ರಾಹುಲ್ ಗಾಂಧಿ ಹೋದಲ್ಲೆಲ್ಲ ಕೈಪಡೆ ಸೋತು ಸುಣ್ಣವಾಗಿದೆ – ಜಾವಡೇಕರ್
ಚಿತ್ರದುರ್ಗ: ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಆರಂಭಿಸಿದ್ದಾರೆ. ನಾವು ರಾಹುಲ್ ಟೂರನ್ನು ಸ್ವಾಗತಿಸುತ್ತೇವೆ. ಕಾರಣ ಅವರು ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷ ಸೋತು ಸುಣ್ಣವಾಗುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ ಜಾವಡೇಕರ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಬೆಂಗಳೂರು ನಗರದಲ್ಲಿ ನಡೆದ ಐತಿಹಾಸಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾದ ಬಳಿಕ ಕರ್ನಾಟಕದಲ್ಲಿ ನವ ಭರವಸೆ ಮೂಡಿಸಿದೆ. ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಉಳಿದಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಹೋಗಿ ಬಿಜೆಪಿ ಬರಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಆಗಲಿದೆ ಎಂದರು.
ಸಬ್ ಕಾ ಸಾತ್ ಸಬಕಾ ವಿಕಾಸ್ ಬಿಜೆಪಿಯ ಸಂಸ್ಕೃತಿ ಆಗಿದ್ದರೆ ಕುಟುಂಬ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ ಆಗಿದೆ. ಕಾಂಗ್ರೆಸ್ ಬ್ಯಾಲೆಟ್ ಪಾಲಿಟಿಕ್ಸ್ ಬದಲು ಬುಲೆಟ್ ಪಾಲಿಟಿಕ್ಸ್ ಮಾಡುತ್ತಿದೆ. ಮರ್ಡರ್ ಪಾಲಿಟಿಕ್ಸ್ ಮಾಡುತ್ತಿದೆ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.