ಪ್ರಮುಖ ಸುದ್ದಿ

ನಗರಸಭೆಗೆ ಬರುವ ಆದಾಯ ಖೋತಾ ವಸಂತಕುಮಾರ ಸುರಪುರಕರ್ ಆರೋಪ

ವಾಣಿಜ್ಯ ಮಳಿಗೆಗಳ ಕರ ವಸೂಲಿಯಲ್ಲಿ ವ್ಯಾಪಕ ಅವ್ಯವಹಾರ ಆರೋಪ

ಕರ ವಸೂಲಿ-ಸಿಬ್ಬಂದಿ ಜೇಬು ಭರ್ತಿ ತನಿಖೆಗೆ ಆಗ್ರಹ

ಯಾದಗಿರಿಃ ನಗರಸಭೆಗೆ ಬರುವ ಆಸ್ತಿಗಳ ಕರ ಆದಾಯದಲ್ಲಿ ಇಲ್ಲಿನ ಸಿಬ್ಬಂದಿಗಳ ಕರಾಮತ್ತಿನಿಂದ ಬರುವ ಆದಾಯ ಪೋಲಾಗುತ್ತಿದೆ. ಕರ ಕಟ್ಟುವ ಜನರಿಗೆ ಸಿಬ್ಬಂದಿಯೇ ಅನ್ಯ ದಾರಿ ತೋರಿಸುವ ಮೂಲಕ ತಮ್ಮ ಕೈಚಳಕ ತೋರಿಸಿ ಕಡಿಮೆ ಕರ ಕಟ್ಟಿಸಿಕೊಂಡು, ಅವರಿಂದ ಹಣ ಪಡೆಯುತ್ತಿರುವುದು ಕಂಡು ಬಂದಿದೆ. ಈ ಕುರಿತು ಪೌರಾಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್ ಆಗ್ರಹಿಸಿದ್ದಾರೆ.

ಜಿಲ್ಲೆಯ ಶಹಾಪುರ ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಮರ್ಪಕ ದಾಖಲೆಯೊಂದಿಗೆ ಕರ ಆದಾಯಕ್ಕೆ ಬೀಳುತ್ತಿರುವ ಕತ್ತರಿ ಕುರಿತು ಸಮಗ್ರ ಮಾಹಿತಿ ನೀಡಿದ, ಅವರು ನಗರದ ಕೈಗಾರಿಕಾ ಪ್ರದೇಶದ ವಾಣಿಜ್ಯ ಮಳಿಗೆಗಳ ಕರ ವಸೂಲಿಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿದರು.

ಅಂದಾಜು 10 ವಾಣಿಜ್ಯ ಮಳಿಗೆಯ ವಿವರ ನೋಡಿದಾಗ, ಕೈಗಾರಿಕಾ ಪ್ರದೇಶದ ಮಳಿಗೆಗಳ ಕರ 2011-12 ರ ಪ್ರಕಾರ ಶೇ.9 ರಷ್ಟು ಕ್ರೋಢಿಕರಿಸಿದಾಗ ಬರುವ ಒಟ್ಟು ಕರ ಆದಾಯವನ್ನು ಆಯ ಮಳಿಗೆಗಳ ಮಾಲೀಕರ ಹೆಸರಿನಲ್ಲಿ ಕರ ಬಾಕಿ ಚುಕ್ತಾ ಎಂದು ನಮೂಸಿದಲಾಗಿದೆ. ಆದರೆ ಪ್ರತಿ ಮಳಿಗೆಯಿಂದ ಸಾವಿರಾರು ರೂ.ಗಳನ್ನು ಸಿಬ್ಬಂದಿಯೇ ತಮ್ಮ ಜೇಬಿಗೆ ಹಣ ಇಳಿಸಿಕೊಂಡಿರುವುದು ಇಲ್ಲಿ ಗೋಚರವಾಗುತ್ತಿದೆ. ಉದಾಹರಣೆಗೆ ಆಸ್ತಿ ಸಂಖ್ಯೆ 7-ಎ/22 ಈ ಮಳಿಗೆಯ ಒಟ್ಟು ಕರ 44883 ರೂ. ಇದೆ ಇದರಲ್ಲಿ 25.469 ರೂ. ಕರ ಕಟ್ಟಿಸಿಕೊಳ್ಳಲಾಗಿದೆ. ಇದರಲ್ಲಿ 19.414 ರೂ. ವ್ಯತ್ಯಾಸ ಕಂಡು ಬರುತ್ತದೆ. ವ್ಯತ್ಯಾಸದ ಹಣ ಎಲ್ಲಿಗೆ ಹೋಯಿತು ಯಾರ ಜೇಬಿಗೆ ಹೋಯಿತು. ನಗರಸಭೆ ಖಾತೆಗೆ ಜಮೆಯಾಗಿರುವದಿಲ್ಲ ಎಂದು ಪ್ರಶ್ನಿಸಿದರು.

ಆದರೆ ರಸೀದಿಯಲ್ಲಿ ಪೂರ್ಣ ಪ್ರಮಾಣ ಕರ ಮುಟ್ಟಿರುತ್ತದೆ ಎಂದು ರಸೀದಿ ನೀಡಲಾಗಿದೆ. ಅಂದರೆ ಇಲ್ಲಿ ಸಿಬ್ಬಂದಿಯ ಕೈಚಳಕ ಸಾಕಷ್ಟಿದೆ. ನಾಗರಿಕರಿಗೆ ಆದಾಯದಲ್ಲಿ ಕಡಿಮೆ ಮಾಡಿ ತಾವು ಅವರಿಂದ ಹಣ ಪಡೆಯುವ ಕಾರ್ಯ ಜೋರಾಗಿ ನಡೆದಿದೆ. ಇಲ್ಲಿನ ಸಾಮಾನ್ಯ ನಾಗರಿಕರ ಕರ ವಸೂಲಿಯಲ್ಲಿ ಬಡ್ಡಿ ಬಿಟ್ಟು ಬರಿ ಕರ ಕಟ್ಟಿಕೊಳ್ಳಲಿ ಅಭ್ಯಂತರವಿಲ್ಲ. ಆದರೆ ಕಮರ್ಷಿಯಲ್ ಮಳಿಗೆಯಲ್ಲಿ ಬಡ್ಡಿ ಯಾವ ಆಧಾರದಿ ಇವರು ಕಡಿತಗೊಳಿಸುತ್ತಾರೆ. ಜಿಲ್ಲಾಧಿಕಾರಿಗಳ ಆದೇಶವಿದೆಯೇ ಹೋಗಲಿ ಅಥವಾ ಪೌರಾಯುಕ್ತರು ಆದೇಶಿಸಿದ್ದಾರೆ ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ನಗರಸಭೆ ಸಿಬ್ಬಂದಿಯಿಂದ 7 ಲಕ್ಷ ರೂ. ಕರ ವಂಚನೆ ಆರೋಪ

ಇಲ್ಲಿನ ಕೈಗಾರಿಕಾ ಪ್ರದೇಶ ವ್ಯಾಪ್ತಿ ಬರುವ ಕೇವಲ 10 ಮಳಿಗೆಗಳ ಒಟ್ಟು ಕರ ಕ್ರೋಡಿಕರಿಸಲಾಗಿ, 11.52.002 ಲಕ್ಷ ರೂ. ಆಗಿದ್ದು, ಕರ ಕಟ್ಟಿರುವುದು 4.0.2.325 ಲಕ್ಷ ರೂ. ಕರ ವಸೂಲಾತಿ ಮಾಡಿದ ಬಗ್ಗೆ ರಸೀದಿಗಳಿವೆ. ಆದರೆ ಒಟ್ಟಾರೆ ಕರ ಲೆಕ್ಕ ಪ್ರಕಾರ 11 ಲಕ್ಷ ಕ್ಕೂ ಹೆಚ್ಚಿದೆ. ಇಲ್ಲಿ ಒಟ್ಟಾರೆ ಸಿಬ್ಬಂದಿಗಳು 7.49.677 ಲಕ್ಷ. ರೂ. ವಂಚಿಸಿರುವುದು ಬೆಳಕಿಗೆ ಬರುತ್ತದೆ. ಇದೇ ರೀತಿಯ ಇನ್ನೂ ಮಳಿಗೆಗಳಿವೆ.

ಅಲ್ಲದೆ ನಗರದ ಪ್ರಮುಖ ಕಮರ್ಷಿಯಲ್ ಮಳಿಗೆಗಳ ಕರ ಬಾಕಿ ಸಾಕಷ್ಟಿದೆ. ಈ ಕುರಿತು ಸಮರ್ಪಕ ತನಿಖೆ ನಡೆಯಬೇಕಿದೆ. ವಾಣಿಜ್ಯ ಮಳಿಗೆಗಳ ಕರ ಲೆಕ್ಕ ಕುರಿತು ಪರಿಶೀಲನೆ ನಡೆಸಬೇಕಿದೆ ಎಂದು ಸದಸ್ಯ ವಸಂತಕುಮಾರ ಸುರಪುರಕರ್ ಆಗ್ರಹಿಸಿದ್ದಾರೆ. ವಾಣಿಜ್ಯ ಮಳಿಗೆಗಳ ಕರದಲ್ಲಿ ಲಕ್ಷಾಂತರ ರೂ. ಬಾಕಿ ಇದ್ದು, ನಗರಸಭೆ ತೆರಿಗೆ ವಿನಾಯಿತಿ ನೀಡುವ ಜೊತೆಗೆ ಅವರ ಜೊತೆ ಒಡಂಬಡಿಕೆ ಮಾಡಿಕೊಂಡು ಅಪೂರ್ಣ ಕರ ಕಟ್ಟಿಕೊಳ್ಳುತ್ತಿದೆ ಎಂದು ಆಪಾದಿಸಿದರು.

ಇದರಲ್ಲಿ ಸಿಬ್ಬಂದಿ ಕರಗಾರರಿಂದ ಹಣ ವಸೂಲಿ ಮಾಡಿಕೊಂಡು ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದೆ ಹೀಗಾಗಿ ನಗರಸಭೆಗೆ ಬರುವ ಆದಾಯ ಗೋತಾವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನಗರಸಭೆ ವಾಹನಗಳಿಗೆ ಹಾಕುವ ಡಿಸೇಲ್, ಪೆಟ್ರೋಲ್ ನಲ್ಲಿಯೂ ಅಕ್ರಮ ಎಸಗುತ್ತಿರುವುದು ಕಂಡು ಬಂದಿದೆ. ಇಲ್ಲಿಯು ಲಕ್ಷಾಂತರ ರೂ. ಹಣ ಲೂಟಿಯಾಗುತ್ತಿದೆ. ಈ ಕುರಿತು ತನಿಖೆ ನಡೆಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

———————

ಕರ ವಸೂಲಿಯಲ್ಲಿ ನಡೆಯುತ್ತಿರುವ ಅಕ್ರಮ ಕುರಿತು ಪೌರಾಯುಕ್ತರು ಉತ್ತರಿಸಬೇಕೆಂದು ದಾಖಲೆ ಸಮೇತ ಪ್ರಶ್ನೆ ಮಾಡಿ, ಪಟ್ಟು ಹಿಡಿದಿದ್ದೆ, ಅವರು ಸಮುವಕಾಶ ಕೋರಿದ್ದು, ಕರ್ತವ್ಯಕ್ಕೆ ಹಾಜರಾಗಿ ತಿಂಗಳಾಗಿಲ್ಲ. ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವೆ ಎಂದು ತಿಳಿಸಿದ್ದಾರೆ.

ವಸಂತಕುಮಾರ ನಗರಸಭೆ ಸದಸ್ಯ.

——

ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವೆ..

ಕರ ವಸೂಲಿಯಲ್ಲಿ ನಡೆದಿರುವ ಅಕ್ರಮ ಕುರಿತು ನನಗೆ ಗೊತ್ತಿಲ್ಲ. ನಾನು ಕರ್ತವ್ಯಕ್ಕೆ ಹಾಜರಿಯಾಗಿ ಮೊದಲ ಸಭೆ ಇದಾಗಿದ್ದು, ಕಾರಣ ಈ ಕುರಿತು ಪರಿಶೀಲನೆ ನಡೆಸುತ್ತೇನೆ. ತದ ನಂತರ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಅಂತಹ ತಪ್ಪುಗಳು ಕಂಡು ಬಂದಿದ್ದಲ್ಲಿ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುತ್ತೇನೆ.

ರವೀಂದ್ರ ವೈ.ಲಂಬೂ. ಪೌರಾಯುಕ್ತ ನಗರಸಭೆ. ಶಹಾಪುರ.

 

 

Related Articles

Leave a Reply

Your email address will not be published. Required fields are marked *

Back to top button