ಪ್ರಮುಖ ಸುದ್ದಿ
ಸುರಪುರಃ ಮುಖಾಮುಖಿ ಡಿಕ್ಕಿ ಕಾರೊಂದಕ್ಕೆ ಬೆಂಕಿ ಹಲವರಿಗೆ ಗಾಯ
ಯಾದಗಿರಿಃ ವೇಗದ ಮಿತಿ ಮೀರಿ ಹೊರಟ್ಟಿದ್ದ ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರೊಂದಕ್ಕೆ ಬೆಂಕಿಹೊತ್ತಿಕೊಂಡು ಸುಟ್ಟಿದ್ದು, ಹಲವರು ಗಾಯಗೊಂಡ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕುಂಬಾರಪೇಟೆ-ಕವಡಿಮಟ್ಟಿ ಮುಖ್ಯರಸ್ತೆಯ ಅಡ್ಡಮಡ್ಡಿ ಗುಡ್ಡದ ಹತ್ತಿರ ರವಿವಾರ ಮದ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.
ಎರಡು ಕಾರುಗಳು ನಜ್ಜುಗುಜ್ಜಾಗಿದ್ದು, ಒಂದು ಕಾರಿಗೆ ಬೆಂಕಿಹೊತ್ತಿಕೊಂಡು ಸುಟ್ಟಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಎರಡು ಕಾರಿನೊಳಗಿನ ಹಲವು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರಪುರ ತಾಲೂಕಿನವರಾದ ಇವರು ಕಲಬುರ್ಗಿಯ ಮದುವೆಯೊಂದಕ್ಕೆ ಇದೇ ಕಾರಿನೊಳಗೆ ತೆರಳಿದ್ದು, ಮರಳಿ ಸುರಪುರಕ್ಕೆ ಬಂದು, ಹುಣಸಗಿಯಲ್ಲಿ ಇರುವ ಇನ್ನೊಂದು ಮದುವೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ ಎಂದು ಗಾಯಾಳು ಸಿದ್ದಣಗೌಡ ಹೊಸಮನಿ ಸಾ.ಎಂ.ಬೊಮ್ಮನಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಈ ಕುರಿತು ಠಾಣಾ ತನಿಖಾಧಿಕಾರಿ ಹೆಚ್.ಸಿ.ಗೋಪಾಲ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.