ಪ್ರಮುಖ ಸುದ್ದಿ
Revenge : ಹತ್ಯೆ ಮಾಡಿ ತಲವಾರ್ ಹಿಡಿದು ಠಾಣೆಗೆ ಬಂದ ಆರೋಪಿ!
ಯಾದಗಿರಿ : ಜಿಲ್ಲೆಯ ಸುರಪುರ ತಾಲ್ಲೂಕಿನ ಬಂಡೆರದೊಡ್ಡಿ ಗ್ರಾಮದ ಬಳಿ ತಲವಾರ್ ನಿಂದ ಹಲ್ಲೆಮಾಡಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಬಳಿಕ ಅದೇ ತಲವಾರ್ ಹಿಡಿದುಕೊಂಡು ಬಂದ ಆರೋಪಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಾಲಿಬೆಂಚಿ ಗ್ರಾಮದ ದೇವಪ್ಪ ಮಕಾಶಿ ಎಂಬ ವ್ಯಕ್ತಿಯನ್ನು ಮಾಳಪ್ಪ ನಾಗನಟಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸುರಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ‘ಜೇವರಗಿಯಲ್ಲಿರುವ ನನ್ನ ಅಕ್ಕನ ಬಳಿ ದೇವಪ್ಪ ಸಾಲ ಪಡೆದಿದ್ದನು. ಆದರೆ, ಸಾಲ ಕೇಳಿದರೆ ನನ್ನ ಅಕ್ಕನ ಗಂಡ ಅಂದರೆ ನನ್ನ ಮಾವನನ್ನು ಕರೆದುಕೊಂಡು ಬಂದು ಇದೇ ದೇವಪ್ಪ ಹೊಡೆದು ಹಾಕಿದ್ದ. ಆ ಪ್ರಕರಣ ಇನ್ನೂ ಕೋರ್ಟಿನಲ್ಲಿ ನಡೆಯುತ್ತಿದೆ. ಹೀಗಾಗಿ, ನನ್ನ ಮಾವನಿಗೆ ಹೊಡೆದಾಕಿದ ಕಾರಣಕ್ಕೆ ನಾನು ದೇವಪ್ಪನಿಗೆ ಹೊಡೆದದ್ದು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.