ಜಿಲ್ಲೆಯಾದ್ಯಂತ ಜುಲೈ 16ರಿಂದ 24ರವರೆಗೆ ವಿಶೇಷ ಅಭಿಯಾನ
ಇಂದ್ರಧನುಷ್ ಲಸಿಕೆ ಹಾಕಿಸಲು ಶಾಸಕರ ಸಲಹೆ
ಯಾದಗಿರಿಃ ಗ್ರಾಮ ಸ್ವರಾಜ್ ಅಭಿಯಾನದ ವಿಶೇಷ ಮಿಷನ್ ಇಂದ್ರ ಧನುಷ್ ಮೊದಲ ಸುತ್ತಿನ ಲಸಿಕಾ ಅಭಿಯಾನವು ಜಿಲ್ಲೆಯಾದ್ಯಂತ ಜುಲೈ 16ರಿಂದ 24ರವರೆಗೆ ನಡೆಯಲಿದ್ದು, ಅಭಿಯಾನದಲ್ಲಿ ಗರ್ಭಿಣಿಯರಿಗೆ ಚುಚ್ಚುಮದ್ದು, ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಶಾಸಕರಾದ ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯ ವಿಶ್ವಾಸಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಜನರು ಮೂಢ ನಂಬಿಕೆ ಬಿಟ್ಟು, ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡುವ ಪ್ರತಿಯೊಂದು ಲಸಿಕೆ, ಚುಚ್ಚುಮದ್ದುಗಳ ಸದುಪಯೋಗ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ಚೆನ್ನಾಗಿದ್ದರೆ, ಕುಟುಂಬದ ಜೊತೆಗೆ ದೇಶದ ಅಭಿವೃದ್ಧಿಗೂ ಪೂರಕವಾಗುತ್ತದೆ. ಅಭಿಯಾನದ ಯಶಸ್ವಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಆಸ್ಪತ್ರೆ, ಅಂಗನವಾಡಿ ಕೇಂದ್ರದಲ್ಲಿ ಲಸಿಕೆ: ಜಿಲ್ಲೆಯಾದ್ಯಂತ ಆಗಸ್ಟ್ 13ರಿಂದ 22ರವರೆಗೆ ಎರಡನೇ ಸುತ್ತು ಹಾಗೂ ಸೆಪ್ಟೆಂಬರ್ 10ರಿಂದ 19ರ ವರೆಗೆ ಮೂರನೇ ಸುತ್ತು ಇಂದ್ರಧನುಷ್ ಅಭಿಯಾನ ನಡೆಯಲಿದೆ. ಗರ್ಭಿಣಿಯರಿಗೆ ಟಿ.ಟಿ ಲಸಿಕೆ, 2 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ, ಬಿ.ಬಿ.ಜಿ, ದಡಾರ, ರುಬೆಲ್ಲಾ, ಪೆಂಟಾವೆಲೆಂಟ್, ಡಿ.ಪಿ.ಟಿ, ಹೆಪಟೈಟೀಸ್ ಹಾಗೂ ಇತರ ಲಸಿಕೆಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆ ಉಪ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಉಚಿತವಾಗಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬಹುದು ಅಥವಾ ಆರೋಗ್ಯ ಸಹಾಯವಾಣಿ 104ಕ್ಕೆ ಉಚಿತವಾಗಿ ಕರೆ ಮಾಡಬಹುದು. ಮಹತ್ವಾಕಾಂಕ್ಷೆ ಜಿಲ್ಲೆಯ ನೋಡಲ್ ಅಧಿಕಾರಿಗಳೂ ಆದ ನವದೆಹಲಿಯ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಶ್ರೀ ಪಿ.ಭಕ್ತವತ್ಸಲಮ್ ಅವರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಭಗವಂತ ಅನವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಲಕ್ಷ್ಮೀಕಾಂತ, ಕಲಬುರಗಿಯ ವಿಭಾಗಮಟ್ಟದ ಸರ್ವೇಕ್ಷಣಾಧಿಕಾರಿ (ವಿಶ್ವ ಆರೋಗ್ಯ ಸಂಸ್ಥೆ) ಡಾ.ಅನಿಲ್‍ಕುಮಾರ್ ಎಸ್.ತಾಳಿಕೋಟಿ, ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ನಾಗಣ್ಣಗೌಡ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಿ.ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೋಹನ, ಸದಸ್ಯ ತೇಜು, ವಿಶ್ವಾಸಪುರ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ರಮೇಶ ರಾಠೋಡ್, ಲಸಿಕಾ ಮೇಲ್ವಿಚಾರಕ ಸುದರ್ಶನ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಬಿರಾದಾರ ಅವರು ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಲ್ಲಪ್ಪ ಅವರು ವಂದಿಸಿದರು.