#RahulTempleRun : ರಾಜ್ಯಕ್ಕೆ ರಾಹುಲ್ ಆಗಮನ ಮಠ ಮಂದಿರಗಳಿಗೆ ನಮನ
ಕೊಪ್ಪಳ : ಫೆಬ್ರವರಿ 10ರಂದು ರಾಜ್ಯಕ್ಕೆ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ವಿವಿಧ ಸಭೆ, ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಗುಜರಾತ್ ಚುನಾವಣೆ ವೇಳೆ ಅನುಸರಿಸಿದ ಮಠ ಮಂದಿರಗಳ ಭೇಟಿ ತಂತ್ರವನ್ನು ಕರ್ನಾಟಕದಲ್ಲೂ ಮುಂದುವರೆಸಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಫೆ.10ಕ್ಕೆ ಕೊಪ್ಪಳಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಈ ಭಾಗದ ಆರಾಧ್ಯ ದೇವತೆ ಹುಲಿಗೆಮ್ಮ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಬಳಿಕ ಸಂಜೆ ಹೊತ್ತಿಗೆ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ. ದೇಗುಲದ ದರ್ಶನ, ಮಠಕ್ಕೆ ಭೇಟಿ ಬಳಿಕ ಸಾರ್ವಜನಿಕ ಮೈದಾನದಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಲಿದ್ದಾರೆ.
ಸಮಾವೇಶದಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅದ್ಯಕ್ಷ ಪರಮೇಶ್ವರ್, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತವಾರಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.