ಮಾದಕ ವಸ್ತು ಸೇವನೆ ಅಗಾಧ ದುಷ್ಪರಿಣಾಮಃ ನ್ಯಾ.ಬಡಿಗೇರ
ಯಾದಗಿರಿ, ಶಹಾಪುರಃ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ದೇಹದಲ್ಲಿ ದುಷ್ಪರಿಣಾಮಗಳು ಸಾಕಷ್ಟು ಬೀರಲಿವೆ. ಕಾರಣ ಮಾದಕ ವಸ್ತುಗಳಿಂದ ಜನರು ದೂರವಿರಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶ ಪ್ರಭು ಎನ್.ಬಡಿಗೇರ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಮ ವಕೀಲರ ಸಂಘ ಮತ್ತು ತಾಲೂಕು ಆರೋಗ್ಯ ಇಲಾಖೆ ಬಾಲಕಿಯರ ಸಪಪೂ ಕಾಲೇಜು, ಪಿಕೆಜಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಮಾದಕ ವ್ಯಸನ ಮತ್ತು ಔಷಧಿಗಳ ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ನಡೆದ ಒಂದು ದಿನದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ಮಾರಟ ಕಾನೂನು ಅನ್ವಯ ನಡೆಯಬೇಕಿದೆ. ಪ್ರಸ್ತುತ ಯಾರೊಬ್ಬರು ಕಾನೂನಾತ್ಮಕವಾಗಿ ಅವುಗಳನ್ನು ಮಾರಾಟ ಮಾಡುವದಿಲ್ಲ. ಅವುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟದ ಮೇಲೆ ನಿಗಾವಹಿಸಿ ಅಕ್ರಮ ಕಂಡು ಬಂದಲ್ಲಿ ಕಠಿಣ ಕ್ರಮಕೈಗೊಳ್ಳುವ ಅಗತ್ಯವಿದೆ.
ಇನ್ನೂ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ತನ್ನ ಜೀವ ಕಳೆದುಕೊಳ್ಳವುದಲ್ಲದೆ, ಮನೆಯವರ ಜೀವಕ್ಕು ಕುತ್ತು ತರುತ್ತಾನೆ. ಉದಾಹರಣೆಗೆ ಮನೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಎದುರೇ ಸಿಗರೇಟ್, ಬೀಡಿ ಸೇವನೆ ಮಾಡುತ್ತಾರೆ. ಅದರಿಂದ ತನ್ನ ಜೀವ ಸುಟ್ಟುಕೊಳ್ಳವದಲ್ಲದೆ, ಸಿಗರೇಟ್, ಬೀಡಿ ಹೊಗೆಯಿಂದ ಮನೆಯಲ್ಲಿದ್ದ ಕುಟುಂಬದವರ ಮೇಲೂ ಅಗಾಧ ಪರಿಣಾಮ ಬೀರಲಿದೆ.
ಸಾಕಷ್ಟು ಪ್ರಕರಣಗಳಲ್ಲಿ ಮಕ್ಕಳಿಗೆ, ತಾಯಂದಿರಿಗೆ ಕ್ಯಾನ್ಸರ್ ಬಂದಿರುವದನ್ನು ನಾವು ನೋಡುತ್ತೇವೆ. ಹೀಗಾಗಿ ಒಬ್ಬ ಮಾದಕ ವ್ಯಸನಿ ತಾನು ಸಾಯುವದಲ್ಲದೆ ಮನೆಯವರಿಗೂ ಅದರ ರೋಗವನ್ನು ಹರಿಬಿಟ್ಟು ಜೀವನವಿಡಿ ಸಾವು ನೋವಿನ ಮಧ್ಯೆ ಒದ್ದಾಡುವಂತೆ ಮಾಡುತ್ತಾನೆ. ಕಾರಣ ಮಾದಕ ವ್ಯಸನಿಗಳು ಅವುಗಳಿಂದ ದೂರ ಉಳಿಯಲು ಪ್ರಸಕ್ತ ಹಲವಾರು ಉತ್ತಮ ಚಿಕಿತ್ಸೆಗಳಿವೆ. ವ್ಯಸನಿಗಳು ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಅದರಿಂದ ದೂರ ಉಳಿಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಭಗವಂತ ಅನ್ವರ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ದೂರವಿರುವುದು ಲೇಸು. ಮಾದಕ ಸೇವನೆ ಚಟ ಇರದಿದ್ದರೇ, ಉತ್ತಮ ಆರೋಗ್ಯ ಹೊಂದಿರಲು ಸಾಧ್ಯವಿದೆ. ಉತ್ತಮ ಆರೋಗ್ಯ ಹೊಂದಿದ್ದಲ್ಲಿ ಮಾತ್ರ ಬದುಕಿನಲ್ಲಿ ಎಂತಹ ಸಮಸ್ಯೆಗಳನ್ನು ಎದುರಿಸಬಹುದು. ಮಾನಸಿಕವಾಗಿ ಸದೃಢತೆ ಇದ್ದಲ್ಲಿ ಎಂತಹ ಸವಾಲ್ಗಳನ್ನು ಸ್ವೀಕರಿಸಿ ಗೆಲ್ಲಬಹುದು ಎಂದರು.
ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ ಔಷಧಿ ಸೇವನೆಗಳಿಂದಾಗುವ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿಸಾರ್ವಜನಿಕರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹಣಮಂತರಾವ್ ಕುಲಕರ್ಣಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ಸರ್ಕಾರಿ ಸಹಾಯಕ ಅಭಿಯೋಕ ಗುರುಲಿಂಗಪ್ಪ ತೇಲಿ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಶಿಶು ಅಭಿವೃದ್ಧಿ ಅಧಿಕಾರಿ ಗಂಗಪ್ಪ, ಉಪನ್ಯಾಸಕ ಡಾ.ಅಬ್ದುಲ್ ಕರಿಂ, ಡಾ.ಉಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.