ಪ್ರಮುಖ ಸುದ್ದಿ

ಶಿವ-ಪಾರ್ವತಿ ಮದುವೆಯಾದ ದಿನವೇ ಶಿವರಾತ್ರಿಃ ವೀರಮಹಾಂತಶ್ರೀ

ಬೆಟ್ಟದ ಮಹಾಂತೇಶ್ವರ ಜಾತ್ರಾ ಮಹೋತ್ಸವಸಾಮೂಹಿಕ ಮದುವೆ

ಯಾದಗಿರಿಃ ಮದುವೆಗಾಗಿ ದುಂದುವೆಚ್ಚ ಮಾಡುವುದಕ್ಕಿಂತ ಸಾಮೂಹಿಕ ಮದುವೆಯಲ್ಲಿ ಸರಳವಾಗಿ ಮದುವೆಯಾಗುವ ಮೂಲಕ ಆರ್ಥಿಕವಾಗಿ ದಿವಾಳಿಗೆ ತಡೆಯೊಡ್ಡಬಹುದು ಎಂದು ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು.

ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಬೆಟ್ಟದ ಮಹಾಂತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ 9 ನೇವರ್ಷದ ಸಾಮೂಹಿಕ ಮದುವೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಮದುವೆಗಾಗಿ ಎಷ್ಟು ಖರ್ಚು ಮಾಡಿದರೂ ಕಡಿಮೆ ಎಂಬಂತಾಗಿದೆ. ಕಾರಣ ಬಡವರು ಮತ್ತು ಮಧ್ಯಮ ವರ್ಗದವರು ಸಾಮೂಹಿಕ ಮದುವೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಅನಗತ್ಯವಾಗಿ ಖರ್ಚು ಮಾಡುವ ಹಣವನ್ನು ಉಳಿಸಬೇಕಿದೆ. ಮದುವೆ ಮುಂಜಿ ಎಂದು ಸಾಲಸೂಲ ಮಾಡಿ ವಿವಾಹದ ನಂತರ ಪಡುವ ಕಷ್ಟ ಅಷ್ಟಿಷ್ಟಲ್ಲ. ನಾನಾ ಕುಟುಂಬಗಳ ಮದುವೆ ಖರ್ಚಿನ ಸಾಲ ತೀರಿಸಲಾಗದೆ ಸಾಕಷ್ಟು ತೊಂದರೆಗೆ ಒಳಗಾಗಿ ಜರ್ಜಿರತಗೊಂಡಿವೆ. ಹಲವು ಕುಟುಂಬಗಳು ತಮ್ಮ ಬದುಕನ್ನೆ ಹಾಳು ಮಾಡಿಕೊಂಡ ನಿದರ್ಶನಗಳಿವೆ. ಹೀಗಾಗಿ ಸರಳ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವ ಮೂಲಕ ಮಾದರಿ ಬದುಕು ನಡೆಸಬೇಕು.

ಸಾಮೂಹಿಕವಾಗಿ ಮದುವೆಯಾಗುವುದು ಒಂದು ಭಾಗ್ಯವೇ ಸರಿ. ಸಾಮೂಹಿಕ ಮದುವೆಯ ಜೋಡಿಗಳು ಕೊನೆಯುಸಿರಿರುವರೆಗೂ ಕೂಡಿ ಬಾಳಬೇಕು. ಅಂತಹ ಸಂಕಲ್ಪ ಶ್ರೀಕ್ಷೇತ್ರ ಸಾನ್ನಿಧ್ಯದಲ್ಲಿ ಮಾಡಬೇಕು ಅದರಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ದೋರನಹಳ್ಳಿಯ ಹಿರೇಮಠದ ವೀರಮಹಾಂತೇಶ್ವರ ಶಿವಾಚಾರ್ಯರು ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವದು ಶ್ಲಾಘನೀಯ ಎಂದರು.
ಸಮಾರಂಭದ ಸಾನ್ನಿಧ್ಯವಹಿಸಿದ್ದ ಶ್ರೀಮಠ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ಶ್ರೀಮಠದಿಂದ ಕಳೆದ 9ವರ್ಷಗಳಿಂದ ಸುಮಾರು 1100 ಜೋಡಿಗಳಿಗೆ ಕಂಕಣಭಾಗ್ಯ ನೀಡಿದೆ. ಪ್ರತಿವರ್ಷವೂ ಶ್ರೀಮಠದ ಭಕ್ತಾಧಿಗಳಲ್ಲಿ ಸಾಮೂಹಿಕ ಮದುವೆ ಮಾಡುವ ಅಧಮ್ಯ ಚೈತನ್ಯವೇ ಇದಕ್ಕೆ ಕಾರಣವಾಗಿದೆ. ಶಿವರಾತ್ರಿಯ ಶಿವಯೋಗದ ದಿನದಂದು ಮದುವೆ ಮಾಡಿಕೊಳ್ಳುವುದು ಒಂದು ಸುಯೋಗವಾಗಿದೆ. ಅಲ್ಲದೇ ಶ್ರೀಮಠದ ಸಾಮೂಹಿಕ ಮದುವೆಯಲ್ಲಿ ಭಾಗವಹಿಸುವ ಜೋಡಿಗಳು ಅತ್ಯಂತ ಸುಯೋಗಿಗಳಾಗಿದ್ದಾರೆಂದು ಕಾರಣ ಇಂದಿನ ದಿನವೇ ಶಿವ ಪಾರ್ವತಿಯರು ಮದುವೆಯಾದ ದಿನವೆಂದು ಪುರಾಣ ಹೇಳುತ್ತದೆ ಎಂದರು.

ಗ್ರಾಮದ ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಸಗರ ಗ್ರಾಮದ ಒಕ್ಕಲಿಗೇರಮಠದ ಮರಳ ಮಹಾಂತ ಶಿವಾಚಾರ್ಯರು, ಅಖಿಲ ಭಾರತ ಗಾಣಗೇರ ಸಂಘದ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ, ಶಾಸಕ ಗುರು ಪಾಟೀಲ್ ಶಿರವಾಳ, ಮಾಜಿ ಎಂಎಲ್ಸಿ ಚನ್ನಾರೆಡ್ಡಿ ಪಾಟೀಲ ತುನ್ನೂರು, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಭೀಮಣ್ಣ ಮೇಟಿ, ಡಾ.ಶರಣಭೂಪಾಲರೆಡ್ಡಿ, ಜೇವರ್ಗಿ ಜೆಡಿಎಸ್ ಮುಖಂಡ ಕೇದಾರ ಲಿಂಗಯ್ಯ ಹಿರೇಮಠ, ಜಿಪಂ ಸದಸ್ಯ ವಿನೋದ ಪಾಟೀಲ್, ಷಣ್ಮುಖಪ್ಪ ಕಕ್ಕೇರಿ, ಗಣಪತಿರಾವ್ ಜೋಳದ, ಈಶ್ವರಪ್ಪ ಲಕಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button