ವೃದ್ಧರು ಮತ್ತು ಅನಾಥರ ಸೇವೆ ಪುಣ್ಯದ ಕೆಲಸಃ ಅಮೀನರಡ್ಡಿ ಯಾಳಗಿ
ಅನಾಥ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ
ಶಹಾಪುರಃ ಅನಾಥರನ್ನು ಮತ್ತು ವೃಂದ ತಂದೆ ತಾಯಿಗಳ ಸೇವೆ ಸಲ್ಲಿಸುವವರು ದೇವರ ಸಮಾನ. ಅವರ ಸೇವಾ ಕೈಂಕರ್ಯಕ್ಕೆ ತನು ಮನ ಧನದಿಂದ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜೆಡಿಎಸ್ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಶ್ರೀಶೈಲ್ ಮಲ್ಲಿಕಾರ್ಜುನ ಅನಾಥಾಶ್ರಮ ಮತ್ತು ವೃದ್ಧಾಶ್ರಮದಲ್ಲಿ ನಡೆದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕು ಮಟ್ಟದಲ್ಲಿ ಅನಾಥಾಶ್ರಮ ಸ್ಥಾಪಿಸಿ ಕೈಲಾದ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಕಾಳಜಿ ಶ್ಲಾಘನೀಯ. ಸಂಸ್ಥೆಯಲ್ಲಿ ಯುವ ಸಮೂಹ ಕಾರ್ಯನಿರ್ವಹಿಸುತ್ತಿದ್ದು, ಸಮಾಜ ಮುಖಿ ಕಾರ್ಯ ಮಾಡುತ್ತಿರುವದು ಸಂತಸ ವಿಷಯ. ಅವರ ಸಮಾಜ ಮುಖಿ ಕಾರ್ಯ ಮುಂದುವರೆಯಲಿ. ಪ್ರತಿಯೊಬ್ಬರು ಕೈಲಾದ ಸಹಕಾರ ನೀಡುವ ಮೂಲಕ ಆಶ್ರಮದಲ್ಲಿದ್ದ ತಂದೆ ತಾಯಂದಿರನ್ನು ರಕ್ಷಣೆ ಮಾಡಬೇಕು. ಅವರ ನೋವಿಗೆ ಸ್ಪಂಧಿಸುವ ಕಾರ್ಯ ನಡೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ವಿಠಲ್ ವಗ್ಗಿ ಮಾತನಾಡಿ, ಇಂತಹ ಸಾಮಾಜಿಕ ಕಾರ್ಯ ಮಾಡಲು ನಿರ್ಧರಿಸಿರುವ ಯುವಕರ ನಡೆ ಮೆಚ್ಚುವಂತಹದ್ದು, ಈ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮಾಡುವ ಮೂಲಕ ಅವರ ತತ್ವ ಆದರ್ಶವನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕು ಎಂದರು.
ಬಸವರಾಜ ಅರುಣಿ, ಮೌನೇಶ ಸುರಪೂರಕರ್, ರಾಜು ಪಂಚಭಾವಿ, ಉಮೇಶ ಗುಡಗುಂಟಿ, ಅರವಿಂದ ಉಪ್ಪಿನ, ಸಿದ್ದು ಆನೇಗುಂದಿ, ಸಂಗು ಕುಂಬಾರ, ರಾಜುಗೌಡ ಅವರಾದ, ತಿಪ್ಪಣ್ಣ ಕ್ಯಾತ್ನಾಳ, ಸುಭಾಷ ಹೊತಪೇಠ, ಹೊನ್ನಪ್ಪ ನಾಟೇಕಾರ ಇತರರಿದ್ದರು. ಆಶ್ರಮದ ಸಂಸ್ಥಾಪಕ ಸೋಮಲಿಂಗ ಹುಗ್ಗಿ ಸ್ವಾಗತಿಸಿ ವಂದಿಸಿದರು.