ಪ್ರಮುಖ ಸುದ್ದಿ
ಒಂದೂವರೆ ಲಕ್ಷ ಲಂಚ ಸ್ವೀಕರಿಸುತ್ತಿದ್ದ ಕೃಷಿ ಅಧಿಕಾರಿ ಎಸಿಬಿ ಬಲೆಗೆ!
ಹಾವೇರಿ: ಹಾನಗಲ್ ಪಟ್ಟಣದ ಸಹಾಯಕ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ರಿಯಾಯತಿಯಲ್ಲಿ ಕೃಷಿ ಸಲಕರಣೆಗಳ ಪೂರೈಕೆ ಮಾಡಿದ ಗುತ್ತಿಗೆದಾರರಿಗೆ ಹದಿನೇಳು ಲಕ್ಷ ರೂಪಾಯಿ ಬಿಲ್ ಮಾಡಿಕೊಡಲು ಡಾ.ಬಸವರಾಜ್ ಒಂದೂವರೆ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಹಾವೇರಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಪ್ರಹ್ಲಾದ್ ಮತ್ತು ತಂಡ ದಾಳಿ ನಡೆಸಿ ಡಾ.ಬಸವರಾಜ್ ರನ್ಉ ರೆಡ್ ಹ್ಯಾಂಡಾಗಿ ಹಿಡಿದಿದೆ. ವೀರಣ್ಣ ಸಿಂಧೂರ ಮತ್ತು ಸಂಜಯ್ ಎಂಬುವವರ ಬಳಿ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟ ಅಧಿಕಾರಿ ಡಾ.ಬಸವರಾಜ್ ಬಣ್ಣ ಬಯಲು ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.