ರಾಜಕೀಯ ಎಂಬ ಭಸ್ಮಾಸುರನ ಗೆಲ್ಲಬಲ್ಲರೇ ಈ ಚಿತ್ರನಟರು?
-ಮಲ್ಲಿಕಾರ್ಜುನ ಮುದನೂರ್
ಡಾ.ರಾಜಕುಮಾರ್ ಅವರಂತೆ ರಾಜಕೀಯದಿಂದ ದೂರವಿದ್ದು ಜನಪರ ಕಾರ್ಯ ಮಾಡಲು ಇವರಿಗೇಕೆ ಅಸಾಧ್ಯ?
ಎನ್.ಟಿ.ಆರ್, ಜಯಲಲಿತಾ ಅವರಿಂದ ಹಿಡಿದು ಅಂಬರೀಷ್, ಶಶಿಕುಮಾರ್, ಜಗ್ಗೇಶ್, ಉಮಾಶ್ರೀವರೆಗೆ ಸಾಲು ಸಾಲು ಚಿತ್ರರಂಗದ ಮಂದಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಧಿಕಾರವನ್ನೂ ಅನುಭವಿಸಿದ್ದಾರೆ. ಆದರೆ, ಅವರಿಂದ ರಾಜಕಾರಣ ಎಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆ. ಈ ನಟರು ರಾಜಕೀಯದಲ್ಲಿ ಏನೆಲ್ಲಾ ಸಾಧಿಸಿದ್ದಾರೆ. ರಾಜಕೀಯ ಎಂಬ ಭಸ್ಮಾಸುರ ಯಾವೆಲ್ಲಾ ನಟರೊಳಗಿನ ಸಮಾಜಮುಖಿ ಚಿಂತನೆಯನ್ನು ಹೇಗೆಲ್ಲಾ ಭಸ್ಮ ಮಾಡಿದ್ದಾನೆ ಎಂಬುದು ಓಪನ್ ಸೀಕ್ರೆಟ್.
ಈಗ ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್, ಉಪೇಂದ್ರ ಹೊಸ ಪಕ್ಷಗಳನ್ನು ಸ್ಥಾಪಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ಅವರೂ ಸಹ ರಾಜಕೀಯದತ್ತ ಚಿತ್ತ ಹರಿಸಿರುವ ಸುಳಿವು ನೀಡಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಆಧ್ಯಾತ್ಮದ ನೆಲೆಗಟ್ಟಿನಲ್ಲಿ ಉದಾತ್ತ ಸಿದ್ಧಾಂತದ ಹೊಸ ಪಕ್ಷ ಕಟ್ಟುವುದಾಗಿ ಹೇಳಿಕೊಂಡಿದ್ದಾರೆ. ತಮಿಳಿಗರ ಏಳ್ಗೆಗಾಗಿ ಶ್ರಮಿಸುವುದಾಗಿ ಹೊರಟಿದ್ದಾರೆ. ಕಮಲ್ ಹಾಸನ್ ಸಹ ಜಾತಿ ಮತ ಬೇಧವಿಲ್ಲದ ಪಕ್ಷ ಕಟ್ಟಿ ನಾಡ ಸೇವೆಗೆ ರೆಡಿಯಾಗಿದ್ದಾರೆ. ಇನ್ನು ರೀಯಲ್ ಸ್ಟಾರ್ ಉಪೇಂದ್ರ ಸಹ ವಿಭಿನ್ನ ಆಲೋಚನೆಗಳ ಮೂಲಕ ತಮ್ಮದೇ ಚಿಂತನೆಯ ಪಕ್ಷ ಸ್ಥಾಪಿಸಿದ್ದಾರೆ. ಅಂತೆಯೇ ಬಹುಭಾಷಾ ನಟ ಪ್ರಕಾಶ್ ರೈ ಅವರು ಕೋಮುವಾದಿಗಳ ವಿರುದ್ಧ ಸಮರ ಸಾರಿದ್ದು ಕೈ ಹಿಡಿದು ನಡೆಯುವ ಸೂಚನೆ ನೀಡಿದ್ದಾರೆ.
ಸ್ಟಾರ್ ನಟರ ಅಭಿಮಾನಿಗಳು ನೆಚ್ಚಿನ ನಟರು ರಾಜಕಾರಣಕ್ಕೆ ಎಂಟ್ರಿ ಆಗುತ್ತಿರುವುದಕ್ಕೆ ಸೈ ಅಂದಿದ್ದಾರೆ. ಜೈ ಘೋಷಣೆ ಹಾಕಿದ್ದಾರೆ. ಆದರೆ. ಈ ಸ್ಟಾರ್ ನಟರು ಅಸಲಿಗೆ ಈ ರಾಜಕಾರಣದ ಮುಖೇನ ದೇಶೋಧ್ಧಾರ ಮಾಡುತ್ತೇವೆಂದು ಹೊರಡುವ ಬದಲು ಚಿತ್ರರಂಗದಲ್ಲಿದ್ದುಕೊಂಡೇ ಉತ್ತಮ ಸಾಮಾಜಿಕ ಸಂದೇಶ ನೀಡಬಹುದು. ದಿಕ್ಕೆಟ್ಟ ರಾಜಕಾರಣಿಗಳ ವಿರುದ್ಧ ಘರ್ಜಿಸುವ ಮೂಲಕ ಸರಿದಾರಿ ತೋರಬಹುದು. ಆ ಮೂಲಕ ನಾಡನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಹುದಾಗಿದೆ. ಅದು ಬಿಟ್ಟು ಇವರೇ ರಾಜಕಾರಣಕ್ಕಿಳಿದರೆ ಎಲ್ಲರಂತೆ ಇವರೂ ಸಹ ರಾಜಕೀಯ ಭಸ್ಮಾಸುರನಿಗೆ ಬಲಿಯಾಗುವುದು ಗ್ಯಾರಂಟಿ ಎಂಬುದು ಪ್ರಗ್ನಾವಂತರ ಅಭಿಪ್ರಾಯವಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹಾಗೂ ಕೋಮುವಾದದ ಬಗ್ಗೆ ನಟ ಪ್ರಕಾಶ್ ರೈ ಗುಡುಗಿದ್ದು ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಅನೇಕರನ್ನು ಚಿಂತನೆಗೆ ಹಚ್ಚಿದೆ. ಈ ಹಿಂದೆಯೂ ಸಹ ವರನಟ ಡಾ.ರಾಜಕುಮಾರ್ ಅವರು ಗೋಕಾಕ್ ಚಳುವಳಿಗೆ ಇಳಿಯುವ ಮೂಲಕ ರಾಜ್ಯದಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ ಉದಾಹರಣೆ ಇದೆ. ತಮ್ಮ ನಡೆ-ನುಡಿಯ ಮೂಲಕವೇ ಸಾಮಾಜಿಕ ಸಂದೇಶ ಸಾರಿದ ಡಾ.ರಾಜಕುಮಾರ್ ಅವರು ರಾಜಕೀಯದಿಂದ ಮಾರು ದೂರವಿದ್ದುಕೊಂಡೇ ಸಮಾಜೋದ್ಧಾರದ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ, ಖ್ಯಾತ ನಟರು ಚಿತ್ರರಂಗದ ಮೂಲಕ, ಹೋರಾಟದ ಮೂಲಕ ಆಳುವವರನ್ನು ಎಚ್ಚರಿಸುವ ಕೆಲಸ ಮಾಡುವುದು. ಜನ ಜಾಗೃತಿ ಮೂಡಿಸುವುದು ಒಳಿತು ಎಂಬುದು ಸಾಮಾಜಿಕ ಚಿಂತಕರ ಅಭಿಪ್ರಾಯವಾಗಿದೆ.