ಯಾದಗಿರಿಃ ಅಬ್ಬೆತುಮಕೂರು ಶ್ರೀಗಳ ಪಾದಯಾತ್ರೆ ರದ್ದು
ಯಾದಗಿರಿಃ ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದ್ದ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಪರಂಪರಾ ಪಾದಯಾತ್ರೆ ಈ ವರ್ಷ ನಡೆಯುವುದಿಲ್ಲವೆಂದು ಶ್ರೀಮಠದ ವಕ್ತಾರರಾದ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಪ್ರತಿವರ್ಷ ನಾಗರ ಅಮಾವಾಸ್ಯೆಯ ಎರಡು ದಿನ ಮುಂಚೆ ಪ್ರಾರಂಭಿಸುತ್ತಿದ್ದ ಪರಂಪರಾ ಪಾದಯಾತ್ರೆ ನಿರಂತರ ಮೂರು ದಿನಗಳ ಕಾಲ ಅಸಂಖ್ಯಾತ ಭಕ್ತರ ಮಧ್ಯೆ ಮಠದ ಪೀಠಾಧಿಪತಿಗಳಾದ ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿತ್ತು. ಆದರೆ ಈ ವರ್ಷ ಕೋವಿಡ್-19 ವೈರಸ್ ಸಂಕಟ ಇರುವುದರಿಂದ ಪರಂಪರಾ ಪಾದಯಾತ್ರೆ ರದ್ದು ಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀಮಠದ ಎಲ್ಲ ಭಕ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಸುರಕ್ಷಿತವಾಗಿದ್ದು, ಅವಶ್ಯವೆನಿಸಿದಾಗ ಹೊರ ಹೋಗುವ ಸಂದರ್ಭದಲ್ಲಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಪಾಲಿಸಿ ಕೊರೊನಾ ತಡೆಗಟ್ಟುವಲ್ಲಿ ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಆದಷ್ಟು ಬೇಗನೇ ಈ ಮಹಾಮಾರಿ ಭೂ ಮಂಡಲದಿಂದ ತೊಲಗಿ ಹೋಗುವಂತೆ ಸಮಸ್ತ ಭಕ್ತಾದಿಗಳು ಶ್ರೀವಿಶ್ವಾರಾಧ್ಯರನ್ನು ಮನೆಯಲ್ಲಿಯೇ ಇದ್ದುಕೊಂಡು ಭಕ್ತಿಯಿಂದ ಭಜಿಸುವಂತೆ ಅವರು ವಿನಂತಿಸಿದ್ದಾರೆ.