ಪ್ರಮುಖ ಸುದ್ದಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೃಷಿಕೂಲಿಗಾರರಿಂದ ಪ್ರತಿಭಟನೆ

 

ಕೇರಳ ಮಾದರಿಯಲ್ಲಿ  ಭವಿಷ್ಯ ನಿಧಿ ಸ್ಥಾಪನೆಗೆ ಆಗ್ರಹ

ಯಾದಗಿರಿಃ  ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ  ಕೃಷಿ ಕೂಲಿಕಾರರ ಸಂಘ ಜಿಲ್ಲೆಯ ಶಹಾಪುರ ನಗರದ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ಪ್ರತಿ ಬಾರಿ ಬಜೆಟ್ ಮಂಡನೆ ಪೂರ್ವ ಕರೆಯವು ವಿವಿಧ ಜನ ವಿಭಾಗಗಳ ಸಮಾಲೋಚನಾ ಸಭೆಗೆ ಕೃಷಿ ಕೂಲಿಕಾರರ ಪ್ರತಿನಿಧಿಗಳಿಗೂ ಆಹ್ವಾನ ನೀಡುವಂತೆ ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ರಾಜ್ಯ ಸರ್ಕಾರ ನಮ್ಮ ಮನವಿ ತಿರಸ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾನಿರತರು ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಕೂಲಿಕಾರರು ಆರ್ಥಿಕ, ಸಾಮಾಜಿಕವಾಗಿಯೂ ತುಳಿತಕ್ಕೆ ಒಳಪಟ್ಟವರು, ಕೃಷಿ ಬಿಕ್ಕಟ್ಟು ಮತ್ತು ಭೀಕರ ಬರದಿಂದಾಗಿ ಹಳ್ಳಿಗಳಲ್ಲಿ ಸಮರ್ಪಕವಾಗಿ ಕೆಲಸಗಳು ದೊರೆಯುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಅರ್ಹ ಕೂಲಿಕಾರರಿಗೆ ಅದು ಕೈಗೆಟುಕುತ್ತಿಲ್ಲ. ಉಳ್ಳವರ ಪಾಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಕಾಡುತ್ತಿದೆ. ರಾಜ್ಯ ಸರ್ಕಾರ ನೀವು ಆರಂಭಿಸಿದ ‘ಅನ್ನಭಾಗ್ಯ’ ಯೋಜನೆಯನ್ನು ಸಮರ್ಪಕವಾಗಿ ಆಹಾರ ಧನ್ಯ ವಿತರಣೆಯಾಗುತ್ತಿಲ್ಲ ಹೀಗಾಗಿ ಬಡ ಕೂಲಿಕಾರರು ನಗರ ಪ್ರದೇಶಗಳತ್ತ ಗುಳೆ ಹೊರಟಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತಾಪಿ ಕೃಷಿ ಕೂಲಿ ಕಾರ್ಮಿಕರಿಗೆ ಕೈತುಂಬಾ ಕೆಲಸ ನೀಡುವ ಮೂಲಕ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ ಪ್ರಾಮುಖ್ಯವಾಗಿ ಕೇರಳ, ತ್ರಿಪುರ, ತಮಿಳುನಾಡು ಮೊದಲಾದ ರಾಜ್ಯಗಳ ಮಾದರಿಯಲ್ಲಿ ರಾಜ್ಯದ ಕೃಷಿ ಕೂಲಿಕಾರರಿಗೆ ಮತ್ತು ಗ್ರಾಮೀಣ ಕೆಲಸಗಾರರಿಗೆ ಕನಿಷ್ಟ ವೇತನ, ತುಟ್ಟಿ ಭತ್ಯೆ ಅಲ್ಲದೆ ಭವಿಷ್ಯ ನಿಧಿ(ಫಿ.ಎಫ್), ಇ.ಎಸ್.ಐ, ನಿವೃತ್ತಿ ವೇತನ ಮುಂತಾದ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಖಾತರಿಪಡಿಸುವ ಸಮಗ್ರ ಶಾಸನವೊಂದನ್ನು ರೂಪಿಸಬೇಕು. ಪ್ರಸಕ್ತ ಬಜೆಟ್ ನಲ್ಲಿಯೇ ಇದನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಮೊದಲಾದ ಅಸಂಘಟಿತ ಕಾರ್ಮಿಕ ವಿಭಾಗಗಳಿಗೆ ರೂಪಿಸಿರುವಂತೆ, ಕೃಷಿ ಕೂಲಿಕಾರರಿಗಾಗಿ ಕಲ್ಯಾಣ ನಿಧಿಯೊಂದನ್ನು ಸ್ಥಾಪಿಸಿ ಕಲ್ಯಾಣ ಮಂಡಳಿಯ ಮೂಲಕ ಅದರ ನಿರ್ವಹಣೆ ಮಾಡುವುದಾಗಿ ಈ ಸಲದ ಬಜೆಟ್‍ನಲ್ಲಿ ಪ್ರಕಟಿಸಬೇಕು. ಅಲ್ಲಿಯವರೆಗೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಕೃಷಿ ಕೂಲಿಕಾರರಿಗೂ ಒದಗಿಸಬೇಕು.
ಎಲ್ಲಾ ವಸತಿ ರಹಿತ ಕೂಲಿಕಾರ ಕುಟುಂಬಗಳಿಗೆ ಮನೆ-ನಿವೇಶನಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಬೇಕು.

ಮತ್ತು ಯಾವುದೇ ಷರತ್ತು ವಿಧಿಸದೆ ಬಿಪಿಎಲ್ ರೇಷನ್ ಕಾರ್ಡ ವಿತರಿಸಬೇಕು. ಯುನಿಟ್ ಪದ್ಧತಿಯನ್ನು ಕೈಬಿಟ್ಟು ಮೊದಲಿನಂತೆ ಕೆಜಿ.ಗೆ ಒಂದು ರೂ. ದರದಲ್ಲಿ ಕನಿಷ್ಟ 30 ಕೆಜಿ ಅಕ್ಕಿಯನ್ನು ವಿತರಿಸಬೇಕು. ಬೇಳೆ, ಎಣ್ಣೆ, ಸಕ್ಕರೆ ಮೊದಲಾದ ಅಗತ್ಯ ವಸ್ತುಗಳನ್ನು ಗರಿಷ್ಠ ರಿಯಾಯ್ತಿಯಲ್ಲಿ ಮಾರಾಟ ಮಾಡಬೇಕು. ಕೃಷಿ ಕೂಲಿಕಾರರ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು. 60 ವರ್ಷ ದಾಟಿದ ಎಲ್ಲ ಕೃಷಿ ಕೂಲಿಕಾರರಿಗೆ ರೂ. 1000 ದರದಲ್ಲಿ ಮಾಸಿಕ ನಿವೃತ್ತಿ ವೇತನ ನೀಡಬೇಕು. ಬಗರ್ ಹುಕುಂ ಸಾಗುವಳಿ ಪ್ರಕರಣಗಳನ್ನು ಸಕ್ರಮಗೊಳಿಸಿ ಆದೇಶಿಸಬೇಕು.

ಗಂಗಾವತಿ ತಾಲ್ಲೂಕ ಮರಕುಂಬಿ ಗ್ರಾಮದಲ್ಲಿ ದೌರ್ಜನ್ಯ ಹಾಗೂ ಬಹಿಷ್ಕಾರಕ್ಕೆ ಒಳಗಾಗಿರುವ ದಲಿತ ಕುಟುಂಬಗಳಿಗೆ ಪರಿಹಾರ ಮತ್ತು ನಿವೇಶನ ಹಾಗೂ ಕೊಲೆಯಾಗಿರುವ ದಲಿತ ವಿರೇಶಪ್ಪನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಆತನ ಮಕ್ಕಳಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ದಾವಲಸಾಬ, ಮಲ್ಲಯ್ಯ ಪೋಲಂಪಲ್ಲಿ, ನಿಂಗಣ್ಣ ನಾಟೇಕಾರ, ನಸೀಮಾ ಮಂಜಿಲ್, ಪಂಪಣ್ಣ ಹೊಸಮನಿ, ವಿಶ್ವನಾಥ ನಾಟೇಕಾರ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button