ದಿಲ್ಕಿ ದೋಸ್ತಿ

ಬದಲಾಗುತ್ತಿದ್ದೇನೆ ಕ್ಷಮಿಸಿಬಿಡು : ಪ್ರೇಮಿಗಳ ದಿನದ ಬಳಿಕ ಬರೆದ ಪ್ರೇಮ ಪತ್ರ

ಪ್ರೇಮದೇವತೆ ನನ್ನ ಬಾಳಸಂಗಾತಿ,

ಹತ್ತು ವರ್ಷಗಳ ಹಿಂದಿನ ಮಾತು. ಪ್ರೇಮಿಗಳ ದಿನವೆಂದರೇನು ಎಂಬ ಕಲ್ಪನೆಯೇ ನನಗಿಲ್ಲದ ಹೊತ್ತು. ನೀನು ಮಾತ್ರ ವ್ಯಾಲೆಂಟೈನ್ ಡೇ ಬಗ್ಗೆ ಅದ್ಹೇಗೆ ತಿಳಿದುಕೊಂಡಿದ್ದಿಯೋ ಗೊತ್ತಿಲ್ಲ. ನಾನು ಅದೆಷ್ಟು ಸಲ ಕಣ್ಸನ್ನೆ ಮಾಡಿದರೂ, ಪ್ರಪೋಸ್ ಗೆ ಪ್ರಯತ್ನಿಸಿದರೂ ಪ್ರತಿಕ್ರಿಯಿಸದೆ ಸತಾಯಿಸಿದ್ದೆ ನೀನು. ಆದರೆ, ಲವರ್ಸ್ ಡೇಗಾಗಿಯೇ ಕಾದು ಕುಳಿತವಳಂತೆ ಫೆಬ್ರವರಿ 14ರಂದು ಮಟಮಟ ಮದ್ಯಾನದ ಸಮಯ ಪ್ರೇಮ ನಿವೇದನೆ ಮಾಡಿಬಿಟ್ಟಿದ್ದೆ. ನಮ್ಮ ಮನೆಗೇ ಬಂದು ಕಿಚನ್ ಗೆ ನುಗ್ಗಿ ನನಗೇ ಬೆಲ್ಲದ ಟೀ ಮಾಡಿಕೊಟ್ಟು ಮೆಲುದನಿಯಲ್ಲಿ ಐ ಲವ್ ಯು ಹೇಳಿ ಉತ್ತರಿಸಲೂ ಅವಕಾಶ ನೀಡದೆ ಎಸ್ಕೇಪ್…

ನೀನು ಭುವಿಗೆ ಬಂದಿರುವುದೇ ನನ್ನ ಪ್ರೀತಿಗಾಗಿ. ನಾನೇ ನಿನ್ನ ಬಾಳ ಸಂಗಾತಿ ಎಂದು ಬ್ರಹ್ಮ ಬರೆದಾಗಿದೆ. ಮರು ಮಾತನಾಡದೆ ನನ್ನ ಪ್ರೀತಿಯನ್ನು ಸ್ವೀಕರಿಸು ಅಷ್ಟೇ ಎಂಬ ಪ್ರೇಮಾಗ್ನೆ ನಿನ್ನ ದನಿಯಲ್ಲಿತ್ತು. ನೀನು ಹೇಳಿದ ಐ ಲವ್ ಯು ಎಂಬ ಪ್ರೇಮ ಮಂತ್ರ ಅಂದಿನಿಂದ ಇಂದಿನವರೆಗೆ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಲೇ ಇದೆ. ಪ್ರೀತಿ ಅಂಕುರಿಸಿದ ಆ ಸವಿ ಸಮಯ, ಆ ಮಧುರ ದನಿ ಮತ್ತು ಪ್ರೀತಿ ಬೆರೆತ ಬೆಲ್ಲದ ಚಹಾದ ಆಹ್ಲಾದ ಪ್ರತಿ ದಿನ, ಪ್ರತಿ ಕ್ಷಣ ನನ್ನೊಂದಿಗಿದೆ. ಅದೇ ಪ್ರೀತಿ, ಅದೇ ಅನುರಾಗ ಅದೇ ಭಾವ ಬಾಂಧವ್ಯ.

ಅಂದಿಗೂ ಇಂದಿಗೂ ಎಂದೆಂದಿಗೂ ನಿನ್ನ ಪ್ರೀತಿಗೆ ನಾನು ಚಿರರುಣಿಯಾಗಿರುತ್ತೇನೆ ಕಣೆ, ಇರಲೇಬೇಕು. ನಿನ್ನಲ್ಲಿ ಅದೆಷ್ಟು ಪ್ರೀತಿ ತುಂಬಿದೆ, ಭೂಮಿ ಮೇಲಿನ ಪ್ರೇಮ ದೇವತೆ ಕಣೆ ನೀನು. ತಾಯಿ ಮಕ್ಕಳಿಗೆ ಪ್ರೀತಿ, ಮಮತೆ ಧಾರೆ ಎರೆದಂತೆ ನನಗದೆಷ್ಟು ಪ್ರೀತಿ ಉಣ ಬಡಿಸಿದ್ದೀಯಾ. ನನ್ನಿಂದಾದ ಪ್ರಮಾದಗಳು, ಬೇಸರದ ಸಂಗತಿಗಳು, ಕಷ್ಟ-ನಷ್ಟ ಒಂದೆರಡಲ್ಲ. ಹತ್ತು ವರ್ಷಗಳಲ್ಲಿ ಖುಷಿಗಿಂತ ನೋವೇ ಹೆಚ್ಚು ಎಂಬ ಸತ್ಯ ನಂಗೊತ್ತು.

ಉಟ್ಟ ಬಟ್ಟೆ ಮೇಲೆ ಮನೆ ಬಿಟ್ಟು ಬಂದದ್ದು, ಕೈಲಿರುವ ಕೆಲಸ ಕಳೆದುಕೊಂಡು ಖಾಲಿ ಕುಳಿತದ್ದು. ಬಿಸಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡದ್ದು. ಸಂಭಂಧಿಕರ ನಿಂದನೆ, ಸರಿಕರು, ಅಕ್ಕ ಪಕ್ಕದ ಮನೆಗಳವರು ಆಡಿಕೊಂಡು ನಕ್ಕಿದ್ದು. ಅದೆಷ್ಟು ಅವಮಾನ, ಅಪಮಾನ ಅವೆಲ್ಲವನ್ನು ನನಗಾಗಿ, ನನ್ನ ಮೇಲಿನ ಪ್ರೀತಿಗಾಗಿ ನೀನು ನುಂಗಿ ನೀರು ಕುಡಿದದ್ದು ನನಗರಿವಿದೆ. ಆದರೆ, ನೀನು ಮಾತ್ರ ಒಂದೇ ಒಂದು ಸಲವೂ ಬೇಸರ ವ್ಯಕ್ತಪಡಿಸಲೇ ಇಲ್ಲ. ಪ್ರೀತಿಯಲ್ಲಿ ಒಂಚೂರು ವ್ಯತ್ಯಾಸ ಮಾಡಲೇ ಇಲ್ಲ. ರಿಯಲಿ ಗ್ರೇಟ್ ಮದರ್ ಹಾರ್ಟ್!

ಈಗೇಕೆ ಇಷ್ಟೆಲ್ಲಾ ನೆನಪಿಸಿಕೊಂಡು ಕಥೆ ಹೇಳುತ್ತಿದ್ದೇನೆ ಅಂತ ಯೋಚಿಸುತ್ತಿದ್ದೀಯಾ. ಇನ್ನು ಮುಂದೆ ನಾನು ಬದಲಾಗುತ್ತಿದ್ದೇನೆ ಕಣೆ. ಕಳೆದ ವ್ಯಾಲೆಂಟೈನ್ ಡೇನೇ ಕಡೆ. ಇನ್ನು ಮುಂದೆ ಕಷ್ಟ, ನಷ್ಟ, ಸುಖ:, ದುಖ:ಗಳ ನೆಪ ಹೇಳಿ ಕುಡಿಯಲು ಹೋಗವುದಿಲ್ಲ. ಇನ್ನು ಸಿಗರೇಟ್ ಪ್ಯಾಕ್ ನನ್ನ ಜೇಬಿನಲ್ಲಿ ಸಿಕ್ಕರೆ ಕೇಳು ನಿನ್ನ ಮೇಲಾಣೆ. ದುಶ್ಚಟಗಳಿಂದ ದೂರ ಆಗ್ತೀದೀನಿ. ದುಶ್ಚಟಗಳಿಂದ ಮುಕ್ತಿ ಪಡೆದರೆ ನಾನು ಮತ್ತೆ ಹತ್ತು ವರುಷದ ಹಿಂದಿನ ವ್ಯಕ್ತಿಯೇ ಎಂಬುದು ನಿನಗೂ ಗೊತ್ತು. ನಿನ್ನ ಪ್ರೀತಿಯ ರುಣ ಸಂದಾಯ ಮಾಡಲು ಅಣಿಯಾಗುತ್ತಿದ್ದೇನೆ. ನಿನ್ನ ಪ್ರೀತಿಯ ಪ್ರೇರಣೆಯೊಂದಿಗೆ…  ಹ್ಯಾಪಿ ವ್ಯಾಲೆಂಟೈನ್ ಡೇ ಬಿ ಲೇಟೆಡ್… ಹೊಸ ಬದಲಾವಣೆಯೊಂದಿಗೆ…

-ನಿನ್ನ ವಿನಯ

Related Articles

Leave a Reply

Your email address will not be published. Required fields are marked *

Back to top button