ಗ್ರೇಟ್ ಬಸ್ ಡ್ರೈವರ್: ಪ್ರಯಾಣಿಕರನ್ನು ಬಚಾವ್ ಮಾಡಿದ್ದೇ ಮಿರಾಕಲ್!
ಯಾದಗಿರಿ: ಕಬ್ಬು ತುಂಬಿದ ಯಮರೂಪಿ ಲಾರಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು. ಆನೆ ನಡೆದದ್ದೇ ದಾರಿ ಎಂಬಂತೆ ಚಾಲಕ ರಸ್ತೆ ತುಂಬಾ ಲಾರಿ ಅತ್ತಿಂದಿತ್ತ ಇತ್ತಿಂದತ್ತ ಓಡಿಸಿಕೊಂಡು ಹೋಗುತ್ತಿದ್ದ. ಎಣ್ಣೆ ಹೊಡೆದವರಂತೆ ಜೋಲಿ ಹೊಡೆಯುತ್ತಿದ್ದ ಲಾರಿಯ ಕಂಡ ವಾಹನ ಸವಾರರು ಸಹವಾಸವೇ ಬೇಡ ಎಂದು ದೂರದೂರವೇ ಸಾಗಿದ್ದರು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದ ಬಳಿ ಕೆಎಸ್ ಆರ್ ಟಿಸಿ ಬಸ್ಸಿಗೆ ಸಡನ್ನಾಗಿ ರಾಕ್ಷಸ ಲಾರಿ ಎದುರಾಗಿದೆ. ತಕ್ಷಣಕ್ಕೆ ಎಚ್ಚೆತ್ತುಕೊಂಡ ಬಸ್ ಚಾಲಕ ರಸ್ತೆಯಿಂದ ಬಸ್ ಕೆಳಗಿಳಿಸಿ ಬಸ್ಸನ್ನು ಪೂರ್ಣ ರಸ್ತೆಬದಿಗೆ ನಿಲ್ಲಿಸಿಬಿಟ್ಟಿದ್ದಾರೆ.
ಬಸ್ ಚಾಲಕ ಅಷ್ಟೆಲ್ಲಾ ಮುಂಜಾಗೃತೆ ವಹಿಸಿದರೂ ಸಹ ಕುಡಿದ ಅಮಲಿನಲ್ಲಿದ್ದ ಲಾರಿ ಚಾಲಕ ಕೊನೆಗೂ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬಸ್ಸಿನ ಕಿಡಕಿ ಗ್ಲಾಸ್ ಗಳು ಜಖಂ ಆಗಿವೆ. ಆದರೆ, ಬಸ್ಸಿನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಹೀಗಾಗಿ, ಸಮಯಪ್ರಗ್ನೆ ಮೆರೆದ ಬಸ್ ಚಾಲಕ ರೇವಣ್ಣಪ್ಪಗೆ ಪ್ರಯಾಣಿಕರು ಶಹಭ್ಭಾಶ್ ಹೇಳಿ ಕೃತಗ್ನತೆ ಸಲ್ಲಿಸಿದ್ದಾರೆ. ಅಂತೆಯೇ ಲಾರಿಯ ಕುಡುಕ ಚಾಲಕನಿಗೆ ಛೀಮಾರಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.