ಅಪರಿಚಿತ ವಾಹನ ಡಿಕ್ಕಿ ವಿದ್ಯಾರ್ಥಿ ಸಾವು
ಅಪಘಾತಃ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮ ಸಮೀಪ ಹೆದ್ದಾರಿಯಲ್ಲಿ ರಸ್ತಾಪುರದಿಂದ ಶಹಾಪುರಕ್ಕೆ ಹೊರಟ್ಟಿದ್ದ ಬೈಕ್ ಸವಾರನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋದ ಪರಿಣಾಮ ಬೈಕ್ ಸವಾರ ತೀವ್ರ ರಕ್ತಸ್ರಾವಗೊಂಡಿದ್ದು, ಕಲಬುರ್ಗಿಯ ಕಾಮರಡ್ಡಿ ಖಾಸಗಿ ಆಸ್ಪತ್ರೆಗೆ ಶುಕ್ರವಾರ ದಾಖಲು ಮಾಡಲಾಗಿತ್ತು.
ಆದರೆ ಗಾಯಾಳು ಚಿಕಿತ್ಸೆಗೆ ಸೂಕ್ತ ಸ್ಪಂಧನೆ ನೀಡದೆ ಶನಿವಾರ ಆಸ್ಪತ್ರೆಯಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ರಸ್ತಾಪುರ ಗ್ರಾಮ ನಿವಾಸಿ ಯುವಕ ಶರಣಬಸವ ತಂದೆ ಬಸವರಾಜ ಬ್ಯಾಲಾಳ (18) ಎಂಬಾತನೇ ಮೃತ ದುರ್ದೈವಿ. ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಮೃತ ಯುವಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದು, ನಗರದ ಬಾಪಪುಗೌಡ ದರ್ಶನಾಪುರ ಶಾಲೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಶನಿವಾರ ಮೊದಲನೇ ಇಂಗ್ಲೀಷ್ ಪತ್ರಿಕೆ ಬಿಡಿಸುವ ಧಾವಂತದಲ್ಲಿದ್ದ, ವಿದ್ಯಾರ್ಥಿಯನ್ನು ವಿಧಿ ಬಲಿ ತೆಗೆದುಕೊಂಡಿರುವುದು ದುರಂತ. ಮೃತ ವಿದ್ಯಾರ್ಥಿಯ ತಂದೆ ಗ್ರಾಮದ ವಿಎಸ್‍ಎಸ್‍ಎನ್ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಮನೆಯಲ್ಲಿ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.