ಕನ್ನಡ ಕಲಿತು ತಮಿಳರೆದುರು ‘ನಾನ್ ಕನ್ನಡಿಗನ್’ ಅಂದ ಮಂಕಿಮ್ಯಾನ್ ಜ್ಯೋತಿರಾಜ್!
-ಬಸವರಾಜ ಮುದನೂರ್
ಮಂಕಿಮ್ಯಾನ್ ಜ್ಯೋತಿರಾಜ್ ಗೆ ತಮಿಳುನಾಡು ಜನ್ಮ ಭೂಮಿ ಆಗಿದ್ದರೆ ಕನ್ನಡ ನಾಡು ಕರ್ಮ ಭೂಮಿ. 9ತಿಂಗಳು ಹೊತ್ತು ಹೆತ್ತ ತಾಯಿಯಷ್ಟೇ ಗೌರವಾದರ 100ವರ್ಷ ಕಾಲ ನಮ್ಮನ್ನು ಹೊರುವ ಭೂಮಿತಾಯಿಗೂ ಸಲ್ಲಬೇಕು. ಈ ಕರುನಾಡು ನನಗೆ ಬದುಕು ಕಟ್ಟಿ ಕೊಡುವ ಕಾಮದೇನು ಕಲ್ಪತರು ಎಂಬುದನ್ನು ಗ್ರಹಿಸಿದ ಬಾಲಕ ಕೊನೆಯ ಉಸಿರಿರುವವರೆಗೂ ಕರ್ನಾಟಕದಲ್ಲೇ ನೆಲೆಯೂರಲು ನಿಶ್ಚಯಿಸುತ್ತಾನೆ.
ಅಲ್ಲಿಯವರೆಗೂ ಕನ್ನಡವೇ ಗೊತ್ತಿಲ್ಲದ ತಮಿಳುನಾಡು ಮೂಲದ ಹುಡುಗನಿಗೆ ಕೋಟೆನಾಡು ಚಿತ್ರದುರ್ಗ ಕನ್ನಡ ಕಲಿಸುತ್ತದೆ. ತಮಿಳು ಭಾಷೆಯೊಂದಿಗೆ ಸಾಕಷ್ಟು ಸಾಮ್ಯತೆ ಇರುವ ಕನ್ನಡ ಭಾಷೆ ಕಲಿಯೋದು ಸುಲಭ. ಕಸ್ತೂರಿ ಕನ್ನಡವು ಬಹು ಸರಳ, ಸುಂದರ ಮತ್ತು ಒಲುಮೆಯ ಬಾಷೆ. ಮತ್ತೊಂದು ಕಡೆ ಜ್ಯೋತಿರಾಜನಲ್ಲಿ ಕನ್ನಡ ನಾಡು-ನುಡಿಯ ಮೇಲೆ ಮೂಡಿದ ಅಭಿಮಾನದಿಂದಾಗಿ ಅತ್ಯಂತ ಕಡಿಮೆ ಸಮಯದಲ್ಲೇ ಕನ್ನಡವನ್ನು ಕಲಿತು ಬಿಡುತ್ತಾನೆ.
ಜ್ಯೋತಿರಾಜಗೆ ಆಶ್ರಯ ನೀಡಿದ ಮಹಾದೇವಪ್ಪ ಹಾಗೂ ಕುಟುಂಬಕ್ಕೆ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಮತ್ತೊಂದು ಕಡೆ ಜ್ಯೋತಿರಾಜ್ ಜೊತೆ ತಮಿಳು ಮಾತನಾಡಲು ಯಾರೂ ಸಿಗೋದಿಲ್ಲ. ತಮಿಳುನಾಡು ಮೂಲದವರನ್ನು ಹುಡುಕುವ ಗೋಜಿಗೂ ಹೋಗುವುದಿಲ್ಲ ಜ್ಯೋತಿರಾಜ್. ತನಗೆ ಬಂದಂತೆ ಕನ್ನಡ ಮಾತನಾಡಲು ಆರಂಭಿಸುತ್ತಾನೆ. ಪ್ರತಿಯೊಬ್ಬರ ನುಡಿಯನ್ನೂ ಶ್ರದ್ಧೆಯಿಂದ ಆಲಿಸುತ್ತಾನೆ. ತಿಳಿಯದ್ದನ್ನು ಮತ್ತೆ ಮತ್ತೆ ಕೇಳಿ ಅರಿತುಕೊಳ್ಳುತ್ತಾನೆ.
ತಮಿಳಿನಲ್ಲಿ ‘ವನಕಂ’ ಎಂಬುದಕ್ಕೆ ಕನ್ನಡದಲ್ಲಿ ‘ನಮಸ್ಕಾರ’ ಅನ್ನುವುದ್ರಿಂದ ಶುರುಮಾಡಿ ‘ಸಾಪ್ಟಿಯಾ’ ಅನ್ನೋದು ಬಿಟ್ಟು ‘ಊಟ ಆಯ್ತಾ ಅಣ್ಣಾ’ ಅಂತಾ ಕೇಳುವುದರ ಮೂಲಕ ಸಂಪೂರ್ಣ ಕನ್ನಡವನ್ನು ಕಲಿತುಕೊಳ್ಳುತ್ತಾನೆ. ಹಿರಿಯೂರು ಮತ್ತು ಕೋಟೆ ಬಳಿ ತಮಿಳರು ಎದುರಾದಾಗ ‘ನಾನ್ ಕನ್ನಡಿಗನ್’ ಅನ್ನುವ ಮೂಲಕ ಕನ್ನಡಾಭಿಮಾನ ಮೆರೆಯುತ್ತಾನೆ.
ಕನ್ನಡಿಗರ ಪ್ರೀತಿ ವಿಶ್ವಾಸಕ್ಕೆ ಮನಸೋತ ಪುಟ್ಟ ಪೋರ ತನ್ನ ಕನ್ನಡಾಭಿಮಾನದ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹಾಗೇನೆ ದುರ್ಗದ ಜನರ ಮಮಕಾರ ಕಂಡಾಗಲೆಲ್ಲಾ ಜ್ಯೋತಿರಾಜ್ ಗೆ ಪದೇ ಪದೇ ನೆನಾಪಾಗೋ ವಿಷಯ ಅಂದ್ರೆ ತಮಿಳುನಾಡಿನ ಉದ್ಯಮಿ. ತನ್ನದೇ ಗ್ರಾಮದ ಪಕ್ಕದ ಊರಿನವನೇ ಆದ ಕುವೇಂದ್ರನ್ ತಮಿಳುನಾಡಿನಿಂದ ಬಾಗಲಕೋಟೆಗೆ ಕರೆತಂದು ಪುಟ್ಟ ಬಾಲಕ ಎಂಬುದನ್ನು ಮರೆತು ಜೀತದಾಳಿನಂತೆ ಕಂಡಿದ್ದು, ಸ್ವೀಟ್ಸ್ ಕಂಪನಿಯಲ್ಲಿ ದುಡಿಸಿಕೊಂಡು ಬಿಡಿಗಾಸು ನೀಡದೆ ಹಿಂಸೆ ನೀಡಿದ್ದು ನೆನೆಸಿಕೊಂಡು ಮರಗುತ್ತಾನೆ. ಆದ್ರೆ, ಸ್ವರ್ಗದಂತ ಈ ನಾಡಿಗೆ ಬರಲು ದಾರಿ ತೋರಿದನಲ್ಲ ಬಿಡು ಎಂದುಸಮಾಧಾನ ಮಾಡಿಕೊಳ್ಳುತ್ತಾನೆ.
ಕರ್ನಾಟಕದ ಚಿತ್ರದುರ್ಗ ಎಲ್ಲಿ, ತಮಿಳುನಾಡಿನ ತೇನಿ ಜಿಲ್ಲೆ ಎಲ್ಲಿ, “ಎತ್ತಣದಿಂದೆತ್ತ ಸಂಭಂಧ”. ಇದು ಪರರಾಜ್ಯ. ಇಲ್ಲಿ ನನಗ್ಯಾರ ಪರಿಚಯವೂ ಇಲ್ಲ, ಸಂಭಂಧವೂ ಇಲ್ಲ, ನನ್ನ ರಾಜ್ಯ, ನನ್ನ ಭಾಷೆ ಯಾವುದೋ ಏನೋ. ಅಸಲಿಗೆ ನನ್ನ ಭಾಷೆಯೇ ಇವ್ರಿಗೆ ಅರ್ಥವಾಗಲ್ಲ. ಅವರ ಮಾತೂ ನನಗೆ ಅರ್ಥವಾಗುತ್ತಿಲ್ಲ. ಆದ್ರೆ, “ಕಣ್ಣರಿಯದ್ದನ್ನು ಕರುಳರಿಯುತ್ತದೆ” ಅಂತಾರಲ್ಲ ಆ ಮಾತು ಇಲ್ಲಿ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಭಾಷೆ ಬಾಯಿಗೆ ನಿಲುಕದಿದ್ದರೂ ಸಹ ದುರ್ಗದ ಜನ ಭಾವನೆಗಳಿಗೆ ಬೆಲೆ ಕೊಟ್ಟಿದ್ದಾರೆ. “ಮೊಗಕಿರುವ ನಾಲಿಗೆಎದೆಗಿದ್ದಿದ್ದರೇಗಿತ್ತು” ಎಂಬ ಕವಿಯ ಪ್ರಶ್ನೆಗೆ ಉತ್ತರವಾಗಿ ಕನ್ನಡಿಗರು ಹೃದಯದ ಸುಂದರ ಬಾಷೆಯನ್ನು ಬಲ್ಲವರಾಗಿದ್ದಾರೆ.
ಮಾನವಸಂಭಂಧವೇ ದೊಡ್ಡದೆಂಬುದನ್ನರಿತು ಮನೆ ಮಗನಂತೆ ಅಪ್ಪಿಕೊಂಡಿದ್ದಾರೆ. ತಪ್ಪು ಮಾಡಿದಾಗ ಬೈಯ್ದು ಬುದ್ದಿ ಹೇಳಿದ್ದಾರೆ. ನಾಲ್ಕು ಜನ ಒಪ್ಪುವಂಥ ಉತ್ತಮ ಕಾರ್ಯ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಹೀಗೆ ಕನ್ನಡಿಗರ ಹೃದಯವಂತಿಕೆ ಕಂಡ ಬಾಲಕನಿಗೆ ಪದೇ ಪದೇ ಅಪ್ಪ ಹೇಳಿದ ಮಾತು ನೆನಪಾಗಿ ಕಾಡುತ್ತದೆ. ಚಿಕ್ಕವನಾಗಿದ್ದಾಗ ಅಪ್ಪ ತನ್ನ ತೊಡೆ ಮೇಲೆ ಕೂಡಿಸಿಕೊಂಡು ‘ದೂರದ ಆಕಾಶದಲ್ಲೆಲ್ಲೋ ಸ್ವರ್ಗ ಇದೆ. ಅಲ್ಲಿ ಬರೀ ಸಜ್ಜನರು ಮಾತ್ರ ಇರ್ತಾರೆ. ತುಂಬಾ ಉತ್ತಮ ಕಾರ್ಯಗಳನ್ನ ಮಾಡುವ ಮೂಲಕ ನಾವು ಸಹ ಸ್ವರ್ಗ ಸೇರಬೇಕು’ ಅಂತ ಹೇಳ್ತಿದ್ದ ಮಾತು ನೆನೆದು ಕೊಳ್ಳುತ್ತ ‘ಬಹುಷ ನಾನೀವಾಗ ಅಪ್ಪ ಹೇಳುತ್ತಿದ್ದ ಸ್ವರ್ಗಕ್ಕೆ ಬಂದಿದ್ದೇನೆ’ ಅಂದುಕೊಳ್ಳುತ್ತಾನೆ ಜ್ಯೋತಿರಾಜ್. ಆ ಪರಿ ಸುಂದರ ಪರಿಸರ ಕೊಡಮಾಡುತ್ತದೆ ಕರ್ನಾಟಕ.
ಮಂಕಿಮ್ಯಾನ್ ಜ್ಯೋತಿರಾಜ್ ಜೀವನ ಕಥನ ಕುರಿತ ಸರಣಿಯ ಈ ಮೊದಲಿಗೆ ಕಂತುಗಳನ್ನು ಓದಲು ಈ ಕೆಳಗಿನ ಲಿಂಕ್ ಗಳನ್ನು ಬಳಸಿ…
ಏಳುಸುತ್ತಿನ ಕೋಟೆಯ ಮಂಕಿಮ್ಯಾನ್ ಜ್ಯೋತಿರಾಜ್ ಜೀವನ ಕಥನ : ಸರಣಿ ಶುರು https://vinayavani.com/siries/monkey-man-jyothiraj-life-story/
ಮಂಕಿಮ್ಯಾನ್ ಜ್ಯೋತಿರಾಜ್ ತಮಿಳುನಾಡಿನಿಂದ ಕೋಟೆನಾಡಿಗೆ ಬಂದ ರೋಚಕ ಕಥೆ https://vinayavani.com/siries/monkey-man-jyothiraj-life-story-2/