ವಿದ್ಯಾರ್ಥಿಗಳ ಖುಷಿಗೆ ಬ್ರೇಕ್ ಹಾಕಿದೆ ಅತಿಯಾದ ಶಿಸ್ತು ಹೇರಿಕೆ!
ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬ ನುಡಿ ಈಗ ಅರ್ಥ ಕಳೆದುಕೊಳ್ಳುತ್ತಿದೆ. ಬಹುತೇಕ ಕಡೆ ಕನಸಿನ ಕಾಲೇಜು ಬಂಧೀಖಾನೆಯಂತೆ ಭಾಸವಾಗ ತೊಡಗಿವೆ. ಕಾಲೇಜಿನ ಕ್ಲಾಸ್ ರೂಮುಗಳಲ್ಲಿ ಮೇಷ್ಟ್ರುಗಳ ಕಣ್ಣಡಿಯಲ್ಲಿ ಪಾಠ. ಕಾಲೇಜು ಕ್ಯಾಂಪಸ್ ನಲ್ಲಿ ಸಿಸಿ ಕ್ಯಾಮಾರಾಗಳ ಕಣ್ಣಡಿಯಲ್ಲಿ ಕಾಲ ಕಳೆಯುವ ಅನಿವಾರ್ಯತೆ ಬಂದೊದಗಿದೆ. ಪರಿಣಾಮ ವಿದ್ಯಾರ್ಥಿ ಜೀವನವೂ ಯಾಂತ್ರಿಕತೆಗೆ ಒಳಗಾಗಿದೆ.
ಆಟ, ಪಾಠದ ಜೊತೆಗೆ ತುಂಟಾಟ ಎಂಬುದು ದೂರದ ಬೆಟ್ಟವೇ ಆಗಿದೆ. ಹೀಗಾಗಿ, ಯುವ ವಿದ್ಯಾರ್ಥಿಗಳ ಮಧುರ ಗಳಿಗೆ ಖಾರ ಉಪ್ಪು ಇಲ್ಲದ ಊಟದಂತೆ ಸಪ್ಪೆಯಾಗಿ ಕಳೆದು ಹೋಗುತ್ತಿದೆ. ಪರಿಣಾಮ ಏಂಜಾಯಮೆಂಟ್ ನೆಪದಲ್ಲಿ ಯುವ ವಿದ್ಯಾರ್ಥಿಗಳು ರಜೆ ದಿನಗಳಲ್ಲಿ ಟ್ರಿಪ್ ಹೋಗುವುದು. ಪಾರ್ಟಿಗಳ ಮೊರೆ ಹೋಗುವುದು ಮಾಮೂಲಾಗ ತೊಡಗಿದೆ. ಅತಿಯಾದ ಶಿಸ್ತು ಹೇರಿಕೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ಬದಲು ದಿಕ್ಕು ತಪ್ಪಿಸುತ್ತಿದೆ ಎಂಬುದು ಬಹುತೇಕ ವಿದ್ಯಾರ್ಥಿಗಳ ವಾದವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ಹೆಚ್ಚಿದ ಅಪರಾಧ ಪ್ರವೃತ್ತಿ ತಡೆಗೆ ಸಿಸಿ ಕ್ಯಾಮರಾ ಅಳವಡಿಕೆ, ಶಿಸ್ತಿನ ಹೇರಿಕೆ ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ನಾವು ಕಾನೂನು ಕ್ರಮ ಎದುರಿಸಬೇಕಾಗಿ ಬರುತ್ತದೆ ಎಂಬುದು ಕಾಲೇಜು ಮುಖ್ಯಸ್ಥರ ವಾದ. ಒಟ್ಟಾರೆಯಾಗಿ ಕಾಲೇಜು ಸಂಸ್ಕೃತಿಯೂ ಸಹ ಆಧುನೀಕತೆಗೆ ತೆರೆದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಖುಷಿಗೆ ಬ್ರೇಕ್ ಬಿದ್ದಿರುವುದಂತು ಸುಳ್ಳಲ್ಲ.