ಉತ್ತರ ಕರ್ನಾಟಕ ಬಂದ್ ಸುಳಿವಿಲ್ಲ!
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಕೆಲ ಸಂಘಟನೆಗಳು ಬಂದ್ ಕರೆ ನೀಡಿದ್ದವು. ಆದರೆ, ನಿನ್ನೆ ಸಂಜೆಯಷ್ಟೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಟ ಸಮಿತಿ ಅದ್ಯಕ್ಷ ಸೋಮಶೇಖರ ಕೋಸಂಬರಿ ಬಂದ್ ಕರೆಯನ್ನು ವಾಪಸ್ ಪಡೆದಿದ್ದರು. ಇತರೆ ಸಂಘಟನೆಗಳು ನಡೆಸಲಿರುವ ಬಂದ್ ಗೆ ಬೆಂಬಲವಿಲ್ಲ ಎಂದು ಹೇಳಿದ್ದರು.
ಇಂದು ಬೆಳಗ್ಗೆಯಿಂದಲೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಬಗ್ಗೆ ಸುಳಿವು ಸಿಕ್ಕಿಲ್ಲ. ಯಾವುದೇ ಸಂಘಟನೆಗ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಆರಂಭಿಸಿಲ್ಲ. ಹೀಗಾಗಿ, ಜನ ಜೀವನ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ವಾಹನಗಳ ಸಂಚಾರ, ತರಕಾರಿ, ಹಾಲೂ, ಪತ್ರಿಕೆ ಮಾರಾಟ ಎಂದಿನಂತೆ ಸಾಗಿದೆ. 9 ಗಂಟೆ ಬಳಿಕ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಕೆಲಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದ್ದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕೆಲವು ಕಡೆ ಕನ್ನಡಪರ ಸಂಘಟನೆಗಳು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ವಿರೋಧಿಸಿ ಅಖಂಡ ಕರ್ನಾಟಕಕ್ಕೆ ಆಗ್ರಹಿಸಿ ಧರಣಿ ನಡೆಸಲಿವೆ. ಆ ಮೂಲಕ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.