ಇದು ಕಾಂಗ್ರೆಸ್-ಬಿಜೆಪಿ ಬಲಾಬಲ ಪ್ರದರ್ಶನ ವೇದಿಕೆ ಅಲ್ಲ ಸ್ವಾಮಿ, ಕರ್ನಾಟಕ ಚುನಾವಣೆ!
-ಮಲ್ಲಿಕಾರ್ಜುನ ಮುದನೂರ್
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶ ಗೆಲ್ಲಬೇಕೆಂದರೆ ಕರ್ನಾಟಕ ರಾಜ್ಯ ಮೊದಲು ಗೆಲ್ಲಬೇಕು. ಇದು ರಾಷ್ಟ್ರೀಯ ಪಕ್ಷಗಳ ನಾಯಕರ ಲೆಕ್ಕಾಚಾರ. ಪರಿಣಾಮ ಶತಾಯ ಗತಾಯ ಕರ್ನಾಟಕದಲ್ಲಿ ತಮ್ಮ ಪಕ್ಷದ ಗೆಲುವಿನ ಝಂಡಾ ಹಾರಿಸಲೇಬೇಕು ಎಂಬ ಜಿದ್ದಿಗೆ ಬಿದ್ದಿವೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಒಂದು ಕಡೆ ಟೂರ್ ಮೇಲೆ ಟೂರ್ ಹಮ್ಮಿಕೊಂಡಿದ್ದಾರೆ. ಮತ್ತೊಂದು ಕಡೆ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ಧರಾಮಯ್ಯ ರಾಜ್ಯ ಸುತ್ತುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದ ನಾಯಕರುಗಳು ಹೋದಲ್ಲೆಲ್ಲಾ ಜನ ಸೇರುತ್ತಿದ್ದಾರೆ. ನಾಯಕರ ಬಣ್ಣದ ಮಾತುಗಳನ್ನು ಕೇಳಿ ಕೇಕೆ, ಜಯ ಘೋಷಗಳನ್ನು ಹಾಕುತ್ತಿದ್ದಾರೆ. ನಾಯಕರೂ ಸಹ ತಮ್ಮ ಪಕ್ಷಕ್ಕೇ ಜನ ಬೆಂಬಲವಿದೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯುವುದು ಗ್ಯಾರಂಟಿ ಅಂತ ಎರಡೂ ಪಕ್ಷಗಳ ನಾಯಕರು ಬೀಗುತ್ತಿದ್ದಾರೆ.
ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಾರ. ಬಿಜೆಪಿ ಸಿಎಂ ಅಬ್ಯರ್ಥಿ ಜೈಲಿಗೆ ಹೋಗಿ ಬಂದವರು ಎಂದೆಲ್ಲಾ ಹೇಳುತ್ತಾರೆ. ಸಿಎಂ ಸಿದ್ಧರಾಮಯ್ಯ ಬಿಜೆಪಿಯವ್ರು ಡೋಂಗಿಗಳು, ಕೋಮುವಾದಿಗಳು, ಪ್ರಧಾನಿಯಾಗಲು ನರೇಂದ್ರ ಮೋದಿ ನಾಲಾಯಕ್ ಅಂತ ತಮ್ಮದೇ ಶೈಲಿಯಲ್ಲಿ ಡೈಲಾಗ್ ಡೆಲೆವರಿ ಮಾಡುತ್ತಿದ್ದಾರೆ. ಇನ್ನೂ ಒಂದು ಹಜ್ಜೆ ಮುಂದೆ ಹೋಗಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಪ್ರಧಾನಿ ನರೇಂದ್ರ ಮೋದಿಗೆ ಚಿಲ್ಲರೆ ಪ್ರಧಾನಿ ಅಂದುಬಿಟ್ಟಿದ್ದಾರೆ.
ಮತ್ತೊಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು ಟೆನ್ ಪರ್ಸೆಂಟ್ ಸರ್ಕಾರ ಅಂದಿದ್ದಾರೆ. ಬಿಜೆಪಿ ರಾಷ್ಟ್ರದ್ಯಕ್ಷ ಅಮಿತ್ ಶಾ ಅವರೂ ಸಹ ಸಿಎಂ ವಿರುದ್ಧ ಮುಗಿಬಿದ್ದಿದ್ದು ಸಿಎಂ ವಾಚ್ ಪ್ರಕರಣ ಪ್ರಸ್ತಾಪಿಸಿ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೆಸೆಯಿರಿ ಎಂದು ಸಾರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದು ಕರೆದಿದ್ದಾರೆ.
ಎರಡೂ ಪಕ್ಷಗಳ ನಾಯಕರು ಮತಬೇಟೆಗಾಗಿ ಟೆಂಪಲ್ ರನ್, ರೈತ ಸಮಾವೇಶ, ಮಹಿಳಾ ಸಮಾವೇಶ, ಎಸ್ಸಿ, ಎಸ್ಟಿ ಸಮಾವೇಶಗಳ ಮೊರೆ ಹೋಗಿದ್ದಾರೆ. ಆಗಾಗ ಸಾಮಾನ್ಯರ ಜೊತೆ ಬೆರೆಯುವ ಗಿಮಿಕ್ ಕೂಡ ಮಾಡಿದ್ದಾರೆ. ಹೀಗೆ ಕರ್ನಾಟಕ ರಾಜ್ಯದ ಜನರ ಮನಗೆಲ್ಲಲು ನಾನಾ ಸರ್ಕಸ್ ಮಾಡುವಲ್ಲಿ ಸ್ಪರ್ದೆಗೆ ಬಿದ್ದಿವರಂತೆ ತಾಮುಂದು ನಾಮುಂದು ಅಂತ ಸಾಗಿದ್ದಾರೆ.
ಆದರೆ, ಸಮಾವೇಶದ ವೇದಿಕೆಗಳಲ್ಲಿ ಪರಸಪರ ಕೆಸರೆರಚಾಟದಲ್ಲಿ ತೊಡಗಿರುವ ನಾಯಕರು ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದಾರೆಯೇ ಹೊರತು ಯಾರೊಬ್ಬರು ಪ್ರಬುದ್ಧತೆಯ ರಾಜಕೀಯ ನಡೆ ಪ್ರದರ್ಶಿಸಿಲ್ಲ. ಜನರ ಸಮಸ್ಯೆ ಆಲಿಸಿ ಅಭಿವೃದ್ಧಿಯ ಮಾತುಗಳನ್ನೇ ಮರೆತು ಕೇವಲ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಆ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಹೊರತು ಮನಮುಟ್ಟುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ರಾಜ್ಯದ ನಾಯಕರೂ ಸಹ ರಾಷ್ಟಮಟ್ಟದ ನಾಯಕರು ಬಂದಾಗ ಜನರನ್ನು ಸೇರಿಸುವುದು. ಜೈಕಾರ ಮೊಳಗಿಸುವುದು, ಕೇಕೆ ಹಾಕುವುದು, ಚಪ್ಪಾಳೆಯ ಸದ್ದು ಜೋರಾಗುವುದನ್ನು ಮಾತ್ರ ಲೆಕ್ಕ ಹಾಕುತ್ತಿದ್ದಾರೆ. ಜನರ ಮನ ತಲುಪುತ್ತಿದ್ದೇವೆಯೇ ಎಂಬುದರ ಬಗ್ಗೆ ಯಾವೊಬ್ಬ ನಾಯಕರು ಪರೀಕ್ಷೆಗೆ ಮುಂದಾಗಿಲ್ಲ. ಪರಿಣಾಮ ಪ್ರಗ್ನಾವಂತ ಮತದಾರರು ಎರಡೂ ಪಕ್ಷಗಳ ನಾಯಕರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಅಭಿವೃದ್ಧಿಯ ಮಾತುಗಳನ್ನೇ ಮರೆತು ಕೇವಲ ಕೆಸರೆರಚಾಟದಲ್ಲಿ ತೊಡಗಿರುವ ನಾಯಕರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕದ ವಿಧಾನಸಭೆ ಚುನಾವಣೆ ಪ್ರಜಾಪ್ರಭುತ್ವದ ಭಾಗವಾಗಿದ್ದು ಜನರಿಗಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮಾತ್ರ ಕೇವಲ ಎರಡು ಪಕ್ಷಗಳ ಬಲಾಬಲ ಪ್ರದರ್ಶನಕ್ಕಾಗಿ ಚುನಾವಣೆ ನಡೆಯುತ್ತಿದೆ ಎಂದೇ ಭಾವಿಸಿದಂತಿದೆ. ಎರಡೂ ಪಕ್ಷಗಳ ನಾಯಕರು ಒಬ್ಬರ ವಿರುದ್ಧ ಒಬ್ಬರು ಅಬ್ಬರಿಸಿ ಬೊಬ್ಬಿರಿಯುತ್ತಿರುವುದು ಜನತಂತ್ರ ವ್ಯವಸ್ಥೆಯ ಅಣಕವೇ ಆಗಿದೆ. ಹೀಗಾಗಿ, ಈಗಿನಿಂದಲೇ ಚುನಾವಣ ಆಯೋಗ ಈ ಬಗ್ಗೆ ಗಮನಹರಿಸಬೇಕಿದೆ. ಅಸಂಬ್ಧದ್ಧ ಚುನಾವಣ ಪ್ರಚಾರಕ್ಕೆ ಕಡಿವಾಣ ಹಾಕಬೇಕಿದೆ ಎಂಬುದು ವಿಚಾರವಾದಿಗಳ ಅಭಿಪ್ರಾಯವಾಗಿದೆ.