಿದರು.
ಅಲ್ಲದೆ ಜಿಲ್ಲೆಯಲ್ಲಿ ರೈತರು ಬೆಳೆದ ತೊಗರಿ ಧಾನ್ಯಗಳನ್ನು ಖರೀದಿಸಲು ಈಗಾಗಲೇ 32 ತೊಗರಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರಗಳಿಗೆ ಖಾಲಿ ಚೀಲಗಳ ಸಮಸ್ಯೆ ಇದ್ದು, ಪ್ರತಿಯೊಂದು ತೊಗರಿ ಕೇಂದ್ರಗಳಿಗೆ 20 ಸಾವಿರ ಖಾಲಿ ಚೀಲಗಳನ್ನು ರವಾನಿಸಲಾಗಿದೆ. ಬೆಳೆ ದೃಢೀಕರಣ ಪತ್ರವನ್ನು ಪಡೆಯಲು ವಿಳಂಬವಾಗುತ್ತಿದ್ದು, ಇದನ್ನು ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಕೇಳಿದ ಪ್ರಶ್ನೆಗೆ ವಿವರಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪೂರ, ಶಾಸಕ ರಾಜಾ ವೆಂಕಟಪ್ಪನಾಯಕ, ಶಾಸಕ ಗುರುಪಾಟೀಲ ಶಿರವಾಳ, ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅವಿನಾಶ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೇರಿದಂತೆ ಇತರರಿದ್ದರು.