ಯಾದಗಿರಿ ನಗರಠಾಣೆಯಲ್ಲಿ ಭರ್ಜರಿ ಆಯುಧ ಪೂಜೆ
ಯಾದಗಿರಿ: ನಾಡಿನೆಲ್ಲೆಡೆ ವಿಜಯದಶಮಿ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ಮನೆಗಳಲ್ಲಿ ದೇವಿಯ ಪೂಜೆ ಪುನಸ್ಕಾರ ಬಲು ಜೋರಾಗಿದೆ. ಇದೇ ಸಂದರ್ಭದಲ್ಲಿ ನಗರದ ಪೊಲೀಸ್ ಠಾಣೆಯಲ್ಲಿ ದಸರಾ ಪ್ರಯುಕ್ತ ವಿಶೇಷವಾಗಿ ಆಯುಧ ಪೂಜೆ ನಡೆಯಿತು. ಮೊದಲಿಗೆ ಚಾಮುಂಡೇಶ್ವರಿ ದೇವಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪೊಲೀಸ್ ಇಲಾಖೆಗೆ ಸಂಭಂಧಿಸಿದ ಆಯುಧಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ನಗರ ಪೊಲೀಸ್ ಠಾಣೆಯಿಂದು ನವ ವಧುವಿನಂತೆ ಸಿಂಗಾರಗೊಂಡಿತ್ತು. ಇಡೀ ಪೊಲೀಸ್ ಠಾಣೆಯ ಕಟ್ಟಡವನ್ನು ಸ್ವಚ್ಛಗೊಳಿಸಿದ್ದ ಸಿಬ್ಬಂದಿ ತಳಿರು ತೋರಣಗಳಿಂದ ಕಟ್ಟಡವನ್ನು ಸಿಂಗಾರಗೊಳಿಸಿದ್ದರು. ಠಾಣೆಯ ಬಾಗಿಲುಗಳಿಗೆ ಹೂವಿನ ಅಲಂಕಾರ, ಜಗಮಗಿಸುವ ವಿದ್ಯುತ್ ದೀಪಗಳ ಮದ್ಯೆ ಇಡೀ ಪೊಲೀಸ್ ಠಾಣೆಯ ಕಟ್ಟಡ ಕಲ್ಯಾಣ ಮಂಟಪದಂತೆ ಕಂಗೊಳಿಸುತ್ತಿತ್ತು. ಅಷ್ಟೇ ಅಲ್ಲದೆ ಇಲಾಖೆ ವಾಹನಗಳನ್ನು ತೊಳೆದು ವಿಭೂತಿ, ಕುಂಕುಮ ಹಚ್ಚಿ ಹೂಮಾಲೆಗಳನ್ನು ಹಾಕಿ, ಕುಂಬಳಕಾಯಿ ಹೊಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.
ಪೊಲೀಸ್ ಸಿಬ್ಬಂದಿ ಇಂದು ವಿಶೇಷವಾದ ಸಾಂಪ್ರದಾಯಿಕ ಉಡುಪು ಧರಿಸಿ ಶ್ರದ್ಧಾ-ಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬಹುತೇಕ ಎಲ್ಲರೂ ತೆಳು ನೀಲಿ ಬಣ್ಣದ ಅಂಗಿ , ಕೊರಳಲ್ಲೊಂದು ಬಿಳಿ ವಸ್ತ್ರ, ತಲೆ ಮೇಲೆ ಗಾಂಧಿಟೋಪಿ, ಹಣೆಗೆ ಕುಂಕುಮ, ವಿಬೂತಿ ಧರಿಸಿದ್ದು ಜನರ ಗಮನಸೆಳೆಯಿತು. ಕೆಲವರಿಗೆ ತಕ್ಷಣಕ್ಕೆ ಪೊಲೀಸರನ್ನು ಗುರುತು ಹಿಡಿಯುವುದು ಕಷ್ಟಸಾಧ್ಯವಾಗಿತ್ತು. ಸಿಪಿಐ ಮೌನೇಶ ಪಾಟೀಲ ಅವರ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾಕಾರ್ಯಕ್ರಮದಲ್ಲಿ ಪಿಎಸ್ ಐ ಮಹಾಂತೇಶ ಸಜ್ಜನ್, ಅಪರಾಧ ವಿಭಾಗದ ಪಿಎಸ್ ಐ ಮಂಜುಳಾ, ಎಎಸ್ ಐ ವೀರಣ್ಣ ಸೇರಿದಂತೆ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.