ಹೊಟೇಲ್‍ನಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿಃ ಸರ್ವೇಯರ್ ದತ್ತು ವಶಕ್ಕೆ
ಶಹಾಪುರಃ ಎಸಿಬಿ ದಾಳಿ, ಸರ್ವೇಯರ್ ದತ್ತು ವಶಕ್ಕೆ
ಶಹಾಪುರಃ ನಗರದ ಗ್ಯಾರೇಜ್ ಲೈನ್ ಗುರು ದರ್ಶನಿ ಹೊಟೇಲ್‍ನಲ್ಲಿ ರೈತರೊಬ್ಬರಿಂದ ಜಮೀನು ಸರ್ವೇಗಾಗಿ ಐದು ಸಾವಿರ ಲಂಚ ಸ್ವೀಕರಿಸುತ್ತಿರುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ನಗರದ ಭೂ-ಮಾಪನ ಇಲಾಖೆಯಲ್ಲಿ ಸರ್ವೇಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ದತ್ತುಕುಮಾರ ಎಂಬಾತನನ್ನು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ 7 ಗಂಟೆಗೆ ಸುಮಾರಿಗೆ ನಡೆದಿದೆ.
ತಾಲೂಕಿನ ಖಾನಾಪುರ ಗ್ರಾಮದ ಮಾಳಿಂಗರಾಯ ಎಂಬುವವರ ಜಮೀನು ಸರ್ವೇಗೆ 5 ಸಾವಿರ ಲಂಚ ಕೇಳಿದ್ದ ಸರ್ವೇಯರ್ ದತ್ತುಕುಮಾರ. ನಗರದ ಗುರು ದರ್ಶನಿ ಹೊಟೇಲ್‍ನಲ್ಲಿ ಲಂಚ ಪಡೆಯುತ್ತಿರುವಾಗ ಎಸಿಬಿ ಡಿಎಸ್‍ಪಿ ವೀರೇಶ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ದತ್ತುಕುಮಾರನನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಪತ್ರಕರ್ತರೊಂದಿಗೆ ಮಾತನಾಡಿದ ಎಸಿಬಿ ಡಿಎಸ್‍ಪಿ ವೀರೇಶ, ಲಂಚದ ಬೇಡಿಕೆ ಬಗ್ಗೆ ಮಾಳಿಂಗರಾಯ ದೂರು ಸಲ್ಲಿಸಿದ್ದ, ಅದರನ್ವಯ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಇಂದು ಹೊಟೇಲ್ ನಲ್ಲಿ ಐದು ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ಕುರಿತು ತನಿಖೆ ಮುಂದುವರೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಭ್ರಷ್ಟ ಅಧಿಕಾರಿಗಳ ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ, ದೂರುಗಳು ಬಂದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಸಾರ್ವಜನಿಕರು ಅಧಿಕಾರಿಗಳಿಗೆ ಲಂಚ ನೀಡಿ ತಮ್ಮ ಕೆಲಸ ಮಾಡಿಕೊಳ್ಳುವುದು ಸರಿಯಲ್ಲ. ಲಂಚ ಬೇಡಿದ ಅಧಿಕಾರಿಗಳ ವಿರುದ್ಧ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದರು. ದಾಳಿಯಲ್ಲಿ ಎಸಿಬಿ ಅಧಿಕಾರಿಗಳಾದ ಯಶವಂತ ಬಸನಳ್ಳಿ, ಮಹಾಂತೇಶ ಪಾಟೀಲ್ ಹಾಗೂ ಸಿಬ್ಬಂದಿ ಹಾಜರಿದ್ದರು.