ಟಂಟಂ ಆಟೋಗೆ ಲಾರಿ ಡಿಕ್ಕಿ ಶಿಕ್ಷಕಿ ಸಾವು
ಯಾದಗಿರಿಃ ಶಾಲೆ ಮುಗಿಸಿಕೊಂಡು ಸಂಜೆ ಟಂಟಂ ಆಟೋ ಮೂಲಕ ಶಹಾಪುರಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಶಿಕ್ಷಕಿ ವತ್ಸಲ ಗಂಡ ದೇವಿಂದ್ರಪ್ಪ ವಠಾರ(58) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಶಹಾಫುರ ತಾಲೂಕಿನ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯ ಬಳಿ ಬುಧವಾರ ಸಂಜೆ ನಡೆದಿದೆ.
ಆಟೋದಲ್ಲಿದ್ದ ಇನ್ನೂ ಮೂವರಲ್ಲಿ ಮುಖ್ಯಗುರು ಶಶಿಕಲಾ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಓರ್ವ ಪ್ರಯಾಣಿಕಿ ರಂಗಮ್ಮ ಸೇರಿದಂತೆ ಇನ್ನೋರ್ವ ಸಹ ಶಿಕ್ಷಕಿ ಗೀತಾ ಸಾಧಾರಣ ಗಾಯಗೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ಹುಲಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವತ್ಸಲ ಮತ್ತು ಮುಖ್ಯಗುರು ಶಶಿಕಲಾ, ಸಹ ಶಿಕ್ಷಕಿ ಗೀತಾ ಅವರು ಆಟೋ ಮೂಲಕ ಭೀಮರಾಯನ ಗುಡಿಗೆ ಬರುತ್ತಿರುವಾಗ ಘಟನೆ ನಡೆದಿದೆ. ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭೀ.ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.