ವಿವೇಕರ ಸಂದೇಶ ಬದುಕಿಗೆ ಸ್ಪೂರ್ತಿಃ ಲಕ್ಷ್ಮಣ ಲಾಳಸೇರಿ
ಯಾದಗಿರಿಃ ಸ್ವಾಮಿ ವಿವೇಕಾನಂದರ ಬದುಕು ಮತ್ತು ಅವರ ಸಂದೇಶಗಳು ಇಂದಿಗೂ ಜನರ ಬದುಕಿಗೆ ಸ್ಪೂರ್ತಿದಾಯಕ ಚಿಂತನೆಗಳಾಗಿವೆ ಎಂದು ಶಿಕ್ಷಕ ಲಕ್ಷ್ಮಣ ಲಾಳಸೇರಿ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ನಗರದ ಶಾರದಾ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರಾಮೀಣ ಗೆಳಯರ ಬಳಗದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಮಾಲೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಮಾತುಗಳು ಸಾಮಾನ್ಯ ಜನರನ್ನು ಮಾತ್ರ ಬಡಿದೆಬ್ಬಿಸದೇ ಅವರ ಮಾತಿನ ಓಟಕ್ಕೆ ಭೌದ್ಧಿಕ ಪ್ರಚಂಡರೂ, ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಕೊಚ್ಚಿ ಹೋಗಿದ್ದರು. ಯೌವ್ವನದ ಸಹಜ ಪ್ರಭೆಯಿಂದ ಕಂಗೊಳಿಸುತ್ತಿದ್ದ ನರೇಂದ್ರನನ್ನು ಆಧ್ಯಾತ್ಮಿಕವಾಗಿ ತಿದ್ದಿ ತೀಡಿ ವಿವೇಕಾನಂದರನ್ನಾಗಿ ನಿರ್ಮಾಣ ಮಾಡಿದ ಕೀರ್ತಿ ಶ್ರೀ ರಾಮಕೃಷ್ಣ ಪರಮಹಂಸರಿಗೆ ಸಲ್ಲುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಯು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರು ಭಾರತದ ನವ ಚೇತನರಾಗಿದ್ದಾರೆ ಎಂದರು.
ಬಳಗದ ಕಾರ್ಯದರ್ಶಿ ವಿರೇಶ ಉಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರು ಒಬ್ಬ ಮಹಾನ್ ಪುರುಷ. ಭಾರತದ ತತ್ವಗಳನ್ನು ಪಾಶ್ಚಿತ್ಯ ಪ್ರಪಂಚಕ್ಕೆ ತಿಳಿಸಿಕೊಟ್ಟವರು. ತ್ಯಾಗ ಮತ್ತು ಸೇವೆ ಭರತ ಖಂಡದ ಆದರ್ಶಗಳು ಅನುಷ್ಠಾನಕ್ಕೆ ತರಲು ತೀವ್ರವಾಗಿ ಯತ್ನಸಿ ಉಳಿದುದೆಲ್ಲ ತನ್ನಿಂದ ತಾನೇ ಸರಿಯಾಗುತ್ತದೆಂದು ತಿಳಿಸಿದ್ದಾರೆ. ಅವರ ದೂರ ದೃಷ್ಟಿ ಗ್ರಹಿಕೆ ಸತ್ಯವಾಗಿದ್ದು, ಅದರಂತೆ ನಾವೆಲ್ಲ ತ್ಯಾಗ ಮತ್ತು ಸೇವೆ ಎರಡನ್ನು ಮೈಗೂಡಿಸಿಕೊಂಡು ನಡೆಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಜಾನಪದ ಸೊಗಡಿನ ಬಯಲಾಟಕ್ಕೆ ಜೀವಕಳೆ ತುಂಬುವ ದ್ಯಾವಣ್ಣ ಚೀಟ್ಟೆನೋರ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯಗುರು ಸಿದ್ದು ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಗೆಳೆಯರ ಬಳಗದ ಅಧ್ಯಕ್ಷ ಮಾಂತೇಶ.ವಿ.ಗಿಂಡಿ, ಉಪಾಧ್ಯಕ್ಷ ಅಂಬ್ರೇಶ ದೋರನಹಳ್ಳಿ, ಸದಸ್ಯ ವೆಂಕಟೇಶ ಕುಲಕರ್ಣಿ, ಸಿದ್ದು ಆನೇಗುಂದಿ, ನಿಂಗಣ್ಣ ತೇಕರಾಳ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುದರ್ಶನ ನಾಯಕ ವನದುರ್ಗ ಸ್ವಾಗತಿಸಿ ವಂದಿಸಿದರು.