ಹುಡುಗಿಯರೇ ಹುಷಾರು : ಮತ್ತೋರ್ವ ಸೈಕೋಪಾತ್ ಪ್ರತ್ಯಕ್ಷವಾಗಿದ್ದಾನಂತೆ!
ಬೆಂಗಳೂರು: ನಗರದ ಬೈಯಪ್ಪನಹಳ್ಳಿಯಲ್ಲಿರುವ BMRCL ಮಹಿಳಾ ಕ್ವಾಟ್ರಸ್ ಗೆ ನುಗ್ಗಿದ ಸೈಕೋಪಾತ್ ಓರ್ವ ಯುವತಿಯರಲ್ಲಿ ಆತಂಕ ಮೂಡಿಸಿದ ಘಟನೆ ಬೆಳಕಿಗರ ಬಂದಿದೆ. ಜನೇವರಿ 10 ರಂದು ರಾತ್ರಿ 2 ಗಂಟೆ ಸುಮಾರಿಗೆ ಮೂವರು ಯುವತಿಯರಿದ್ದ ಕೋಣೆಗೆ ಸೈಕೋಪಾತ್ ನುಗ್ಗಿದ್ದನಂತೆ. ಅಪರಿಚಿತ ವ್ಯಕ್ತಿಯನ್ನು ಕಂಡು ಯುವತಿಯರು ಕಿರುಚಾಡಿದ್ದಾರೆ. ಆದರೆ, ಸೈಕೋಪಾತ್ ಚಾಕು ತೋರಿಸಿ ಬೆದರಿಸಲು ಯತ್ನಿಸಿದ್ದಾನೆ. ಅಲ್ಲದೆ ಕೊಠಡಿಯಲ್ಲಿದ್ದ ಯುವತಿಯರ ಒಳ ಉಡುಪುಗಳನ್ನು ಕೈಗೆತ್ತಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಯುವತಿಯರು ನೀನು ಯಾರೆಂದು ಕೇಳಿದಾಗ ನಾನು ಕಳ್ಳ, ಮನೆಯಿಂದ ಹೊರಗೆ ಹಾಕಿದ್ದಾರೆಂದೆಲ್ಲಾ ಹೇಳಿದನಂತೆ.
ಯುವತಿಯರ ಕೂಗಾಟದಿಂದ ಕ್ವಾಟ್ರಸ್ ನ ಜನ ಜಮಾ ಆಗುವುದನ್ನು ಗಮನಿಸಿದ ಸೈಕೋಪಾತ್ ಎಸ್ಕೇಪ್ ಆಗಿದ್ದಾನೆ. ಹೀಗಾಗಿ, ಕ್ವಾಟ್ರಸ್ ನಲ್ಲಿನ ಯುವತಿಯರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಬ್ಬ ಸೈಕೋಪಾತ್ ಬೆಂಗಳೂರು ಎಂಟ್ರಿ ಆಗಿರುವ ಸುದ್ದಿ ಎಲ್ಲೆಡೆ ಹಬ್ಬಿದ್ದು ಮಹಿಳೆಯರಲ್ಲಿ ಭೀತಿ ಸೃಷ್ಟಿಸಿದೆ. ಸೈಕೋಪಾತ್ ಮತ್ತೆ ಯಾವಾಗ ಎಲ್ಲಿ ಪ್ರತ್ಯಕ್ಷ ಆಗುತ್ತಾನೋ. ಏನು ಕಥೆಯೋ ಎಂದು ಮಹಿಳೆಯರು ಭೀತಿಗೊಳಗಾಗುವಂತಾಗಿದೆ. ಇನ್ನು ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸೈಕೋಪಾತ್ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂದು ತಿಳಿದು ಬಂದಿದೆ.