ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ಕೇಸ್: ನಟ ಶ್ರೀನಗರ ಕಿಟ್ಟಿ ಹೇಳಿದ್ದೇನು?
ಬೆಂಗಳೂರು: ಹಾಯ್ ಬೆಂಗಳೂರ್ ಪತ್ರಿಕೆಯ ಗೌರವ ಸಂಪಾದಕ ರವಿಬೆಳಗೆರೆ ವಿರುದ್ಧ ತಮ್ಮ ಪತ್ರಿಕೆಯಲ್ಲಿ ವರದಿಗಾರನಾಗಿದ್ದ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಕೇಳಿಬಂದಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ಭೀಮಾ ತೀರದ ಹಂತಕ ಶಶಿಧರ್ ನನ್ನು ವಿಚಾರಣೆಗೆ ಒಳಪಡಿಸಿದಾಗ ರವಿ ಬೆಳಗೆರೆ, ಸುನೀಲ್ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಬಾಯಿಬಿಟ್ಟಿದ್ದಾನೆ. ಹೀಗಾಗಿ ಸಿಸಿಬಿ ಪೊಲೀಸರು ಪತ್ರಕರ್ತ ರವಿ ಬೆಳಗೆರೆ ಅವರನ್ನು ವಶಕ್ಕೆ ಪಡೆದು ಕಚೇರಿ, ಮನೆ ಮೇಲೆ ದಾಳಿ ನಡೆಸಿದ್ದಾರೆ.
ಪೊಲೀಸರು ರವಿ ಬೆಳಗೆರೆ ಅವರನ್ನು ವಶಕ್ಕೆ ಪಡೆದ ಸುದ್ದಿ ತಿಳಿದು ಪುತ್ರಿ ಭಾವನಾ, ಅಳಿಯ ಚಿತ್ರನಟ ಶ್ರೀನಗರ ಕಿಟ್ಟಿ ರವಿ ಬೆಳಗೆರೆ ಕಚೇರಿಗೆ ಧಾವಿಸಿದ್ದಾರೆ. ಮತ್ತೋರ್ವ ಪುತ್ರಿ ಪತ್ರಕರ್ತೆ ಚೇತನಾ ವಕೀಲರೊಂದಿಗೆ ಹಾಯ್ ಬೆಂಗಳೂರ್ ಪತ್ರಿಕೆ ಕಚೇರಿಗೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ಶ್ರೀನಗರ ಕಿಟ್ಟಿ ನನ್ನ ಮಾವ ರವಿ ಬೆಳಗೆರೆ ಅವರು ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿರಲು ಸಾಧ್ಯವಿಲ್ಲ. ಸುನೀಲ್ ಮತ್ತು ನನ್ನ ಮಾವನವರ ಮದ್ಯೆ ಉತ್ತಮ ಬಾಂಧವ್ಯ ಇತ್ತು. ಇಂದಿಗೂ ಸುನೀಲ್ ಅವರು ಹಾಯ್ ಬೆಂಗಳೂರ್ ಪತ್ರಿಕೆಯ ಜವಬ್ದಾರಿಯುತ ವರದಿಗಾರರಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ರವಿ ಬೆಳಗೆರೆ ಅವರ ಬೆಂಬಲಕ್ಕೆ ನಮ್ಮ ಇಡೀ ಕುಟುಂಬ ವರ್ಗ ನಿಲ್ಲಲಿದೆ. ಪ್ರಕರಣದ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.