ಶಹಾಪುರಃ ಬಿಇಓ ಇನಾಂದಾರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು
ಬಿಇಓ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು
ಯಾದಗಿರಿಃ ಶಾಲೆಯೊಂದರ ಆರ್ಟಿಇ ಹಣ ಸಂದಾಯಕ್ಕೆ ಶಾಲಾ ಮುಖ್ಯಸ್ಥರಿಂದ 10 ಸಾವಿರ ಲಂಚ ಬೇಡಿಕೆ ಇಟ್ಟಿದ್ದು, ಅಲ್ಲದೆ ಜಾತಿ ನಿಂದನೆ ಮಾಡಿದ ಆರೋಪದಡಿ ನಗರ ಠಾಣೆಯಲ್ಲಿ ಬಿಇಓ ವೆಂಕಯ್ಯ ಇನಾಂದಾರ ವಿರುದ್ಧ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಜಿಲ್ಲೆಯ ಯಾದಗಿರಿ ತಾಲೂಕಿನ ಗಂಗನಾಳ ಗ್ರಾಮದ ಖಾಸಗಿ ಪ್ರಜ್ಞಾ ಕಿರಿಯ ಪ್ರಾಥಮಿಕ ಶಾಲೆಗೆ ಸಂಬಂಧಿಸಿದ 1 ಲಕ್ಷ 50 ಸಾವಿರ ರೂ. ಆರ್ಟಿಇ ಹಣ ಸಂದಾಯ ಮಾಡಲು ಬಿಇಓ ಅವರು 10 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಹೊನ್ನಪ್ಪ ಹೊಸಮನಿ ಅವರಿಗೆ ಸಂಬಂಧಿಸಿದ ಶಾಲೆ ಇದಾಗಿದ್ದು, ಬಿಇಓ ಅವರನ್ನು ಸಂಪರ್ಕಿಸಿ ಲಂಚದ ಹಣ ನೀಡಲು ಆಗುವುದಿಲ್ಲ. ನಾವೇಕೆ ಲಂಚ ನೀಡಬೇಕೆಂದಾಗ ಕೆಂಡಮಂಡಲವಾದ ಬಿಇಓ ಬಾಯಿಗೆ ಬಂದಂತೆ ಜಾತಿ ಹೆಸರಿನ ಮೇಲೆ ನಿಂದನೆ ಮಾಡಿದ್ದಾರೆ ಎಂದು ದೂರುದಾರ ಹೊನ್ನಪ್ಪ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಇನಾಂದರ ಮೇಲೆ ಇದು ಎರಡನೇ ಪ್ರಕರಣ.!
ಈಗಾಗಲೇ ಬಿಇಓ ಇನಾಂದಾರ ಮೇಲೆ ಈ ಮೊದಲೊಂದು ಜಾತಿ ನಿಂದನೆ ಪ್ರಕರಣ ನ್ಯಾಯಾಲಯದಲ್ಲಿ ನಡೆದಿದೆ. ಆಗ ಶಿಕ್ಷಕಿಯೋರ್ವಳಿಗೆ ಜಾತಿ ನಿಂದನೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಆಗ ಗೋಗಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಗಂಗನಾಳ ಪ್ರಕರಣ ಶಹಾಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಎರಡನೇ ಪ್ರಕಣ ವಾಗಿದೆ.