ಬಹಮನಿ ಉತ್ಸವ ಆಚರಣೆ ಕ್ಯಾನ್ಸಲ್ – ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸ್ಪಷ್ಟನೆ
ಕಲಬುರಗಿ: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾಗಿದ್ದು ಭಾರೀ ವಿವಾದಕ್ಕೆ ಈಡಾಗಿತ್ತು. ರಾಜ್ಯ ಸರ್ಕಾರ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳಿಂದ ಭಾರೀ ವಿರೋಧ ಎದುರಿಸಬೇಕಾಯಿತು. ಆದರೆ, ವಿರೋಧದ ಮದ್ಯೆಯೇ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತ ಸಾಗಿದೆ. ಈ ನಡುವೆ ಇತ್ತೀಚೆಗೆ ಬಹಮನಿ ಉತ್ಸವ ಆಚರಿಸುವುದಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಘೋಷಿಸಿದ್ದರು. ಭಾವೈಕ್ಯತೆಗಾಗಿ ಬಹಮನಿ ಉತ್ಸವ ಆಚರಿಸಲಾಗುವುದು. ಆ ಮೂಲಕ ಬಹಮನಿ ಸುಲ್ತಾನರ ಆಡಳಿತ ಮತ್ತು ಆ ಕಾಲದ ಸಂಸ್ಕೃತಿ, ಕಲೆಯನ್ನು ಅನಾವರಣಗೊಳಿಸಲಾಗುವುದು ಎಂದು ತಿಳಿಸಿದ್ದರು.
ಬಹಮನಿ ಉತ್ಸವ ಆಚರಣೆ ಬಗ್ಗೆಯೂ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತಬೇಟೆಗಾಗಿ ಬಹಮನಿ ಉತ್ಸವ ಆಚರಿಸಲಾಗುತ್ತಿದೆ ಎಂದು ಆರೋಪಿಸಿತ್ತು. ಯಾವುದೇ ಕಾರಣಕ್ಕೂ ಬಹಮನಿ ಉತ್ಸವ ಆಚರಣೆಗೆ ಬಿಡೋದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಕಲಬುರಗಿಯಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಬಹಮನಿ ಉತ್ಸವ ಆಚರಣೆಯನ್ನು ಕೈಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಬಹಮನಿ ಉತ್ಸವವನ್ನು ಸರ್ಕಾರದಿಂದ ಆಚರಿಸುವುದಿಲ್ಲ, ಬದಲಾಗಿ ಸಂಘ ಸಂಸ್ಥೆಗಳು ಖಾಸಗಿಯಾಗಿ ಬಹಮನಿ ಉತ್ಸವ ಆಚರಣೆಗೆ ಮುಂದಾದರೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.