ಸಂಭ್ರಮದ ಐತಿಹಾಸಿಕ ವೇಣುಗೋಪಾಲ ಜಾತ್ರೆ
ಸಾಂಪ್ರದಾಯಿಕ ಹಾಲೋಕುಳಿಯಲ್ಲಿ ಮಿಂದೆದ್ದ ಭಕ್ತ ಸಮೂಹ
ಯಾದಗಿರಿಃ ಸಾಂಪ್ರದಾಯಿಕವಾಗಿ ಹಲವಾರು ಜಾತ್ರೆಗಳು ನಡೆಯುತ್ತವೆ. ಪ್ರತಿ ಜಾತ್ರೆಗೊಂದು ಹಿನ್ನೆಲೆ ಇದೆ. ಅದರಂತೆ ಕೆಲವು ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಜಿಲ್ಲೆಯ ಸುರಪುರದ ವೇಣೂಗೋಪಾಲ ಜಾತ್ರೆ ಹಾಲೋಕುಳಿಗೆ ಹೆಸರುವಾಸಿಯಾಗಿದೆ. ಇದು ಸುಮಾರು 302 ವರ್ಷದಿಂದ ನಡೆದುಕೊಂಡು ಬಂದಿದೆ.
ಅತಿ ಎತ್ತರದ ಸ್ಥಂಭಾರೋಹಣದ ಹಾಲೋಕುಳಿ ಜಾತ್ರೆ ಎಂದು ಕರೆಯಲ್ಪಡುವ ಇಲ್ಲಿನ ಜಾತ್ರೆ ಮಹತ್ವ ಪಡೆದುಕೊಂಡಿದೆ. ಪ್ರತಿ ವರ್ಷ ಕೃಷ್ಣಾ ಜನ್ಮಾಷ್ಠಮಿ ಮರುದಿನ ಈ ಜಾತ್ರೆ ವೈಭವ ನಡೆಯಲಿದೆ.
ಅದರಂತೆ ರವಿವಾರ ಸ್ಥಂಭಾರೋಹಣ ಹಾಲೋಕುಳಿಗೆ ಸಕಲ ಸಿದ್ಧತೆಯನ್ನು ಇಲ್ಲಿನ ಅರಸು ಮನೆತನದವರು ಮಾಡಿದ್ದರು.
ಸ್ಥಂಭಾರೋಹಣ ಹಾಲೋಕುಳಿ ಹೀಗೆಂದರೇನು..?
ವೇಣುಗೋಪಾಲ ಸ್ವಾಮಿ ದೇವಾಲಯದ ಮುಂಭಾಗದ ಪ್ರದೇಶದಲ್ಲಿ 5 ಬೃಹತ್ ಕಂಬಗಳನ್ನು ಹಾಕಲಾಗುತ್ತದೆ. ಈ ಕಂಬವನ್ನು ಏರಲು ಒಂದು ಯುವಕರ ಪಡೆ ಹರಸಾಹಸ ಪಡುತ್ತಿದ್ದರೆ, ಇನ್ನೊಂದು ಗುಂಪು ಅವರನ್ನು ಏರದಂತೆ ತಡೆಯಲು ಕಂಬದ ಮೇಲೆ ಬೆಣ್ಣೆಯನ್ನು ಸವರುತ್ತಾರೆ. ಈ ಎರಡು ಗುಂಪುಗಳ ನಡುವೆ ನಡೆಯುವ ಆಟ ರೋಮಾಂಚನಕಾರಿ.
ಕಂಬದ ಮೇಲೊಂದ ಸಣ್ಣ ಮಂಟಪ ಮಾಡಿರಲಾಗುತ್ತದೆ. ಆ ಮಂಟಪದಲ್ಲಿ ಗಡಿಗೆಯಲ್ಲಿ ಎಣ್ಣೆ ಮಿಶ್ರಿತ ನೀರು ಮತ್ತು ಬಾಳೆ ಹಣ್ಣು ಇಡಲಾಗುತ್ತದೆ. ಮೇಲೊಬ್ಬರು ಕುಳಿತಿದ್ದು ಕಂಬದ ಮೇಳೆ ಆಗಾಗ ಎಣ್ಣೆ ಮಿಶ್ರಿತ ನೀರು ಸುರಿಯುತ್ತಾರೆ. ಅದರಿಂದಾಗ ಕಂಬ ಏರತ್ತಿರುವ ಸಾಹಿಸಿ ಜಾರಿ ಜಾರಿ ಕೆಳಗೆ ಬೀಳುತ್ತಲೆ ಇರುತ್ತಾರೆ. ಕೊನೆಗೂ ಛಲ ಬಿಡದೆ ಕಂಬವೇರಿ ಮಂಟಪಕ್ಕೆ ಕಟ್ಟಲಾದ ಹಣ್ಣಿನ ಹೋಳುಗಳನ್ನು ಹರಿಯುತ್ತಾನೆ. ಆ ಮೂಲಕ ಸಾಹಸಿ ತನ್ನ ಗುರಿಯನ್ನು ತಲುಪುತ್ತಾನೆ.
ಕೃಷ್ಣ ಜನ್ಮಾಷ್ಟಮಿಯೊಂದಿಗೆ ಆರಂಭವಾಗುವ ಈ ಜಾತ್ರೆಯನ್ನು ಸುರಪುರ ಸಂಸ್ಥಾನದ ಗೋಸಲ ವಂಶಸ್ಥ ಅರಸು ಮನೆತನದವರು 302 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ವಿಶೇಷ.
ವೇಣುಗೋಪಾಲ ಸ್ವಾಮಿಯ ಮಹಾಮಂಗಳಾರತಿ ಸೇವೆಯ ನಂತರ ದೇಶದಲ್ಲಿಯೇ ಅಪರೂಪ ಎನಿಸುವ ದೇವರಗಂಬ ಸ್ಥಂಭಾರೋಹಣದ ಹಾಲೋಕಳಿಗೆ ಜಾತ್ರೆಗೆ, ಇಲ್ಲಿಯ ಸಂಸ್ಥಾನದ ಅರಸು ಮನೆತನದ ಪ್ರತಿನಿಧಿ ವತನದಾರರು ನಾಣ್ಯಗಳನ್ನು ಜನರತ್ತ ತೂರುವ ಮೂಲಕ ಚಾಲನೆ ದೊರೆಯುತ್ತದೆ.
60 ಅಡಿ ಎತ್ತರದ 5 ದೇವರಗಂಬಗಳಿಗೆ ಅರದಾಳ, (ಜಾರುವ ಪದಾರ್ಥ) ಬೆಣ್ಣೆ ಸವರಲಾಗಿದ್ದ ಕಂಬಗಳನ್ನು ಹತ್ತಲು ಮತ್ತು ಮಂಟಪದ ಮೇಲೆ ಕಟ್ಟಲಾದ ಹೋಳುಗಳನ್ನು ಕಿತ್ತೆಸೆಯುವ ಯುವಕರ ಸಾಹಸ ಆರಂಭವಾಗಿ ಜನ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.
ನಿರ್ದಿಷ್ಟ ಗ್ರಾಮದ ಜನರಿಗೆ ಮಾತ್ರ ಸ್ಥಂಭಾರೋಹಣ ಮಾಡಲು ಅವಕಾಶವಿರುವ ಈ ಸಾಹಸಮಯ ಜಾತ್ರೆಗೆ, ಅವರು ಭಾಜಾ ಭಜಂತ್ರಿಗಳ ಮೂಲಕ ಚರ್ಮದ ನೀರಿನ ಪಿಚಕಾರಿಯಿಂದ ಜನರಿಗೆ ನೀರು ಚಿಮ್ಮಿಸುತ್ತಾ ದೆವಸ್ಥಾನದ ದೇವರಗಂಬಗಳ ಬಳಿ ಸೇರುತ್ತಾರೆ.
ನಿರ್ದಿಷ್ಟ ಪಡಿಸಿದ ಯುವಕರು 60 ಅಡಿ ಎತ್ತರದ 5 ಬೃಹತ್ ಕಂಬ ಹತ್ತಿ ಇಳಿಬಿಟ್ಟ ಹೋಳುಗಳನ್ನು ಹರಿಯುವುದು ಸಾಹಸವಾದ್ರೆ, ಅದನ್ನು ಹರಿಯಲು ಬಿಡದಂತೆ ಕೆಳಗಿನಿಂದ ನೀರು ಚಿಮ್ಮಿಸುತ್ತಿದ್ದರೆ, ಮೇಲಿನಿಂದ ಬಾಳೆ ಹಣ್ಣು ಎಣ್ಣೆ ಮಿಶ್ರಿತ ನೀರು ಸುರಿದು ಕಂಬ ಹತ್ತಲು ಅಡಚಣೆ ಮಾಡಲಾಗುತ್ತದೆ. ಈ ಸಾಹಸಮಯ ದೃಶ್ಯ ನೋಡುಗರ ಕಣ್ಮನ ಸೇಳೆಯುತ್ತವೆ.
ಸಾಹಸ ತೋರುವ ಯುವಕರು ಕೊನೆಗೂ ಹೋಳು ಹರಿದು ಕಿತ್ತೆಸೆಯುವ ದೃಶ್ಯವಂತೂ ನೋಡುಗರಿಗೆ ರೋಮಾಂಚನಗೊಳಿಸುತ್ತದೆ. ಬೃಹತ್ ಕಂಬ ಏರುತ್ತಿದ್ದಂತೆಯೇ ಮೇಲಿನಿಂದ ಜಾರುವ ಪದಾರ್ಥ ಸುರಿಯುವದರಿಂದ ಆರೋಹಿ ಸರ್ರರೆಂದು ಕೆಳಗೆ ಜಾರಿ ಬೀಳುವುದು ನೋಡುಗರನ್ನು ರೋಮಾಂಚನಗೊಳಿಸುತ್ತದೆ.
ಇನ್ನೇನು ಕಂಬದ ತುತ್ತ ತುದಿಗೆ ತಲುಪಿ ಹೋಳು ಹರಿಯಬೇಕೆನ್ನುವಷ್ಟರಲ್ಲಿ ಕಂಬದಿಂದ ಜಾರಿ ದಪ್ಪ ಎಂದು ಕೆಳಗೆ ಬೀಳುವುದುಂಟು. ಸಾಹಸ ಮತ್ತು ಮನೋರಂಜನೆ ಬಿಂಬಿಸುವ ಒಟ್ಟು 3 ದಿನ ನಡೆಯುವ ಈ ಜಾತ್ರೆ ನೋಡುವುದೇ ಒಂದು ಸೊಬಗು ಎನ್ನುತ್ತಾರೆ ಜಾತ್ರೆಗೆ ಬಂದ ದೀಪಿಕಾ ಮತ್ತು ಸುಷ್ಮೀತಾ.
ಸಾಹಸಮಯಿಗಳಿಗೆ ಪ್ರೋತ್ಸಾಹಿಸುವ ಪ್ರತೀಕವೇ ಹಾಲೋಕುಳಿ
ವೇಣುಗೋಪಾಲ ಸ್ವಾಮಿಯ ಹಾಲೋಕುಳಿಯ ಸಾಹಸಮಯ ಜಾತ್ರೆಗೆ ಕರ್ನಾಟಕ ಸೇರಿದಂತೆ ದೂರದ ಮಹರಾಷ್ಟ್ರ, ಆಂದ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಸಾಕಷ್ಟು ಜನರು ಬರುತ್ತಾರೆ. ಇದೊಂದು ಪುರಾತನ ಸಂಸ್ಕೃತಿ, ಪರಂಪರೆ ಬಿಂಬಿಸುವ ಜಾತ್ರೆ. 302 ವರ್ಷಗಳಿಂದಲೂ ಸ್ಥಳೀಯ ಅರಸು ಮನೆತನದವರು ನಡೆಸಿಕೊಡುವ ಈ ಜಾತ್ರೆ, ಇಲ್ಲಿಯ ಯುವಕರಿಗೆ ಸಾಹಸ ಮನೋಭಾವ ಬೆಳೆಸಿಕೊಳ್ಳುವ ಪ್ರೇರೆಪಿಸುವ ಪ್ರತೀಕವಾಗಿದೆ.
–ವೇಣುಮಾದವ್ ನಾಯಕ, ಸುರಪುರ ವತನದಾರರು.