ಜಿಲ್ಲಾಡಳಿತ ಭವನದತ್ತ ಸಗಣಿ ಎರಚಿ ಪ್ರತಿಭಟನಾಕಾರರ ಆಕ್ರೋಶ!
ಹಾವೇರಿ: ಕೇಂದ್ರ ಸರ್ಕಾರದ ಫಸಲ್ ಭಿಮಾ ಯೋಜನೆಯ ವಿಮೆ ಹಣವನ್ನು ಶೀಘ್ರ ಬಿಡುಗಡೆಗೊಳಿಸಬೇಕು. ಹಾಗೂ ಶೇಂಗಾ , ಮೆಕ್ಕೆಜೋಳ ಖರೀಧಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನ ಬಳಿ ಎಮ್ಮೆಗಳನ್ನು ತಂದು ನುಗ್ಗಿಸಲು ಯತ್ನಿಸಿದರು. ಅಲ್ಲದೆ ಟಮಾಟೋಗಳನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮದ್ಯೆ ತೀವ್ರ ವಾಗ್ವಾದ ನಡೆಯಿತು. ಡಿಸಿ ವೆಂಕಟೇಶ್ ಸ್ಥಳಕ್ಕಾಗಮಿಸುವಂತೆ ಒತ್ತಿಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದತ್ತ ಟಮಾಟೋ ಮತ್ತು ಸಗಣಿಯನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್ಪಿ ಪರಶುರಾಮ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳಿಗೂ ಸಗಣಿ ಸ್ಪರ್ಶವಾಗಿದೆ ಎಂದು ತಿಳಿದು ಬಂದಿದೆ.
ಪರಿಸ್ಥಿತಿ ಮಿತಿ ಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಮುಂಜಾಗೃತ ಕ್ರಮವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಹಿರೇಕೆರೂರು ಶಾಸಕ ಯು.ಬಿ.ಬಣಗಾರ್, ಬಿಜೆಪಿ ಜಿಲ್ಲಾದ್ಯಕ್ಷ ಶಿವರಾಜ ಸಜ್ಜನ್ ಸೇರಿದಂತೆ ಇತರೆ ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.