ಸಂಕ್ರಾಂತಿ ಸ್ಪೇಷಲ್ : ಜಗದ್ಗುರುಗಳಿಗೆ ಗಜರಾಜನಿಂದ ಜಲಾಭಿಷೇಕ!
-ಮಲ್ಲಿಕಾರ್ಜುನ ಮುದನೂರ್
ಸಂಕ್ರಾಂತಿ ಹಬ್ಬ ಬಂದರೆ ಸಾಕು ಹೊಳೆ, ನದಿಗಳಿಗೆ ತೆರಳಿ ಪುಣ್ಯ ಸ್ನಾನ ಮಾಡಲು ಪ್ಲಾನ್ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಂತೂ ಸಂಕ್ರಾಂತಿ ಹಬ್ಬಾಚರಣೆ ವಿಶೇಷವಾಗಿ ಆಚರಿಸಲಾಗುತ್ತದೆ. ಅದರಲ್ಲೂ ನಮ್ಮ ಸಗರನಾಡಿನಲ್ಲಿ ಸಂಕ್ರಾಂತಿಯೇ ಬಹುದೊಡ್ಡ ಹಬ್ಬವಾಗಿ ಆಚರಿಸಲ್ಪಡುತ್ತದೆ. ಪ್ರತಿ ವರ್ಷ ಗೆಳೆಯರ ಗುಂಪು, ಬಂಧು ಬಳಗದೊಡನೆ ನದಿಗಳಿಗೆ ತೆರಳಿ ಪವಿತ್ರ ಜಲ ಮೈಗೆರೆದು ಪುನೀತ ಭಾವ ಅನುಭವಿಸುವ ಪದ್ಧತಿ ಸಾಮಾನ್ಯವಾಗಿದೆ.
ಇಂದಿಗೂ ಸಂಕ್ರಾಂತಿಯ ಸ್ಪೇಷಲ್ ಖಾದ್ಯಗಳೊಂದಿಗೆ ಎತ್ತಿನ ಗಾಡಿ, ಟ್ರ್ಯಾಕ್ಟರ್, ಕಾರು, ಬೈಕುಗಳಲ್ಲಿ ನದಿ, ಹೊಳೆಗಳಿಗೆ ತೆರಳುವುದು. ಎಳ್ಳು ಹಚ್ಚಿಕೊಂಡು ಪುಣ್ಯ ಸ್ನಾನ ಮಾಡಿದ ಬಳಿಕ ಸೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಬರ್ತಾ, ವಿವಿಧ ಚಟ್ನಿ ಪುಡಿ, ಕಾಳು ಪಲ್ಯ, ಮೊಸರನ್ನ ಸವಿಯುವ ಸಂಭ್ರಮ ಅಕ್ಷರಗಳಲ್ಲಿ ತೆರೆದಿಡಲಾಗದು. ಆ ಸಡಗರ ಅನುಭವಿಸದರೇನೆ ಚನ್ನ ಅಲ್ಲವೇ.
ಅರೇ ಜಗದ್ಗುರುಗಳಿಗೆ ಗಜರಾಜನ ಜಲಾಭಿಷೇಕ ಅಂತ ಹೆಡ್ ಲೈನ್ ಹಾಕಿ ಇದೇನು ಸಂಕ್ರಾಂತಿ, ಹೊಳೆ, ನದಿ ಅಂತೆಲ್ಲಾ ಉದ್ದುದ್ದ ಗೀಚಿದ್ದಾರೆ ಅಂದುಕೊಳ್ತಿದೀರಾ. ಬಂದೆ ಇರಿ. ಅಂದ ಹಾಗೇ ಈವತ್ತು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳೂ ವಿಶೇಷವಾಗಿ ಸಂಕ್ರಾಂತಿ ಆಚರಿಸಿದ್ದಾರೆ. ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಬಳಿಯ ಕೃಷ್ಣಾ ನದಿಗಿಳಿದ ಜಗದ್ಗುರುಗಳು ಪುಣ್ಯ ಸ್ನಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಸಂಕ್ರಮಣ ನಿಮಿತ್ಯ ಗಜರಾಜ ಜಗದ್ಗುರುಗಳಿಗೆ ಜಲಾಭಿಷೇಕ ಮಾಡಿದ್ದಾನೆ. ಈ ವೇಳೆ ಜಗದ್ಗುರುಗಳ ಜೊತೆಗೆ ಭಕ್ತ ವೃಂದವೂ ನದಿಗಿಳಿದು ಪುಣ್ಯ ಸ್ನಾನ ಮಾಡಿದ್ದು ವಿಶೇಷವಾಗಿತ್ತು.
ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು…