ನೂತನ ತಾಲೂಕು ಹೊಸಿಲಲಿ ನಿಂತಿರುವ ಹುಣಸಗಿ ಪಟ್ಟಣದ ಪರಿಚಯ
ನೂತನ ತಾಲೂಕು ಹುಣಸಗಿ ಕುರಿತು ಪಾಟೀಲರ ಬರಹ
3 ದಶಕದ ಸಾಂಘಿಕ ಹೋರಾಟದ ಪ್ರಯತ್ನದ ಫಲದಿಂದ ಇಂದು ಹುಣಸಗಿ ತಾಲೂಕು ಘೋಷಣೆಯಾಗಿ ಇಂದು ಕಾರ್ಯಾರಂಭಗೊಳ್ಳುತ್ತಿದೆ. ಭೌಗೋಳಿಕ ವ್ಯಾಪ್ತಿ, ಪಟ್ಟಣದ ಬೆಳವಣಿಗೆ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿ ಮುಂತಾದ ಅಂಶಗಳನ್ನಿಟ್ಟುಕೊಂಡು ಘನ ಸರಕಾರ ಹುಣಸಗಿಯನ್ನು ನೂತನ ತಾಲೂಕು ಎಂದು ಘೋಷಿಸಿದೆ. ಇಲ್ಲಿನ ಜನರ 3 ದಶಕದ ಕನಸು ಈಗ ನೆರವೇರಿದೆ.
ಸುರಪುರದಿಂದ ವಿಭಜನೆಯಾಗಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವದು ಒಂದು ಬಗೆಯ ಅಣ್ಣ ತಮ್ಮಂದಿರು ಆಸ್ತಿ ಹಂಚಿಕೊಂಡಂತಿದೆ ಅಷ್ಟೆ. ಆದರೆ ಭಾವನಾತ್ಮಕ ಸಂಬಂಧವನ್ನಲ್ಲ. ತಾಲೂಕು ಆಡಳಿತದಿಂದ ಸ್ವತಂತ್ರ ಸಿಕ್ಕರೂ ವಿಧಾನಸಭೆ ಕ್ಷೇತ್ರದ ದೃಷ್ಟಿಯಿಂದ ನಾವಿನ್ನೂ ಅವರೊಂದಿಗೆ ಚಿಕ್ಕ ತಮ್ಮನಂತೆ ಇದ್ದೇವೆ ಎಂಬ ಭಾವನೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಹುಣಸಗಿ ಪ್ರತ್ಯೇಕ ಆಡಳಿತಕ್ಕೆ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಈಗಾಗಲೇ ಬಹುತೇಕ ತಾಲೂಕು ಮಟ್ಟದ ಸರಕಾರಿ ಕಛೇರಿಗಳಿದ್ದರೂ ಒಂದು ರೀತಿಯ ಉಪ ವಿಭಾಗದಂತೆ ಇದ್ದವು. ಈಗ ಸ್ವತಂತ್ರವಾಗಿ ತಾಲೂಕು ಕಛೇರಿಯನ್ನು ಹೊಂದುತ್ತಿವೆ.
ಅಣ್ಣ(ಸುರಪುರ)ನ ಆಸ್ತಿಯಲ್ಲಿ ಹೋಬಳಿ ಹಂಚಿಕೊಂಡಿದ್ದೇವೆ, ಹಳ್ಳಿಗಳನ್ನು ಪಡೆದಿದ್ದೇವೆ, ಕಛೇರಿಗಳನ್ನು ಪಡೆದಿದ್ದೇವೆ ಅಂದ ಮೇಲೆ ಸಹಜವಾಗಿ ಅಣ್ಣ(ಸುರಪುರ)ನ ಇತಿಹಾಸ, ಸಂಸ್ಕøತಿಯಲ್ಲೂ ನಮಗೆ ಪಾಲು ಸಿಗಲೇಬೇಕಲ್ಲವೆ? ಸಿಕ್ಕೇ ಸಿಗುತ್ತದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಅಣ್ಣ(ಸುರಪುರ)ನ ಭವ್ಯ ಐತಿಹಾಸಿಕ ಪರಂಪರೆ ನಮಗೂ ಇದೆ. ನಮ್ಮಲ್ಲೂ ಕೋಟೆಗಳಿವೆ, ದೇವಸ್ಥಾನಗಳಿವೆ, ಶರಣರಿದ್ದರು, ಕಾಲಜ್ಞಾನಿಗಳಿದ್ದರು, ರಾಜರಿದ್ದರು, ರಾಣಿಯರಿದ್ದರು, ಮಠಗಳಿವೆ, ದೊಡ್ಡ ಡ್ಯಾಂ ಇದೆ, ಎಲ್ಲದಕ್ಕಿಂತ ಹೆಚ್ಚಾಗಿ ವಿಶ್ವದ ಗಮನ ಸೆಳೆದ ಆದಿಮಾನವರು ಇದ್ದರು!!!.ಅವರ ಶಿಲಾಸಮಾಧಿಗಳು ಇವೆ!!!. ಇವರುಗಳ ಮೇಲೆ ಈಗಾಗಲೇ ಬಹುತೇಕ ಅಧ್ಯಯನಗಳಾಗಿವೆ. ಹೊಸದನ್ನೇನೂ ಕಂಡು ಹಿಡಿಯುವದು ಇಲ್ಲವೆಂಬಷ್ಟು ಕೆಲಸವಾಗಿದ್ದರೂ, ನೂತನ ತಾಲೂಕಿನ ಅಲಕ್ಷಿತ ಹಳ್ಳಿಗಳ ಕ್ಷೇತ್ರ ಕಾರ್ಯ ಮಾಡಿದರೆ ಮತ್ತಷ್ಟು ಹೊಸದನ್ನು ದಾಖಲಿಸುವ ಅಂಶಗಳು ಸಿಕ್ಕೇ ಸಿಗುತ್ತವೆ. ಈ ನಿಟ್ಟಿನಲ್ಲಿ ಇನ್ನೂ ಕೆಲಸವಾಗಬೇಕಿದೆ.
1870 ರ ದಶಕದಲ್ಲಿ ಪ್ರಖ್ಯಾತ ಪುರಾತತ್ವಜ್ಞ ರಾಬರ್ಟ್ ಬ್ರೂಸ್ ಫೂಟ್ ಅವರು ಎಡಹಳ್ಳಿ ಹಾಗೂ ಅರಕೇರಾ(ಜೆ) ಗ್ರಾಮಗಳಲ್ಲಿ ಜಮೀನುಗಳಲ್ಲಿ ಆದಿ ಮಾನವರ ಶಿಲಾಯುಧಗಳನ್ನು ಶೋಧಿಸಿದ್ದರು. ಜೊತೆಗೆ ಡಾ.ಸಿ.ಮಹಾದೇವನ್‍ರವರ the journal of hydrabad geological survey ಕೃತಿಯಲ್ಲೂ ಈ ಭಾಗದ ಆದಿಮಾನವರ ನೆಲೆಗಳನ್ನು ದಾಖಲಿಸಿದ್ದಾರೆ. ಈ ಕೃತಿ ಪೂನಾ ಡೆಕ್ಕನ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಪದ್ದಯ್ಯ ಎಂಬ ಪ್ರಾಕ್ತನ ತಜ್ಞನ ಕಣ್ಣಿಗೆ ಬಿದ್ದದ್ದೇ ತಡ ಯು.ಜಿ.ಸಿ.ಧನಸಹಾಯದಿಂದ ಹುಣಸಗಿಗೆ ಬಂದು ಹುಣಸಗಿಯನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಸುತ್ತಲಿನ ಹಳ್ಳಿಗಳನ್ನು ಶೋಧಿಸಲು ಮುಂದಾಗುತ್ತಾರೆ.
ಸುತ್ತಲಿನ ಪ್ರತಿ ಹಳ್ಳಿಗೂ ಭೇಟಿ ನೀಡಿ ಅಲ್ಲಿ ದೊರೆತ ಕಲ್ಲು,ಮಡಿಕೆ ಚೂರುಗಳು, ಕಲ್ಲಿನ ಬ್ಲೇಡುಗಳು, ಪ್ರಾಣಿಗಳ ಮೂಳೆಗಳನ್ನು ಪರೀಕ್ಷಿಸುತ್ತಾ ಅಲೆದಾಡುತ್ತಿದ್ದ ಪದ್ದಯ್ಯನವರನ್ನು ಕಂಡ ಜನ ಬೆರಗುಗಣ್ಣಿನಿಂದ ನೋಡುತ್ತಿದ್ದರು. 1974 ರಿಂದ 90ರ ದಶಕದವರೆಗೂ ಈ ಭಾಗವನ್ನು ಶೋಧಿಸಿದರು. ಇದರ ಪ್ರಯತ್ನದ ಫಲವಾಗಿ investication neolithic cultures of shorapur doab, south india ಎಂಬ ಮಹಾ ಪ್ರಬಂಧವನ್ನು 1973ರಲ್ಲಿ ನೆದರ್‍ಲ್ಯಾಂಡ್ ನ ಪ್ರಖ್ಯಾತ ಬ್ರಿಲ್ ಪ್ರಕಾಶನವು ಈ ಕೃತಿಯನ್ನು ಪ್ರಕಟಿಸಿದೆ.
ನಮ್ಮ ಹುಣಸಗಿ ತಾಲೂಕಿನ ಇತಿಹಾಸವು ಪೂರ್ವ ಇತಿಹಾಸ ಕಾಲದಿಂದ ಅಂದರೆ, 1.1 ದಶಲಕ್ಷ ವರ್ಷಗಳಷ್ಟು ಪುರಾತನ ಐತಿಹಾಸಿಕ ಪರಂಪರೆ ಈ ತಾಲೂಕಿಗಿದೆ. ಹುಣಸಗಿ, ಗುಂಡಲಗೇರಾ, ಬೂದಿಹಾಳ, ಅರಕೇರಿ, ದೇವಾಪುರ, ಗುಳಬಾಳ, ವಜ್ಜಲ, ಸದಬ, ರಾಜನಕೋಳೂರು, ಕಲ್ಲದೇವನಹಳ್ಳಿ ಮುಂತಾದ ನೆಲೆಗಳಲ್ಲಿ ಆದಿಮಾನವರ ಕಾಲದ ಸುಮಾರು 800 ಅವಶೇಷಗಳನ್ನು ಗುರುತಿಸಿದ್ದಾರೆ. ಸುಮಾರು 800 ಅವಶೇಷಗಳ ಪೈಕಿ ಕೆಲವನ್ನು ಹುಣಸಗಿ ಜನರಿಗೆ ಸ್ಥಳೀಹ ಇತಿಹಾಸದ ಮಹತ್ವವನ್ನು ತಿಳಿಯಲು ಗ್ರಾಮ ಪಂಚಾಯತ ಕಟ್ಟಡದಲ್ಲಿ ಮ್ಯೂಸಿಯಂ ರೀತಿ ಸಂಗ್ರಹಿಸಿ ಇಟ್ಟಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಗೈತಿಹಾಸಿಕ ಮ್ಯೂಸಿಯಂ ಇರುವುದು ರಾಜ್ಯದಲ್ಲೇ ಮೊದಲು ಎಂಬ ಹೆಗ್ಗಳಿಕೆ ಹುಣಸಗಿಯದು.
ಬೂದಿಹಾಳದಲ್ಲಿ ಕಸಾಯಿಖಾನೆ ಇತ್ತು, ಬ್ಲೇಡುಗಳನ್ನು ತಯಾರಿಸುವ ಕಾರ್ಖಾನೆ ಇತ್ತೆಂದು ಖಚಿತಪಡಿಸಿದ್ದಾರೆ. ಇಸಾಂಪುರದಲ್ಲಿ ಆದಿಶಿಲಾಯುಗದ ಶಿಲಾಯುಧಗಳನ್ನು ನಿರ್ಮಿಸುವ ಕಾರ್ಯಾಗಾರ (work shop) ಇತ್ತೆಂದು ಸಂಶೋಧಕರು ತಿಳಿಸುತ್ತಾರೆ. ಈ ನೆಲೆಗಳನ್ನು ಯುರೋಪ್‍ನ ಸೇಂಟ್ ಅಶೂಲ್ ಎಂಬಲ್ಲಿ ದೊರೆತ ಶಿಲಾಯುಧಗಳೊಂದಿಗೆ ಹೋಲಿಕೆಯಾಗುತ್ತಿರುವದನ್ನು ಗಮನಿಸಿದ ಸಂಶೋಧಕರು ಈ ಪ್ರದೇಶವನ್ನು “ಅಶೂಲಿಯನ್ ಸಂಸ್ಕೃತ ತಾಣ”ಎಂದು ಕರೆಯುತ್ತಾರೆ.
ಹುಣಸಗಿ ತಾಲೂಕಿನ ಪ್ರಾಗೈತಿಹಾಸಿಕ ಕುರಿತು ಅನೇಕ ಪಿ.ಎಚ್.ಡಿ.ಪ್ರಬಂಧಗಳು ಪ್ರಕಟವಾಗಿವೆ. ಸುಮ್ಮನೆ ಒಂದು ಬಾರಿ google ನಲ್ಲಿ hunasagi search ಬಟನ್ ಒತ್ತಿದರೆ ಸಾಕು ಹುಣಸಗಿಯ ನೂರಾರು ಮಾಹಿತಿ ಲಭ್ಯವಾಗುತ್ತದೆ. ವಿದೇಶಿ ವಿದ್ಯಾರ್ಥಿಗಳು ಕೂಡ ಈ ಪ್ರದೇಶಕ್ಕೆ ಭೇಟಿ ನೀಡಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಐತಿಹಾಸಿಕವಾಗಿಯೂ ಹುಣಸಗಿ ತಾಲೂಕು ಸಂಪದ್ಭರಿತವಾಗಿದೆ. ಹುಣಸಗಿ, ಮುದನೂರು, ಹಗರಟಗಿ, ರಾಜನಕೋಳೂರು, ಅರಕೇರಾ(ಜೆ), ಅಗ್ನಿ, ಬೈಲಾಪುರ ಪ್ರಮುಖ ಐತಿಹಾಸಿಕ ಮಹತ್ವದ ನೆಲೆಗಳಾಗಿವೆ.
ಹುಣಸಗಿಯ ನೀಲಕಂಠೇಶ್ವರ ದೇಗುಲ, ಮಲ್ಲಿಕಾರ್ಜುನ ದೇಗುಲ, ಚಿಕ್ಕಮುದನೂರಿನ ಗೋಪಾಲಸ್ವಾಮಿ ದೇಗುಲ, ಮಲ್ಲಿಕಾರ್ಜುನ ದೇಗುಲ, ಭೃಂಗಿ, ಹನುಮಂತ ಹಾಗೂ ಸಿದ್ಧಲಿಂಗೇಶ್ವರ ದೇಗುಲಗಳಿವೆ. ಮುದನೂರಿನ ರಾಮನಾಥ ದೇಗುಲವು ಬಸವಪೂರ್ವ ಯುಗದ ಶಿವಶರಣ ಜೇಡರ ದಾಸಿಮಯ್ಯನ ಆರಾಧ್ಯ ದೈವವಾಗಿದೆ. ಹಗರಟಗಿ 300 ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ಹಗರಟಗಿಯಲ್ಲಿ ಕರ್ಣನ ಗುಡಿ,ಭೀಮನ ಗುಡಿ, ಕುಂತಿ ಗುಡಿ, ಅರ್ಜುನ ಗುಡಿ ಹೀಗೆ ಮಹಾಭಾರತದ ಪಾತ್ರಗಳಲ್ಲಿ ಬರುವ ಪಾಂಡವರ ಗುಡಿಗಳು ಇಲ್ಲಿರುವದು ಗಮನಾರ್ಹ ಸಂಗತಿ. ಇನ್ನು ನಾರಾಯಣ ಗುಡಿ, ವೆಂಕಟರಮಣ ಗುಡಿ, ಧರ್ಮಲಿಂಗೇಶ್ವರ ದೇಗುಲ ಮುಂತಾದ ದೇಗುಲಗಳನ್ನು ನಾವಿಂದು ಕೂಡ ಕಾಣಬಹುದು.
ರಾಜನಕೋಳೂರಿನ ಶಂಕರ ನಾರಾಯಣ ದೇಗುಲ, ಅಗ್ನಿಯ ಜಿನ ಮಂದಿರ, ಕೊಡೇಕಲ್ ಬಸವಣ್ಣ ದೇಗುಲ, ಅರಕೇರಿಯ ಸಹಸ್ರಲಿಂಗ ದೇಗುಲ, ಸಂಗಮೇಶ್ವರ ದೇಗುಲ, ಬೈಲಾಪುರದ ಭೈರವೇಶ್ವರ ದೇಗುಲ ವಜ್ಜಲದ ಸಂಗಮೇಶ್ವರ, ರಾಮಲಿಂಗೇಶ್ವರ ದೇಗುಲ, ನಾರಾಯಣಪುರದ ಛಾಯಾದೇವಿಯ ಗುಡಿಗಳು ತಾಲೂಕಿನ ಐತಿಹಾಸಿಕ ಮಹತ್ವವನ್ನು ಸಾರುತ್ತವೆ. 12 ನೇ ಶತಮಾನದ ಅನುಭವ ಮಂಟಪದ ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುಗಳು ಹಗರಟಗಿಯವನೆಂದು ಹಲವು ಸಾಕ್ಷಿಗಳ ಮೂಲಕ ಹೂವಿನಹಳ್ಳಿಯ ಮೂಲದ ಮೈಸೂರು ನಿವಾಸಿ ಹಿರಿಯ ಸಂಶೋಧಕ ಸೀತಾರಾಂ ಜಾಗಿರದಾರ ದೃಢೀಕರಿಸಿ ಅಲ್ಲಮಪ್ರಭುಗಳ ಕುರಿತು ಚಿಕ್ಕ ಕೃತಿಯನ್ನೂ ಹೊರತಂದಿದ್ದಾರೆ. ಹೀಗಾಗಿ ಜೇಡರ ದಾಸಿಮಯ್ಯ, ಅಲ್ಲಮಪ್ರಭು, ಕೊಡೇಕಲ್ ಬಸವಣ್ಣನಂತಹ ಮಹಾನ್ ಶಿವಶರಣರು ನೂತನ ಹುಣಸಗಿ ತಾಲೂಕಿಗೆ ಸೇರಿದ್ದಾರೆಂಬುದು ನಮಗೆಲ್ಲ ಹೆಮ್ಮೆಯ ಸಂಗತಿ.
ತಾಲೂಕಿನಲ್ಲಿ ಶಾತವಾಹನರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು, ಸೇವುಣರು, ಆದಿಲ್ ಶಾಹಿಗಳು, ಹೈದ್ರಾಬಾದ್ ನಿಜಾಮ್ ಆದಿಯಾಗಿ ನಾಡಿನ ಹೆಮ್ಮೆಯ ಸಂಸ್ಥಾನ ಸುರಪುರ ಸಂಸ್ಥಾನಿಕರು ಕೂಡ ಈ ತಾಲೂಕಿನಲ್ಲಿ ಆಳ್ವಿಕೆ ನಡೆಸಿದ್ದಾರೆ. ಅರಕೇರಿ, ಎಡೆಯಪುರ, ಕಚಕನೂರ, ಕನ್ನಳ್ಳಿ, ಕೂಡಲಗಿ, ಚನ್ನೂರು, ತೀರ್ಥ, ಬಾದಲಾಪುರ, ಬೈಚಬಾಳ, ಬೈಲಾಪುರ, ಬೊಮ್ಮನಹಳ್ಳಿ, ಮಾಳನೂರು, ಮುದನೂರು, ರಾಜನಕೋಳೂರು, ರಾಂಪೂರ, ವಜ್ಜಲ, ಶ್ರೀನಿವಾಸಪುರ, ಶೆಳ್ಳಗಿ, ಹಗರಟಗಿ, ಹುಣಸಗಿಗಳಲ್ಲಿ ಶಿಲಾಶಾಸನಗಳು ದೊರಕಿದ್ದು ತಾಲೂಕಿನ ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಸಹಕಾರಿಯಾಗಲಿವೆ.
ಹುಣಸಗಿಯಲ್ಲಿ ದೊರೆತ ಕ್ರಿ.ಶ.1120 ರ ಶಾಸನ ಹಾಗೂ ಕ್ರಿ.ಶ.1136 ರ ಶಾಸನ ಉಲ್ಲೇಖವಾಗಿರುವ “ವಿಕ್ರಮಪುರ”ವು ಹುಣಸಗಿಯೇ ಆಗಿತ್ತೆಂದು ತಿಳಿದುಬರುತ್ತದೆ. ಕ್ರಿ.ಶ.1120 ರ ಶಾಸನದಲ್ಲಿ ಬರುವ ಮಲಯಮತಿ ದೇವಿಯು ತ್ರಿಭುವನಮಲ್ಲನ ಪ್ರಿಯ ಅರಸಿಯಾಗಿದ್ದು, ವಿಕ್ರಮಾದಿತ್ಯನ ಹೆಸರಿನಲ್ಲಿ ಹುಣಸಗಿಯನ್ನು “ವಿಕ್ರಮಪುರ”ವೆಂದು ಕರೆದಿದ್ದಳು. ಹುಣಸಗಿ ಎಂಬ ಹೆಸರಿನ ಶಾಸನಗಳೂ ಸಿಗುತ್ತವೆ.
ಶಾಸನೋಕ್ತ ವಿಕ್ರಮಪುರವು ವಿಕ್ರಮಾದಿತ್ಯನ ಕಾಲದ ರಾಜಧಾನಿ ಪಟ್ಟಣವೂ ಆಗಿತ್ತೆಂದು ತಿಳಿದು ಬರುತ್ತದೆ. “ಕಲ್ಯಾಣ”ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರೂ, ಸುಗಮ ಆಡಳಿತಕ್ಕಾಗಿ ಹಾಗೂ ಆತನ 23 ರಾಣಿಯರಿಗೂ ಕೆಲವು ಉಪರಾಜಧಾನಿಗಳನ್ನು ಉಸ್ತುವಾರಿಯಾಗಿ ನೋಡಿಕೊಳ್ಳಲು ನೇಮಿಸಿದ್ದ. ತಾಲೂಕಿನಲ್ಲಿ ಅರಕೇರಿ, ರಾಯನಪಾಳ್ಯ, ಹಗರಟಗಿಗಳಲ್ಲಿ ಕೋಟೆಗಳನ್ನು ಕಾಣುತ್ತೇವೆ. ಹುಣಸಗಿಯಲ್ಲೂ ಕೋಟೆಯ ಅವಶೇಷಗಳನ್ನು ದಶಕದ ಹಿಂದೆ ಕಾಣುತ್ತಿದ್ದೆವು. ಸದ್ಯ ಎಲ್ಲವೂ ನಾಮಾವಶೇಷವಾಗಿದ್ದು ದುರಂತ.
ರೈತರ ಜೀವನಾಡಿ ಬಸವಸಾಗರ ಜಲಾಶಯ:
ತಾಲೂಕಿನ ರೈತರ ಜೀವನಾಡಿ ನಾರಾಯಣಪುರದ ಬಸವಸಾಗರ ಜಲಾಶಯವು ಆಣೆಕಟ್ಟಿನ ಎಡಭಾಗದ ಈ ನಾಲೆಯ ಸುಮಾರು 80.ಕಿ.ಮೀ. ಉದ್ದವಿದು 29 ವಿತರಣಾ ನಾಲೆಗಳನ್ನು ಹೊಂದಿದೆ. ಇದರಿಂದ 408747 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯವಿದೆ. ಇದರ ಜಲವಾಹಕ ವಿನ್ಯಾಸವನ್ನು ಪ್ರತಿ ಸೆಕೆಂಡಿಗೆ 264.61 ಘನ ಮೀಟರ್ ನೀರು ಹರಿಯುವ ರೀತಿಯಲ್ಲಿ ರೂಪಿಸಲಾಗಿದೆ. ಇದರ ನಡೆ ಪ್ರಾರಂಭದಲ್ಲಿ ಛಾಯಾ ದೇವಿಗುಡಿಯ ಹತ್ತಿರ ನೀರಿನ ಹರಿವು ಜಲಪಾತದಂತೆ ಕಾಣುತ್ತದೆ.
ಇನ್ನೂ ಹಲವು ಜಲಸೇತುವೆಗಳನ್ನು ದಾಟಿ, ಸುರಂಗದೊಳಗೂ ಹಾದು ಅನೇಕ ಉಪ ನಾಲೆಗಳ ಮೂಲಕ ಹಾದು ಹೋಗುತ್ತದೆ. ತಾಲೂಕಿನ ಸಮಗ್ರ ಮಾಹಿತಿಯನ್ನು ಕೇವಲ ಒಂದು ಲೇಖನದಲ್ಲಿ ದಾಖಲಿಸುವುದು ಕಷ್ಟದ ಕೆಲಸ. ತಾಲೂಕಿನ ಇತಿಹಾಸ ಹೇಳುವ ಪ್ರತ್ಯೇಕ ಕೃತಿಯೊಂದು ಹೊರತಂದರೆ ಆಗ ತಾಲೂಕಿನ ಸ್ಪಷ್ಟ ಚಿತ್ರಣ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ವಾಂಸರು ಪ್ರಯತ್ನಿಸುವುದೊಳಿತು.
ಲೇಖಕರುಃಪಾಟೀಲ.ಬಸನಗೌಡ.ಹುಣಸಗಿ
9900771427.
super article. hunasgi new taluka
ಅತ್ಯಂತ ಪ್ರಮುಖ ಮಾಹಿತಿಯನ್ನು ಒದಗಿಸುವ ಲೇಖನ