ಆಕಸ್ಮಿಕ ಬೆಂಕಿ : ಬೀದಿಗೆ ಬಂದಿತು ಬಡ ಕುಟುಂಬ!
ಯಾದಗಿರಿ: ಅದೊಂದು ಪುಟ್ಟ ಸಂಸಾರ ವಾಸವಾಗಿದ್ದ ಪುಟ್ಟ ಗುಡಿಸಲು. ಆಳಾಗಿ ದುಡಿ ಅರಸನಾಗಿ ಉಣ್ಣು ಎಂಬುದು ಅವರ ಪಾಲಿಸಿ ಆಗಿತ್ತು. ಅಂದಿನದಂದು ದುಡಿದು ಸುಖೀ ಜೀವನ ಸಾಗಿಸುತ್ತಿದ್ದ ಸುಂದರ ಸಂಸಾರವದು. ಆದರೆ, ಅದ್ಯಾವಾಗ ಅಗ್ನಿದೇವನ ಕೆಂಗಣ್ಣು ಬಿದ್ದಿತ್ತೋ ಗೊತ್ತಿಲ್ಲ. ಆಕಸ್ಮಿಕ ಬೆಂಕಿಗೆ ಇಡೀ ಗುಡಿಸಲು ಬೆಂಕಿಗಾಹುತಿ ಆಗಿದೆ.
ಸುರಪುರ ತಾಲೂಕಿನ ಟಿ.ಬೊಮ್ಮನಹಳ್ಳಿ ಗ್ರಾಮದ ಮಲ್ಲಪ್ಪ ಅಗಸಿಮನಿ ಎಂಬುವರಿಗೆ ಸೇರಿದ ಗುಡಿಸಲು ಆಕಸ್ಮಿಕ ಬೆಂಕಿಗೆ ಬಲಿಯಾಗಿದೆ. ಮನೆಯಲ್ಲಿದ್ದ ನಗದು ಹಣ ಸೇರಿದಂತೆ ದವಸ, ಧಾನ್ಯ, ಮತ್ತಿತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಹೀಗಾಗಿ, ಮಲ್ಲಪ್ಪ ಅಗಸಿಮನಿ ಕುಟುಂಬ ಸದ್ಯ ಇರಲು ಸೂರಿಲ್ಲದೆ ಬೀದಿಗೆ ಬಂದಂತಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಸುರಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಭಂಧಿರ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಶಿಘ್ರಗತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ. ಇರುವ ಗುಡಿಸಲು ಬೆಂಕಿಗಾಹುತಿಯಾಗಿ ಬೀದಿಗೆ ಬಂದಿರುವ ಮಲ್ಲಪ್ಪ ಅಗಸಿಮನಿ ಕುಟುಂಬಕ್ಕೆ ಶೀಘ್ರಗತಿಯಲ್ಲಿ ಆಶ್ರಯ ಕಲ್ಪಿಸಬೇಕಿದೆ.