ಆ ಆಧ್ಯಾತ್ಮ ಯೋಧನ ಗುರಿವಿಗಿತ್ತು ಅನಿರ್ವಚನಿಯ ಯೋಗ ಸಿದ್ಧಿ.! ವೀರ ಸನ್ಯಾಸಿಗೆ ಸಿಕ್ತು ಆ ಶಕ್ತಿ.!
![](https://vinayavani.com/wp-content/uploads/2021/04/newslater-image.png)
ವೀರ ಸನ್ಯಾಸಿ ಆಧ್ಯಾತ್ಮ ಯೋಧನಿಗೆ ನಮೋ..ನಮಃ
ಎಲ್ಲಾ ಶಕ್ತಿಯು ನಿನ್ನೊಳಗಡೆ ಅಡಗಿದೆ. ನಂಬಿಕೆ ವಿಶ್ವಾಸವಿರಲಿ. ನೀನು ದುರ್ಬಲನೆಂದು ಎಂದಿಗೂ ಭಾವಿಸದಿರು, ಎದ್ದು ನಿಲ್ಲು, ನಿನ್ನೊಳಗಿರುವ ದಿವ್ಯತೆಯನ್ನು ಜಾಗೃತಗೊಳಿಸಿಕೊ ಎಂಬ ಸ್ಪೂರ್ತಿಯ ಮಾತುಗಳನ್ನು ಕೇಳಿದಾಗಲೆಲ್ಲಾ ನಮಗೆ ನೆನೆಪಾಗುವುದು ಸ್ಪೂರ್ತಿಯ ಸೆಲೆ ಸ್ವಾಮಿ ವಿವೇಕಾನಂದರು.
ಸ್ವಾಮಿ ವಿವೇಕಾನಂದರು ಈ ಪುಣ್ಯ ಭೂಮಿಯಲ್ಲಿ ಮಹಾಪುರುಷರಾಗಿ ಅವತರಿಸಿ ಇಂದಿಗೆ 153 ನೇ ವರ್ಷ ಆಚರಣೆಯಲ್ಲಿದ್ದೇವೆ. ಅವರ ಜನ್ಮದ ದಿನದ ನಿಮಿತ್ತ ಈ ವಿಶೇಷ ಲೇಖನ.
ಜೀವನ: ವಿವೇಕರು ಕ್ರಿ.ಶ. 1863ರ ಜ.12 ರಂದು ಕಲ್ಕತ್ತಾದಲ್ಲಿ ಪ್ರಖ್ಯಾತ ವಕೀಲರಾದ ವಿಶ್ವನಾಥದತ್ತ ಹಾಗೂ ಭುವನೇಶ್ವರಿ ದೇವಿಯ ಸುಪುತ್ರನಾಗಿ ಜನಸಿದರು. ಬಾಲಕನಿಗೆ ‘ನರೇಂದ್ರನಾಥ’ ಎಂದು ನಾಮಕರಣ ಮಾಡಲಾಯಿತು.
ಬೆಳೆಯುವ ಸಿರಿ ಮೊಳಕೆಯಲಿ ಎನ್ನುವಂತೆ ಚಿಕ್ಕವನಿದ್ದಾಗ ಗೆಳೆಯರೊಂದಿಗೆ ಹೊರಗಡೆ ಹೋದಾಗ ಅವರು ಆಟವಾಡುತ್ತಿದ್ದರೆ, ನರೇಂದ್ರ ಮಾತ್ರ ಧ್ಯಾನಕ್ಕೆ ಕೂಡುವ ಆಟವಾಡುತ್ತಿದ್ದ ಇವರ ಮನೆಗೆ ಸಾಧು, ಸಂತರು ಬಂದಾಗ, ಮನೆಯಲ್ಲಿ ಇದ್ದುದ್ದೆಲ್ಲ ಅವರಿಗೆ ದಾನವಾಗಿ ಕೊಡುತ್ತಿದ್ದ. ಬಾಲ್ಯದಲ್ಲಿಯೇ ನರೇಂದ್ರನಲ್ಲಿ ಧೈರ್ಯ, ದಯೆ, ಕರುಣೆ, ದೇಶಪ್ರೇಮ, ಆಧ್ಯಾತ್ಮ ಒಲವು ಗೊಚರಿಸುತ್ತಿದ್ದವು.
ನರೇಂದ್ರ ದೊಡ್ಡವನಾದಂತೆ ಯೋಗ, ಧ್ಯಾನ, ವ್ಯಾಯಾಮ ರೂಢಿಸಿಕೊಂಡು ಸದೃಢ ವ್ಯಕ್ತಿಯಾದನು. ಇಂಗ್ಲೀಷ, ಸಂಸ್ಕøತ ಭಾಷೆಗಳಲ್ಲಿ ಹಿಡಿತ ಸಾಧಿಸಿದ. ಸಂಗೀತ, ಕಲೆ, ಸಾಹಿತ್ಯ, ಅಭ್ಯಸಿಸಿದ, ಸಂಗೀತದಲ್ಲಿ ಕೇಳಿದವರೆಲ್ಲ ಮಂತ್ರ ಮುಗ್ಧರಾಗುವಂತೆ ಸುಶ್ರಾವ್ಯವಾಗಿ ಹಾಡುತ್ತಿದ್ದ.
ನರೇಂದ್ರನು 1890ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಕೂಡಾ ಅವನ ಮನಸ್ಸು ದೇವರ ಅಸ್ತಿತ್ವ, ಹುಟ್ಟು ಸಾವಿನ ರಹಸ್ಯ, ಅಗೋಚರ ಶಕ್ತಿಯನ್ನೇ ಹುಡುಕುತ್ತಿತ್ತು. ಅನೇಕ ಜನ ಧರ್ಮ ಗುರುಗಳನ್ನು ಭೇಟಿ ಮಾಡಿದರೂ, ಅವನ ಮನಸ್ಸಿಗೆ ಸಮಧಾನ ಆಗುವಂತಹ ಉತ್ತರ ಸಿಗಲಿಲ್ಲ.
ಹೀಗೆ ಒಂದು ದಿನ ಇಂಗ್ಲೀಷ್ ಪ್ರೋಫೆಸರ್ ಒಬ್ಬರು ತರಗತಿಯಲ್ಲಿ ಅನಿರ್ವಚನಿಯ ಮಹಾವಸ್ಥೆ ಬಗ್ಗೆ ಹೇಳುತ್ತಿದ್ದ ಸಂದರ್ಭದಲ್ಲಿ ದಕ್ಷಿಣೇಶ್ವರರದ ಶ್ರೀ ರಾಮಕೃಷ್ಣ ಪರಮಹಂಸರಿಗೆ ಈ ಯೋಗ ಸಿದ್ದಿಸಿದೆ ಎಂದರು.
ನರೇಂದ್ರನಿಗೆ ಪರಮಹಂಸರ ಕಾಣುವ ಹಂಬಲ ಹೆಚ್ಚಾಯಿತು. ಯೋಗಾಯೋಗ ಅನ್ನುವಂತೆ ನರೇಂದ್ರನ ಗೆಳೆಯನಾದ ಸುರೇಂದ್ರನಾಥನ ಮನೆಯಲ್ಲಿ ಒಂದು ಮಂಗಲ ಕಾರ್ಯಕ್ಕೆ 1881ರಲ್ಲಿ ಪರಮಹಂಸರು ಬರುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ನರೇಂದ್ರನ ಸಂಗೀತ ಕಳೆಯನ್ನು ಕಂಡು ಪರಮಹಂಸರು ಅವನನ್ನು ದಕ್ಷಿಣೇಶ್ವರಕ್ಕೆ ಆಹ್ವಾನಿಸುತ್ತಾರೆ.
ಮನೆಯಲ್ಲಿನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿ, ನರೇಂದ್ರ 1882ರಲ್ಲಿ ದಕ್ಷಿಣೇಶ್ವರಕ್ಕೆ ಹೋದ. ನರೇಂದ್ರನನ್ನು ಬರಮಾಡಿಕೊಂಡ ಪರಮಹಂಸರು ಹಾಡಲು ಕೋರಿದರು. ನರೇಂದ್ರ ಹಾಡುತ್ತಿದ್ದಂತೆ ಸಮಾಧಿ ಸ್ಥಿತಿಗೆ ತಲುಪಿದ ಪರಮಹಂಸರು ನಂತರ ಒಮ್ಮೆಲೇ ಎಚ್ಚರಗೊಂಡ ಅವರು, ನರೇಂದ್ರನನ್ನು ಕೋಣೆಯೊಳಗೆ ಕರೆದುಕೊಂಡು ಹೋದರು.
ನಂತರ ಅವರು ನನ್ನನ್ನು ತುಂಬಾ ಕಾಯಿಸಿದೆ, ಜನರ ಕಲ್ಯಾಣಕ್ಕಾಗಿ ಅವತರಿಸಿದ ಮಹಾಪುರುಷ ನೀನು ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದರು. ನಾನು ದೇವರನ್ನು ಕಂಡಿದ್ದೇನೆ ನಿನಗೂ ತೋರುಸುತ್ತೇನೆ ಎಂದರು. ಇವರ ವರ್ತನೆಯಿಂದ ಆಶ್ಚರ್ಯಗೊಂಡ ನರೇಂದ್ರನಾಥ ತುಂಬಾ ಗೊಂದಲಕ್ಕೊಳಗಾದ.
ಪರಮಹಂಸರನ್ನು ಭೇಟಿ ಆದಾಗಲೆಲ್ಲಾ ಒದೊಂದು ಹೊಸ ಅನುಭವ ಆಗತೊಡಗಿತ್ತು. ಅವರ ಸ್ಪರ್ಶದಿಂದ ವಿಚಿತ್ರ ರಹಸ್ಯ ಅನುಭವ ಆಯಿತು. ಇದರಿಂದ ವೈರಾಗ್ಯ ಬೆಳೆದು ಸನ್ಯಾಸದ ಕಡೆ ತೀವ್ರ ಒಲವು ಬೆಳೆಯಲಾರಂಭಿಸಿತು.
1884 ರಲ್ಲಿ ಬಿ.ಎ. ಪರೀಕ್ಷೆ ಮುಗಿದು ರಜಾ ದಿನಗಳಲ್ಲಿ ಗೆಳೆಯರ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ತನ್ನ ತಂದೆ ವಿಶ್ವನಾಥ ದತ್ತರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬಂದಪ್ಪಳಿಸಿತು. ನರೇಂದ್ರ ತೀವ್ರ ಆಘಾತಕೊಳಗಾದ. ಇದರಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲಿಕಿ ಒಪ್ಪತ್ತು ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಬಂತು.
ಹಿರಿಯ ಮಗನಾದ ನರೇಂದ್ರ ಕಛೇರಿಯಿಂದ ಕಛೇರಿಗೆ ಅಲೆದರು ಯಾವುದೇ ನೌಕರಿ ಸಿಗಲಿಲ್ಲ. ಇದರಿಂದ ನಾಸ್ತಿಕನಂತೆ ವರ್ತಿಸಲು ಪ್ರಾರಂಭಿಸಿದ. ದಿಕ್ಕು ಕಾಣದೆ ಮತ್ತೆ ದಕ್ಷಿಣೇಶ್ವರಕ್ಕೆ ಬಂದ. ಪರಮಹಂಸರ ಕೃಪೆಯಿಂದ ಶಿಕ್ಷಕನ ಕೆಲಸ ಸಿಕ್ಕಿತ್ತು.
ಕಾಲವೇ ಎಲ್ಲವನ್ನು ಮರೆಸುತ್ತೆ ಎನ್ನುವಂತೆ ಎಲ್ಲಾ ಸಂಕಷ್ಟಗಳು ದೂರವಾದವು, ಗುರುಗಳಿಂದ ಸನ್ಯಾಸ ಸ್ವಿಕರಿಸಿದ್ಧ ನರೇಂದ್ರ ನಿರಂತರವಾಗಿ ಧ್ಯಾನದಲ್ಲಿ ತೊಡಗಿದ. ಆದರೆ ಇನ್ನೊಂದು ಆಘಾತ ಕಾದಿತ್ತು ಅದೇನೆಂದರೆ 1886 ರಲ್ಲಿ ಗುರುಪರಮಹಂಸರಿಗೆ ಗಂಟಲು ಬೇನೆ ರೋಗ ತೀವ್ರ ಉಲ್ಬಣಿಸಿತ್ತು. ಪರಮಹಂಸರು ನರೇಂದ್ರನಿಗೆ ತನ್ನೆಲ್ಲ ಶಕ್ತಿಯನ್ನು ಧಾರೆಯರೆದೂ, ದೇವರ ಅನುಭವನ್ನು ಕರುಣಿಸಿ ಇಹಲೋಕ ತ್ಯಜಿಸಿದರು.
ಇವರ ನೆನಪಿನಲ್ಲಿ “ಆತ್ಮನೋ ಮೋಕ್ಷಾರ್ಥಂ ಜಗದ್ದಿ ತಾಯಚ” ಎಂಬ ಮಂತ್ರ ಉಪದೇಶಿಸಿ 1886 ರಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಮಿಶನ್ ಸ್ಥಾಪಿಸಿದರು.
1888ರಲ್ಲಿ ಲೋಕ ಕಲ್ಯಾಣಕ್ಕಾಗಿ ನರೇಂದ್ರನು ಪರಿವ್ರಾಜಕ ವೇಷಧರಿಸಿ, ದಂಡ ಕಮಂಡಲ ಧಾರಿಯಾಗಿ ‘ಸ್ವಾಮಿ ವಿವೇಕಾನಂದ’ ಹೆಸರಿನಿಂದ ವರಹ ನಗರದಿಂದ ಯಾತ್ರೆ ಆರಂಭಿಸಿದ.
ಸ್ವಾಮಿ ವಿವೇಕಾನಂದರು ಏಕಾಂಗಿಯಾಗಿ ಇಡೀ ಭರತಖಂಡದ ಮಾಹಾ ಯಾತ್ರೆಗೆ ಹೊರಟರು. ಇವರ ತೇಜಸ್ಸು ತುಂಬಿದ ಮುಖ, ಹೊಳೆಯುವ ಕಣ್ಣು, ನೀಳಕಾಯ, ಹಾಗೂ ವೀರ ಸನ್ಯಾಸಿಯ ಮಾತುಗಳಿಂದ ಇಡೀ ದೇಶ ಪ್ರಭಾವಕ್ಕೊಳಾಗಿಯಿತು. ಕಾಲ್ನಡಿಗೆಯಿಂದಲೇ ಇಡೀ ದೇಶ ಸಂಚರಿಸಿ ಭರತ ಖಂಡದ ಹೃದಯ ಅಂತರಾಳ ಅರೆತರು.
1893 ರಲ್ಲಿ ಕನ್ಯಾಕುಮಾರಿಗೆ ತಲುಪಿದರು. ಇವರು ಹೋದಲೆಲ್ಲಾ ಇವರ ವಿಚಾರಗಳನ್ನು ಆಲಿಸಲು ಸಾವಿರಾರು ಜನ ಸೇರುತ್ತಿದ್ದರು. ಅನೇಕ ಜನ ಸಂನ್ಯಾಸ ಸ್ವೀಕರಿಸಿ ಶಿಷ್ಯರಾದರು.
ಐತಿಹಾಸಿಕ ಭಾಷಣ: ಚಿಕಾಗೋದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಕ್ಕೆ ಹೊರಡಲು ಸನ್ನಧರಾದರು. ಅವರನ್ನು 1893 ರ ಮೇ 31 ರಂದು ಮುಂಬಯಿಂದ ಅನೇಕ ಜನ ಅಭಿಮಾನಿಗಳು ಹಾಗೂ ಶಿಷ್ಯರು ಬಿಳ್ಕೂಟ್ಟರು. ಇದರಿಂದ ಕಡಲಾಚೆಗೆ ಹೋದ ಮೊದಲ ಆಧ್ಯಾತ್ಮ ಯುಗ ಪುರುಷರಾದರು.
ಚಿಕಾಗೋಗೆ ತಲುಪಿದಾಗ ಕಾರ್ಯಕ್ರಮಕ್ಕೆ ಇನ್ನೂ 3 ತಿಂಗಳ ಸಮಯವಿತ್ತು. ಆವಾಗ ಎದುರಾದ ಅನೇಕ ಸಂಕಷ್ಟಗಳನ್ನು ಎದುರಿಸಿದರು. ಆದರೆ ಆ ಐತಿಹಾಸಿಕ ದಿನ ಬಂದೇ ಬಿಟ್ಟಿತ್ತು. ಅದು 1893 ರ ಸೆಪ್ಟೆಂಬರ್ 11 ರ ಪವಿತ್ರ ಸೋಮವಾರ. ಆ ಭವ್ಯ ಸಮಾರಂಭದಲ್ಲಿ ಅನೇಕ ಜನ ಜಗತ್ತಿನ ಪ್ರಸಿದ್ದ ಧರ್ಮ ಗುರುಗಳು ಪಾಲ್ಗೊಂಡಿದ್ದರು. ಎಲ್ಲರೂ ತಾವು ಬರೆದುಕೊಂಡು ಬಂದಿದ್ದ ಭಾಷಣ ಓದಿದರು. ಕೊನೆಯದಾಗಿ ಕೆಲವೇ ನಿಮಿಷ ವಿವೇಕಾನಂದರಿಗೆ ಮೀಸಲಾಗಿತ್ತು.
ದೃಢÀÀಕಾಯದ ವಿವೇಕಾನಂದರು ಎದ್ದು ನಿಂತರು. ಒಂದು ಸಾರಿ ಸಮಸ್ತ ಜನಸ್ತೋಮದ ಕಡೆ ಕಣ್ಣು ಹಾಯಿಸಿದರು. ಸರಸ್ವತಿ ದೇವಿ ಹಾಗೂ ಗುರುದೇವ ಪರಮಹಂಸರÀನ್ನು ಸ್ಮರಿಸಿದರು. ಅವರಲ್ಲಿ ಯಾವುದೋ ಒಂದು ಅದ್ಭತ ಶಕ್ತಿ ಉತ್ಪತ್ತಿಯಾಯಿತು.
ನಂತರ ಅವರು ‘ಅಮೇರಿಕಾ ದೇಶದ ನನ್ನ ಸಹೋದರ, ಸಹೋದರಿಯರೇ’ ಎಂದು ಭಾಷಣ ಆರಂಭಿಸಿದರು. ಆ ಶಬ್ದದಿಂದ ರೋಮಾಂಚಿತರಾದ ಸಾವಿರಾರು ಜನ ಸಭಿಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಜನರ ಕಂಪನದಿಂದ ಸಭೆ ಕರಡಾತನ ಮುಟ್ಟಿತ್ತು. ವಿವೇಕಾನಂದರು ಒಂದು ಕ್ಷಣ ಸುಮ್ಮನೆ ನಿಂತರು. ಇವರನ್ನು ವ್ಯಂಗ್ಯಾ ಮಾಡಿದ ಇತರೆ ಧರ್ಮ ಗುರುಗಳು ಮೂಕವಿಸ್ಮಿತರಾದರು.
ಸಂಸ್ಕøತ ಶ್ಲೋಕಗಳನ್ನು ಹಾಗೂ ಭಾರತ ಸಂಸ್ಕøತಿಯ ಪ್ರತಿಕವಾದ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಹಾಗೂ ಧರ್ಮ ಸಮನ್ವಯತೆಯನ್ನು ಇಡೀ ಜಗತ್ತಿಗೆ ಸಾರಿದರು. ಸಭಿಕರ ಬೇಡಿಕೆಯಂತೆ ಆಯೋಜಕರು ವಿವೇಕಾನಂದರನ್ನು ವಿನಂತಿಸಿಕೊಂಡು ಮತ್ತೇ ಉಪನ್ಯಾಸ ಕೊಡಿಸಿದರು. ಮರು ದಿನ ಪತ್ರಿಕೆಯ ತುಂಬಾ ಇವರದೇ ಸುದ್ದಿ ಅಮೇರಿಕಾದಲೆಲ್ಲಾ ಇವರದೇ ಮಾತು. ಇವರಿಗೆ ನೂರಾರು ಜನ ಶಿಷ್ಯರಾದರು.
ಇಡೀ ಯುರೋಪ ಯಾತ್ರೆಯ ನಂತರ 1897 ರ ಜನವರಿ 15 ರಂದು ಮಾತೃಭೂಮಿಗೆ ಮರಳಿದರು. ಸಾವಿರಾರು ಜನ ಇವರನ್ನು ಸ್ವಾಗತಿಸಿದರು. ಈ ಪವಿತ್ರ ಮಣ್ಣನ್ನು ಒಮ್ಮೆ ಭಸ್ಮದಂತೆ ಹಣೆಗೆ ಒತ್ತಿಕೊಂಡರು. ನಂತರ ರಾಮಕೃಷ್ಣ ಮಿಶನ್ನಿಂದ ಅನೇಕ ಸಮಾಜ ಸೇವಾ ಕೆಲಸಗಳನ್ನು ಹಾಗೂ ಉಪನ್ಯಾಸಗಳನ್ನು ಮಾಡಿದರು.
ವಿವೇಕಾನಂದರು ವೈದ್ಯರ ಹಾಗೂ ಶಿಷ್ಯರ ವಿನಂತಿಯನ್ನು ಲೆಕ್ಕಿಸದೇ ವಿಶ್ರಾಂತಿ ಇಲ್ಲದಂತೆ ನಿರಂತರವಾಗಿ ಕೆಲಸದಲ್ಲಿ ತೊಡಗಿದ್ದರು. ಇವರ ದೇಹ ಕ್ಷಿಣಿಸಿತ್ತು. 1902 ರ ಜುಲೈ 4 ರಂದು ವಿವೇಕಾನಂದರ ಮುಖ ಒಂದು ಅದ್ಭುತ ಕಾಂತಿಯಿಂದ ಹೊಳೆಯುತ್ತಿತ್ತು ಅಂದು ಅವರು ಪೂಜೆ, ಧ್ಯಾನ ಮುಗಿಸಿ, ಬೇಲೂರು ಮಠದಲ್ಲಿ ತಮ್ಮ ಲೋಕಯಾತ್ರೆ ಮುಗಿಸಿದರು.
ಜೀವನ ಸಂದೇಶ: ‘ನೀವು ಅಮೃತ ಪುತ್ರರು, ನಿಮ್ಮ ಸೃಷ್ಠಿಕರ್ತರು ನೀವೇ, ನಿಮ್ಮೊಳಗೆ ಅದಮ್ಯ ಶಕ್ತಿ ಅಡಗಿದೆ, ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’, ‘ಬಡವರ ಸೇವೆಯ ನಿಜವಾದ ಸೇವೆ,’ ‘ಸತ್ಯ, ಪವಿತ್ರತೆ , ಮತ್ತು ನಿಸ್ವಾರ್ಥತೆಗಳ ಕವಚ ತೊಟ್ಟವನಿಗೆ ಇಡೀ ವಿಶ್ವವೇ ತಿರುಗಿ ಬಿದ್ದರೂ ಅದನ್ನವನೂ ಏಕಾಂಗಿಯಾಗಿ ಎದುರಿಸಬಲ್ಲ,’ ‘ಯಾರು ಪರಿಶುದ್ಧನಾಗಿರುವನೋ ಮತ್ತು ಪರಾಕ್ರಮಿಯಾಗಿರುವನೋ ಅವನು ಪರಮಾದ್ಭುತ ಕಾರ್ಯಗಳನ್ನು ಮಾಡುತ್ತಾನೆ,’ ‘ಭಾರತವೇ ನನ್ನ ಬಾಲ್ಯದ ತೊಟ್ಟಿಲು, ಯೌವ್ವನದ ಉದ್ಯಾನ, ವೃದ್ಧ್ಯಾಪದ ವಾರಣಾಸಿ,’ ಹೀಗೆ ವಿವೇಕಾನಂದರು ಅನೇಕ ವಿಚಾರಗಳನ್ನು ತಿಳಿಸಿದ್ದಾರೆ.
ಇವರ ಸ್ಪೂರ್ತಿಯ ಕಿಡಿಗಳು ಇಂದು ನಮ್ಮಲ್ಲಿ ಜ್ಯೋತಿಯಾಗಿ ಪ್ರಜ್ವಲಿಸಬೇಕಾಗಿದೆ. ನಮ್ಮ ಭಾರತ ದೇಶದ ಇಂದಿನ ಸ್ಥಿತಿಗತಿಯಲ್ಲಿ ವಿವೇಕಾನಂದರ ಜೀವನ ಸಂದೇಶ ಹಾಗೂ ರಾಷ್ಟ್ರ ಪ್ರೇಮವನ್ನು ನಾವು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
–ಬಸವಂತರೆಡ್ಡಿ ವೀರೆಡ್ಡಿ.
ಯಾದಗಿರಿ. ಮೊ,9739554453.
Very nice bassu
Thank u sir
Super