ಅಂಕಣ

‘ದಂಧೆಕೋರರ ರಕ್ಷಣೋದ್ಯಮ’ ಆಗುತ್ತಿದೆ ರಾಜಕೀಯ ಕ್ಷೇತ್ರ!

ಏಳು ದಶಕಗಳಾದರೂ ಏಳು-ಬೀಳು ಧೂಳು ತಪ್ಪಿಲ್ಲ, ನೀರು ಸೂರು ಸಿಕ್ಕಿಲ್ಲ!

-ವಿನಯ ಮುದನೂರ್

ಕಣ್ಣು ಕೆಂಪಾಗುತ್ತಿದೆ, ನೋವು ಅಂತ ಮೊನ್ನೆ ನೇತ್ರರೋಗ ತಗ್ನರ ಬಳಿ ತಪಾಸಣೆಗೆ ಹೋಗಿದ್ದೆ. ತಾಪಾಸಣೆ ಬಳಿಕ ಇವಕ್ಕೆಲ್ಲಾ ಮದ್ದೇ ಇಲ್ಲ ಅಥವಾ ಚಿಕಿತ್ಸಕ ಶಕ್ತಿಯನ್ನು ನಾವೇ ಕಳೆದುಕೊಂಡಿದ್ದೇವೆ, ಅನುಭವಿಸಲೇ ಬೇಕು ಅಂದರು. ನನಗೆ ಅಚ್ಚರಿ. ನಾನು ಸರ್.. ಅನ್ನುತ್ತಿದ್ದಂತೆ ಗಾಬರಿ ಆಗಬೇಡಿ. ನಾನು ನಿಮ್ಮ ಕಣ್ಣಿನ ವಿಷಯ ಹೇಳುತ್ತಿಲ್ಲ. ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಬೇಜವಬ್ದಾರಿ ಫಲದಿಂದಾಗಿ ಜನ ಇಂಥ ತೊಂದರೆ ಅನುಭವಿಸಬೇಕಾಗಿದೆ.

ಸದಾ ಕಾಲ ಧೂಳು ತುಂಬಿದ ರಸ್ತೆಯಲ್ಲಿ ತಿರುಗಾಡಿದರೆ ಹೀಗೆ ಕಣ್ಣಿನ ಸಮಸ್ಯೆ ಕಾಡುವುದು ಸಹಜ. ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಓಡಾಡಿ ಎಷ್ಟೋ ಜನ ಬೆನ್ನುಮೂಳೆ ತೊಂದರೆಗೀಡಾಗಿದ್ದಾರೆ. ಸ್ವಚ್ಛತೆ ಕಾಪಾಡದ ಕಾರಣಕ್ಕೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಶುದ್ಧ ಕುಡಿಯುವ ನೀರು ಸಿಗದೆ ಅನೇಕರು ನಾನಾ ರೋಗಗಳಿಗೆ ತುತ್ತಾಗಿದ್ದಾರೆ. ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇವೆ ಹೊರತು ರೋಗ ಹರಡದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯಬಂದು ಏಳು ದಶಕ ಕಳೆದರೂ ಮೂಲ ಸೌಕರ್ಯಗಳಿಗಾಗಿ ಹೋರಾಡುವ ದುಸ್ಥಿತಿಯಲ್ಲಿದ್ದೇವೆ.  ಅನೇಕರಿಗೆ ಇರಲು ಸೂರಿಲ್ಲ, ಎರಡೊಪ್ಪತ್ತಿನ ಊಟಕ್ಕೂ ಗತಿಯಿಲ್ಲ.

ನಾವು ಆಯ್ಕೆ ಮಾಡಿದ ಭೂಪರು ಮಾತ್ರ ಇದು ಯಾವುದರ ಪರಿವಿಲ್ಲದೆ ಶಾಸಕರಾಗಿ, ಸಂಸದರಾಗಿ ಗ್ಲಾಸ್ ಹಾಕಿಕೊಂಡು ಎಸಿ ಕಾರುಗಳಲ್ಲಿ ಮೆರೆಯುತ್ತಿದ್ದಾರೆ. ಶುದ್ಧ ನೀರು ಸೇವಿಸಿ ನಮ್ಮೆದುರೇ ಬಾಟಲ್ ಎಸೆಯುತ್ತಾರೆ. ಚುನಾವಣೆ ಬಂದಾಗ ಮದ್ಯದ ಬಾಟಲಿಗಳನ್ನು ಎಸೆಯುತ್ತಾರೆ. ಕೈಗೊಂದಷ್ಟು ಹಣ ನೀಡುತ್ತಾರೆ. ಮತ ಮಾರಿಕೊಂಡ ಜನ ಮತ್ತೆ ಅಂಥವರನ್ನೆ ಹೆಗಲಮೇಲೆ ಹೊತ್ತುಕೊಂಡು ಜೈ ಘೋಷಣೆ ಮೊಳಗಿಸುತ್ತಾರೆ. ಆ ವೈದ್ಯರ ಜನಪರ ಕಾಳಜಿ ನಿಜಕ್ಕೂ ಗ್ರೇಟ್. ಬಟ್, ಅಂತವರ ಮಾತು ಅದೆಷ್ಟು ಜನ ಕೇಳುತ್ತಾರೆ?

ಚುನಾವಣ ಕಣದಲ್ಲಿ ಝಣ ಝಣ ಕಾಂಚಾಣದ್ದೇ ಕಾರುಬಾರು ಶುರುವಾಗಿದೆ. ಈ ಹಿಂದೆಲ್ಲಾ ಚುನಾವಣೆ ನೀತಿ ಸಂಹಿತೆ ಘೋಷಣೆ ಆದ ಬಳಿಕ ರಂಗೇರುತ್ತಿದ್ದ ಚುನಾವಣ ಅಖಾಡ ಈಬಾರಿ ಮೂರು ತಿಂಗಳು ಮೊದಲೇ ಕಾವೇರಿದೆ. ರಾಜಕೀಯ ಪಕ್ಷಗಳು ಗೆಲ್ಲುವ ಕುದರೆಗೆ ಮಾತ್ರ ಟಿಕೆಟ್ ಎಂದು ಬಹಿರಂಗವಾಗಿಯೇ ಘೋಷಿಸಿವೆ. ಅದರರ್ಥ ಅಬ್ಯರ್ಥಿಯಾಗಲು ಯಾವುದೇ ಮಾನದಂಡದ
ಅಗತ್ಯ ಇಲ್ಲ. ಪಕ್ಷ, ಸಿದ್ಧಾಂತ , ಸಮಾಜ ಸೇವೆ ಎಲ್ಲವೂ ನಗಣ್ಯ. ನಮ್ಮ ಕ್ಯಾಂಡಿಡೇಟ್ ಗೆಲುವಿಗಾಗಿ ಎಲ್ಲದಕ್ಕೂ ಸಿದ್ಧನಿರಬೇಕು. ಎಲ್ಲಕ್ಕಿಂತ ಮೊದಲು ಹಣಬಲ, ತೋಳ್ಬಲ, ಜಾತಿಬಲ ಉಳ್ಳವನಾಗಿರಬೇಕು ಎಂಬುದು ಅಘೋಷಿತ ನಿಯಮ.

ಒಂದು ವಿಧಾನಸಭೆ ಚುನಾವಣೆ ಗೆಲ್ಲುವ ಅಬ್ಯರ್ಥಿ 10ಕೋಟಿ ರೂಪಾಯಿಯಿಂದ 20ಕೋಟಿ ರೂಪಾಯಿವರೆಗೆ ಖರ್ಚು ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿರೋದು ಬಹಿರಂಗ ಸತ್ಯ. ಇನ್ನು ಪ್ರಾಮಾಣಿಕರು, ನಿಜವಾದ ಸಮಾಜ ಸೇವಕರು, ಹೋರಾಟಗಾರರು ಈ ಚುನಾವಣೆಯ ಬಿರುಗಾಳಿಯಲ್ಲಿ ನಿಲ್ಲುವುದು ಸಾಧ್ಯವೇ?. ಯಾವುದೇ ಮತಕ್ಷೇತ್ರದತ್ತ ಕಣ್ಣಾಡಿಸಿ ನೋಡಿ. ರಾಜಕೀಯ ಹಿನ್ನೆಲೆ ಇರುವವರು ಮತ್ತು ಉದ್ಯಮಿಗಳ ದಂಡೇ ಕಾಣಿಸುತ್ತಿದೆ. ಅದರಲ್ಲೂ ಅಪರಾಧ ಹಿನ್ನೆಲೆ, ಭ್ರಷ್ಟಾಚಾರ ಆರೋಪ ಹೊತ್ತವರ ಸಂಖ್ಯೆಯೇ ಹೆಚ್ಚಾಗಿದೆ. ಪಾಲಿಟಿಕಲ್ ಪವರ್ ಬಳಸಿಕೊಂಡು ತಮ್ಮ ಉದ್ಯಮಗಳ ರಕ್ಷಣೆ, ಕಳ್ಳದಂಧೆಯ ಸಾಮ್ರಾಜ್ಯ ವಿಸ್ತರಿಕೊಳ್ಳುವ ಸಲುವಾಗಿಯೇ ಬಹುತೇಕರು ರಾಜಕೀಯಕ್ಕೆ ಇಳಿದಿದ್ದಾರೆ. ರಾಜಕೀಯವನ್ನು ಚುನಾವಣೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸುವ ದಂಧೆಯನ್ನಾಗಿ ಮಾಡಿಕೊಂಡಿರೋದು ಮೇಲ್ನೋಟದಲ್ಲೇ ಕಂಡುಬರುತ್ತಿದೆ.

ರಾಜಕೀಯ ಎಂಬುದು ಸಮಾಜ ಸೇವಾ ಕ್ಷೇತ್ರವಾಗಿ ಉಳಿಯದೇ ಕಳ್ಳದಂಧೆಗಳ ರಕ್ಷಣೋದ್ಯಮವಾಗಿ ಮಾರ್ಪಾಡಾಗುತ್ತಿದೆ. ಹಿಂದೆಂದಿಗಿಂತಲೂ 2018ರ ಚುನಾವಣೆ ತನ್ನ ಘೋರ ಮುಖವನ್ನು ಪ್ರದರ್ಶಿಸುತ್ತಿದೆ. ಪರಿಣಾಮ ಜನತಂತ್ರ ವ್ಯವಸ್ಥೆಯೇ ಬುಡಮೇಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಶಾಸಕರಾಗಿ, ಸಚಿವರಾಗಿ ಅಧಿಕಾರ ಹಿಡಿದವರು ಅನೇಕರು ತಮ್ಮ ಕ್ಷೇತ್ರಗಳಲ್ಲಿ ರಾಜಪ್ರಭುತ್ವ ಸಾಧಿಸುವ ಆಕಾಂಕ್ಷೆಯನ್ನು ಮೆರೆಯುತ್ತಿದ್ದಾರೆ. ಹೀಗಾಗಿ, ಇನ್ನು ಎಚ್ಚೆತ್ತುಕೊಳ್ಳದಿದ್ದಲ್ಲಿ ಪ್ರಜಾಪ್ರಭುತ್ವದ ಅಧಪತನಕ್ಕೆ ಕಾರಣೀಭೂತರು ಪ್ರಗ್ನಾವಂತ ಮತದಾರರೇ ಆಗಬೇಕಾಗುತ್ತದೆ.

ಪ್ರಾಮಾಣಿಕರು, ಪ್ರಗ್ನಾವಂತರು ತಪ್ಪನ್ನು ತಪ್ಪು ಎಂದು ಹೇಳುವ ಎದೆಗಾರಿಕೆಯನ್ನು ಮೊದಲು ತೋರಬೇಕಿದೆ. ನಮಗೇಕೆ ಬೇಕು, ನಮ್ಮ ಮಾತು ಯಾರು ಕೇಳುತ್ತಾರೆ ಎಂದುಕೊಂಡು ಸುಮ್ಮನೆ ಕುಳಿತರೆ ತಪ್ಪಿನಲ್ಲಿ ಪಾಲುದಾರರಾದಂದತೆಯೇ ಸರಿ . ಹೀಗಾಗಿ, ಕೊನೆ ಪಕ್ಷ ತಪ್ಪನ್ನು ಖಂಡಿಸುವ ಧೈರ್ಯ ತೋರಬೇಕಿದೆ. ಹೋರಾಟ ಮನೋಭಾವ ಬೆಳೆಸಿಕೊಂಡು ರಾಜಪ್ರಭುತ್ವ ಸಾಧಿಸಲು ಹಾತೊರೆಯುತ್ತಿರುವ ಪ್ರಜಾಪ್ರಭುತ್ವ ವಿರೋಧಿಗಳ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಸೆಟೆದು ನಿಲ್ಲಬೇಕಿದೆ. ಆ ಮೂಲಕ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯವನ್ನು ಗೌರವಿಸಬೇಕಿದೆ. ಮಹಾತ್ಮ ಗಾಂಧೀಜಿ ಅವರ ಕನಸಿನ ಭಾರತವನ್ನು ಕಟ್ಟಬೇಕಿದೆ. ಈ ಚುನಾವಣೆಯಲ್ಲಿ ಯಾರೊಬ್ಬರಿಂದಲೂ ನಯಾಪೈಸೆ ಪಡೆಯೋದಿಲ್ಲ ಎಂದು ದೃಢ ಸಂಕಲ್ಪ ಮಾಡೋಣ.

Related Articles

Leave a Reply

Your email address will not be published. Required fields are marked *

Back to top button