ಆಧ್ಯಾತ್ಮಿಕ ಸೇವೆಯಲ್ಲಿ ಬ್ರಹ್ಮಾನಂದನಾದ ಬರಮಪ್ಪ ಕುರುಬರ
ಬ್ರಹ್ಮಾನಂದ ಶ್ರೀಗಳಿಗೆ ಇಂದು 114 ರ ಸಂಭ್ರಮ
21 ದಿನ ಸೆರೆವಾಸದಲ್ಲಿದ್ರೂ ಬ್ರಹ್ಮಾನಂದ ಶ್ರೀ..
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿಃ ಸಗರನಾಡು ಸೂಫಿ ಸಂತ ಶರಣರು ಹುಟ್ಟಿ ಬೆಳೆದ ನಾಡು. ಸಗರನಾಡಿನಲ್ಲಿ ಹಲವಾರು ಮಹಾನ್ ಕವಿಗಳು, ಸಾಹಿತ್ಯ ದಿಗ್ಗಜರು ಮಹಾನ್ ವ್ಯಕ್ತಿಗಳು ಸ್ವಾತಂತ್ರ್ಯ ಹೋರಾಟಗಾರರು ಜನಿಸಿದ ಧಾರ್ಮಿಕವಾಗಿ ಶರಣರು ತಪೋಗೈದ ತಪೋವನವು ಹೌದು.
ಅದರಂತೆ, ಸತ್ಯ ಶರಣರನ್ನು ಆರೂಢರನ್ನು ತಪಸ್ವಿಗಳನ್ನು ಪವಾಡ ಪುರುಷರನ್ನು ಕಣ್ಣಿನಿಂದ ನೋಡಿದ ಅವರ ಆಶೀರ್ವಾದ ಪಡೆದ ಮತ್ತು ಮಹಾತ್ಮ ಗಾಂಧೀಜಿಯವರ ಹಲವಾರು ಕಾರ್ಯಕ್ರಮ ಹೋರಾಟಗಳಲ್ಲಿ ಭಾಗಿಯಾಗಿದ್ದ, ಇಷ್ಟೆ ಅಲ್ಲದೆ ಹೈದ್ರಾಬಾದ ವಿಮೋಚನಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ, ಸರ್ದಾರ ಶರಣಗೌಡರ ಗುಂಪಿನಲ್ಲಿದ್ದು, ಚಳುವಳಿಯಲ್ಲಿ ಪಾಲ್ಗೊಂಡು ಬ್ರಿಟಿಷರ ಕೈಗೆ ಸಿಕ್ಕು ಕಲಬುರ್ಗಿ ಜೈಲಿನಲ್ಲಿ 21 ದಿನ ಸೆರೆವಾಸವು ಅನುಭವಿಸಿದ ಶರಣ ಜೀವಿಯೊಂದು ಇಂದಿಗೂ 113 ರ ಇಳೆ ವಯಸ್ಸಿನಲ್ಲಿ ಆಧ್ಯಾತ್ಮಿಕವಾಗಿ ಸಮಾಜವನ್ನು ಸನ್ಮಾರ್ಗದತ್ತ ಒಯ್ಯುವ ಕೆಲಸ ಮಾಡುತ್ತಿದ್ದಾರೆ ಅಂದರೆ ರೋಮಾಂಚನವಾಗುತ್ತದೆ ಅಲ್ಲವೇ.?
ಹೌದು ನಿಜ ಸುರಪುರ ತಾಲೂಕಿನ ಎಣ್ಣೆ ವಡಿಗೇರಿ ಗ್ರಾಮದವರಾದ ಇವರ ಮೂಲ ಹೆಸರು ಬರಮಪ್ಪ ತಂದೆ ಅಬುಲಪ್ಪ ಕುರಬರ ಎಂಬುವದಾಗಿತ್ತು, ಇವರ ಜೀವನ ಸವೆದಂತೆ ಪ್ರಸ್ತುತ ಇವರು ಬ್ರಹ್ಮಾನಂದ ಸ್ವಾಮೀಗಳಾಗಿ ಬದಲಾಗಿದ್ದಾರೆ. ಇವರ ಜನನ 15 ಜುಲೈ 1906 ರಲ್ಲಿ ಎಣ್ಣೆ ವಡಿಗೇರಿ ಗ್ರಾಮದ ತಂದೆ ಅಬುಲಪ್ಪ ತಾಯಿ ಬಸಲಿಂಗಮ್ಮ ದಂಪತಿಗಳ ಕೊನೆಯ ಮಗನಾಗಿ ಜನಿಸಿದರು.
ತಮ್ಮ 18 ನೇ ವಯಸ್ಸಿನಲ್ಲಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಲೊಟಗೇರಿ ಗ್ರಾಮದ ಸಿದ್ದಯ್ಯ ಸ್ವಾಮಿ ಅವರಿಂದ ಧೀಕ್ಷೆ ಪಡೆದು ಆಧ್ಯಾತ್ಮಿಕದಲ್ಲಿ ತೊಡಗಿಸಿಕೊಳ್ಳಲು ಅಣಿಯಾದರು.
ಅವರೇ ಹೇಳುವಂತೆ ಪ್ರಾಲಬ್ಧ ಕರೆದುಕೊಂಡು ಹೋದಂತೆ, ಗಾಂಧೀಜಿಯವರು ಕರೆ ನೀಡಿದ ಹೋರಾಟದಲ್ಲಿ ಭಾಗವಹಿಸಿದೆ, ತದ ನಂತರ ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಸರ್ದಾರ ಶರಣಗೌಡರ ನೇತೃತ್ವದ ಗುಂಪಿನಲ್ಲಿ ಭಾಗವಹಿಸಿ 21 ದಿನ ಜೈಲುವಾಸ ಅನುಭವಿಸಿದ ಹಿಂದಿನ ಜೀವನ ಪುಟವನ್ನು ತೆರೆದಿಟ್ಟರು.
ಮುಂದೆ ಕುಟುಂಬ ಸಮೇತ ಗದಗ ಸಮೀಪದ ದಂಡಕಾರಣ್ಯದಲ್ಲಿ ಹಲವು ವರ್ಷಗಳ ಕಾಲ ಜೀವನ ಸಾಗಿಸಲಾಯಿತು. ನಂತರ ಆಧ್ಯಾತ್ಮಿಕ ಕಡೆಗೆ ಜಾಸ್ತಿ ಒತ್ತು ನೀಡಲಾಗಿ, ತಪ್ಪಸ್ಸು ಧ್ಯಾನ ಆಚರಣೆ ಶುರುವಾಯಿತು.
ಈ ಮೊದಲು ನೆಲದಲ್ಲಿ ಬರೆಯುವ ಅಭ್ಯಾಸವಿತ್ತು. ಅದರಿಂದ ಒಂದಿಷ್ಟು ಅಕ್ಷರ ಜ್ಞಾನವಿತ್ತು. ಮುಂದೆ ಅದನ್ನೆ ಚನ್ನಾಗಿ ಓದುವ ಅಭ್ಯಾಸವನ್ನು ನಾವೇ ಸ್ವತಃ ಕಲಿತುಕೊಂಡೇವು ಎಂದು ಶ್ರೀಗಳು ತಿಳಿಸುತ್ತಾರೆ.
ನಾಡಿನಲ್ಲಿ ಹಲವಡೆ ಸಂಚರಿಸಿ ಆಧ್ಯಾತ್ಮಿಕ ಮೂಲಕ ಜೀವನದ ಸಾರವನ್ನು ಹೇಳುವ ಮೂಲಕ ಅಂಸಖ್ಯಾತ ಭಕ್ತ ಸಮೂಹ ಪಡೆಯುವಂತಾಯಿತು. ಭಗವದ್ಗೀತೆ ಮತ್ತು ನಿಜಗುಣ ಶಾಸ್ತ್ರ ಪಾಂಡಿತ್ಯವನ್ನು ಕರಗತ ಮಾಡಿಕೊಂಡ ಇವರು, ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ.
ಬಳ್ಳಾರಿ, ಲಿಂಗಸೂಗೂರ, ಮುದ್ದೇಬಿಹಾಳ, ಹೊಸಪೇಠ ಸಮೀಪದ ದೇವಲಾಪುರ ಸೇರಿದಂತೆ ಪಟ್ಟಣ ಸೆರಗು ಇತರಡೆ 5 ಮಠಗಳನ್ನು ಸ್ಥಾಪಿಸಿದ್ದು, ಅಭೂಥಪೂರ್ವ ದುಡಿಮೆ ಇವರದ್ದಾಗಿದೆ. ಬಳ್ಳಾರಿಯ ಗುಡ್ಡದಲ್ಲಿ ಇಡಿ ಬೆಟ್ಟವನ್ನು ಕಡಿದು ನಾಲ್ಕು ಎಕರೆ ಜಮೀನನ್ನು ಸಂಪಾದಿಸಿದ್ದಾರೆ. ಏನನ್ನು ಬೆಳೆಯದಲ್ಲಿ ಗಿಡಿಗಂಟೆ ಗೆಡ್ಡೆ ಗೆಣಸು ಬೆಳೆಯವಂತ ಭೂಮಿ ಮಾಡಿದ್ದಾರೆ. ಅಷಟೆ ಅಲ್ಲದೆ ಲಿಂಗಸೂಗೂರ ತಾಲೂಕಿ ಕಲ್ಲಹಾಳ ಬಸಪುರ ಗ್ರಾಮದ ಶಿಥಿಲಗೊಂಡಿದ್ದ ಅಮರೇಶ್ವರ ಗುಡಿಯನ್ನು ಜೀರ್ಣೋದ್ಧಾರ ಮಾಡಿದ ಕೀರ್ತಿ ಇವರದ್ದಾಗಿದೆ.
ಯಾವುದೇ ಭವಿಷ್ಯ ಚೀಟಿ ತಾಯತ ಕಟ್ಟದ ಇವರು, ಜನರನ್ನು ಧಾರ್ಮಿಕವಾಗಿ ಧರ್ಮದ ತಿರಳನ್ನು ತಿಳಿಸುವ ಮೂಲಕ ಜಾಗೃತರನ್ನಾಗಿಸಿ ಅವರ ಬದುಕು ಹಸನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇಂತಹ ಸರಳ ಸಂತರು ಪ್ರಚಾರ ಪ್ರಿಯವಲ್ಲದ ಇವರು, ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. 113 ರ ಇಳೆ ವಯಸ್ಸಿನಲ್ಲೂ ಇನ್ನೂ ಸ್ಪಷ್ಟ ಮಾತು ಭಾಷಣ ಪ್ರವಚನ ನೀಡುತ್ತಾರೆ.
ಭಗವದ್ಗೀತೆಯ ಅಧ್ಯಾಯದ ಸಮೇತ ಶ್ಲೋಕಗಳ ಹೇಳಿ ಅವುಗಳ ವಿವರಣೆ ಸಹ ಅದ್ಭುತವಾಗಿ ನೀಡುತ್ತಾರೆ. ಲೋಕಾಭಿರಾಮರಾಗಿ ಮಾತನಾಡುತ್ತಾರೆ. ಪ್ರಸ್ತುತ ಇವರು ಶಹಾಪುರ ವಿಭಜಿತ ವಡಿಗೇರ ತಾಲೂಕಿನ ಕೋನಾಳ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಬ್ರಹ್ಮಾನಂದ ಯೋಗಾಶ್ರಮದಲ್ಲಿ ಕಾಲ ಕಳೆಯುತ್ತಿದ್ದು, ಭಕ್ತರ ಉದ್ಧಾರಕ್ಕೆ ಶ್ರಮಿಸುತ್ತಿದ್ದಾರೆ.
ಉಳಿದ ತಮ್ಮ ಮಠಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತೆರಳಿ ಪ್ರವಚನ ನೀಡಿ ಮತ್ತೆ ವಾಪಸ್ ಇದೇ ಕೋನಾಳ ಮಠದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಅವರ ಸೇವೆಗೆ ಬಳ್ಳಾರಿಯಿಂದ ಗಂಡ ಮತ್ತು ಹೆಂಡತಿ ಅವರ ಭಕ್ತರಾಗಿದ್ದು, ಅವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂದು ಮಹಾನ್ ಚೇತನರ ಜನ್ಮ ದಿನ
15 ಜುಲೈ 1906 ರಂದು ಜನಿಸಿದ ಇವರಿಗೆ, ಇಂದಿಗೆ 114 ನೇ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸುಸಂರ್ಭದಲ್ಲಿ ಕೋನಾಳದ ಇವರ ಮಠದಲ್ಲಿ ಸಂಜೆ 5 ಗಂಟೆಗೆ ಬ್ರಹ್ಮಾನಂದ ಚೇತನರ ಜನ್ಮದಿನಾಚರಣೆ ಆಚರಿಸಲಾಗುತ್ತಿದ್ದು, ಇಂದು ಬಳ್ಳಾರಿ, ಲಿಂಗಸೂಗೂರ, ವಿಜಯಪುರ, ಮುದ್ದೇಬಿಹಾಳ, ಹೊಸಪೇಠ ಸೇರಿದಂತೆ ಎಲ್ಲೆಡೆಯಿಂದ ಭಕ್ತಾಧಿಗಳು ಆಗಮಿಸಿ ಈ ಸಂತರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ರಾಜಕೀಯ ಗಣ್ಯರು, ಭಕ್ತಾಧಿಗಳು, ಗ್ರಾಮಸ್ಥರು ಅಂದು ಸೇರಲಿದ್ದು, ಅವರ ಶುಭಾಶೀರ್ವಾದ ಪಡೆಯಲಿದ್ದಾರೆ. ಇಂದು ಸಕಲರು ಭಾಗವಹಿಸಿ ಶ್ರೀಗಳಿಗೆ ಶುಭಕೋರಲಿದ್ದು, ಅವರ ಆಶೀರ್ವಚನ ಆಲಿಸಲಿದ್ದಾರೆ.
ತಮ್ಮ 113 ರ ಇಳೆವಯಸ್ಸಿನಲ್ಲೂ ಆಧ್ಯಾತ್ಮಿಕ ಕ್ರಾಂತಿ ಮುಂದುವರೆಸಿದ್ದಾರೆ. ಹೈಕ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದು, 21 ದಿನ ಜೈಲು ಸೆರೆವಾಸ ಅನುಭವಿಸಿದ್ದಾರೆ. ಅಗಾಧ ಜ್ಞಾನ ಹೊಂದಿದ್ದು, ಇಂದಿಗೂ ಅವರ ಜ್ಞಾನಪಕ ಶಕ್ತಿ ಅದ್ಭುತ. ಇಷ್ಟಾದರೂ ಅವರ ಶರೀರ ಇಂದಿಗೂ ಗಟ್ಟಿತನ ಹೊಂದಿದೆ. ವಿಮೋಚನಾ ಹೋರಾಟದಲ್ಲಿ ಭಾಗವಹಿಸಿರುವ ಕಾರಣ ಸರ್ಕಾರ ನೀಡುವ ಗೌರವ ಮಾಸಿಕ ಹಣ ಬೇಡವೆಂದ ಮಹಾ ಚೇತನವಿದು. ಯಾವುದೇ ಪ್ರಚಾರಕ್ಕೂ ಮನ್ನಣೆ ನೀಡದೆ. ಸಮಾಜಕ್ಕೆ ಸನ್ಮಾರ್ಗ ತೋರುವದಲ್ಲಿ ಶ್ರಮಿಸುತ್ತಿರುವ ಸರಳ ಸಂತ.
-ಶರಣಪ್ಪ ಸಲಾದಪುರ. ರೈತ ಮುಖಂಡರು. ಶ್ರೀಮಠದ ಭಕ್ತರು.