ಅಯ್ಯಪ್ಪಸ್ವಾಮಿ ಕೃಪೆಯಿಂದಲೇ ನಾನು CM ಆಗಿದ್ದು-ಕುಮಾರಸ್ವಾಮಿ
ದೇವಶಕ್ತಿ ಮುಂದೆ ನಮ್ಮದೇನು-ಎಚ್.ಡಿ. ಕುಮಾರಸ್ವಾಮಿ
ಕೊಚ್ಚಿಃ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕೃಪೆಯಿಂದಲೇ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದು, ತಾವೊಬ್ಬರು ಅಯ್ಯಪ್ಪನ ಪರಮ ಭಕ್ತರು ಎಂದೂ ಕೂಡ ಹೇಳಿಕೊಂಡಿದ್ದಾರೆ.
ನಗರದಲ್ಲಿ ಜನತಾದಳ ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಕೇರಳ ಜಲ ಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ. ಥಾಮಸ್ ಸೇರಿದಂತೆ ಇತರ ಮುಖಂಡರ ಜತೆಗೆ ಶಬರಿಮಲೆಗೆ ಹೋಗುತ್ತಿದ್ದದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಅಲ್ಲದೆ, 2005 ರಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ 2006 ರಲ್ಲಿಯೇ ಮುಖ್ಯ ಮಂತ್ರಿಯಾದೆ, ತದ ನಂತರ ಇದೀಗ ಮತ್ತೆ ಆ ಸ್ಥಾನ ಅಲಂಕರಿಸಿದ್ದೇನೆ. ಮುಖ್ಯವಾಗಿ ಈ ಬಾರಿ ಜೆಡಿಎಸ್ ಗೆ ಬಹುಮತ ಸಿಗದಿದ್ದರೂ ಮುಖ್ಯಮಂತ್ರಿ ಸ್ಥಾನ ದೊರೆತಿದೆ. ಇದಕ್ಕೆಲ್ಲ ಅಯ್ಯಪ್ಪ ಸ್ವಾಮಿಯ ಕೃಪೆಯೇ ಕಾರಣ.
ನಾನು ದೈವ ಭಕ್ತ. ದೇವರಲ್ಲಿ ನಂಬಿಕೆ ಇಟ್ಟುಕೊಂಡು ಬೆಳೆದವನು. ಎಲ್ಲವೂ ನಡೆಸಿಕೊಡುವಾತ ಅಯ್ಯಪ್ಪಸ್ವಾಮಿ ಆತನ ಮುಂದೆ ನಮ್ಮದೇನಿಲ್ಲ. ಸರ್ವಸ್ವವೂ ಆತನೆ ಇರುವಾಗ ನಮ್ಮದೇನಿದೆ. ನಾವು ಪಾತ್ರದಾರಿಗಳು ಮಾತ್ರ. ಉಳಿದೆಲ್ಲವು ಆ ದೇವರದ್ದೆ ಆಟ ಎಲ್ಲರೂ ದೇವಶಕ್ತಿಗೆ ತಲೆಬಾಗಲೇ ಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಮತ್ತು ಕೇರಳ ಘಟಕದ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.