ಬಿಜೆಪಿ ವಕ್ತಾರ ಗೋ.ಮಧುಸೂದನ, ಸುವರ್ಣ ಟಿವಿಯ ಅಜೀತ್ ಹನುಮಕ್ಕನವರ್ ವಿರುದ್ಧ ದೂರು ಸಲ್ಲಿಕೆ
ಶಹಾಪುರದಲ್ಲಿ ಪ್ರಗತಿಪರರಿಂದ ಪ್ರತಿಭಟನಾ ಮೆರವಣಿಗೆ- ದೂರು ಸಲ್ಲಿಕೆ
ಯಾದಗಿರಿಃ ಖಾಸಗಿ ವಾಹಿನಿಯೊಂದರಲ್ಲಿ ನಡೆದ ಟಿಪ್ಪು ಜಯಂತಿ ಜಟಾಪಟಿ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ವಾಹಿನಿಯ ಅಜೀತ ಹನುಮಕ್ಕನವರ್ ಮತ್ತು ಬಿಜೆಪಿ ವಕ್ತಾರ ಗೋ.ಮಧೂಸೂದನ್ ಅವರು ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಪ್ರಗತಿಪರರು ಪ್ರತಿಭಟನೆ ಮೆರವಣಿಗೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸಂವಿಧಾನದ ಬಗ್ಗೆ ಉಡಾಫೆ ಮಾತುಗಳನ್ನಾಡಿದ ಗೋ.ಮಧುಸೂದನ್ ಹಾಗೂ ಅಜೀತ್ ಹನುಮಕ್ಕನವರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಟಿ.ಶಶಿಧರ ರಸ್ತಾಪುರ ಅವರು ದೂರು ಸಲ್ಲಿಸಿದರು.
ದೂರು ಸಲ್ಲಿಸುವ ಮೊದಲು ನಗರ ಠಾಣೆ ಬಳಿ ಪ್ರತಿಭಟನಾನಿರತರು ಬಿಜೆಪಿಯ ಗೋ.ಮಧುಸೂದನ್ ಮತ್ತು ಅಜೀತ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಶಶಿಧರ, ಸುವರ್ಣ 24/7 ಟಿವಿ ವಾಹಿನಿಯಲ್ಲಿ ನಡೆದ ಟಿಪ್ಪು ಜಯಂತಿ ಜಟಾಪಟಿ ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರ ಗೋ.ಮಧುಸೂದನ ಮತ್ತು ವಾಹಿನಯ ಅಜೀತ್ ಸಂವಿಧಾನ ಕುರಿತು ಉಡಾಫೆಯ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಪರಮ ಪವಿತ್ರವಲ್ಲ. ಹಾಗಿದ್ದರೆ ಅದು ಇಷ್ಟೊಂದು ಬಾರಿ ಯಾಕೆ ತಿದ್ದುಪಡೆ ಆಗುತಿತ್ತು ಅಂದಿದ್ದಾರೆ. ಅಲ್ಲದೆ ಸಂವಿಧಾನವನ್ನು ಯಾವುದೋ ಪುಸ್ತಕ ಎಂಬಂತೆ ಹಿಯಾಳಿಸಿ ಮಾತಾಡುವ ಮೂಲಕ ದೇಶದ್ರೋಹವೆಸಗಿದ್ದಾರೆಂದು ಆರೋಪಿಸಿದರು. ಸಂವಿಧಾನ ವಿರೋಧಿ ಮಾತುಗಳ ಮೂಲಕ ದೇಶದ ಏಕತೆ, ಸಾರ್ವಭೌಮತೆ, ಅಖಂಡತೆಗೆ ಭಂಗ ಉಂಟು ಮಾಡಿದ್ದಾರೆ. ಕಾರಣ ಕೂಡಲೇ ಅವರನ್ನು ಬಂಧಿಸಬೇಕು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಭಾರತದ ನಾಗರಿಕನಾಗಿ ದೇಶದ ಸಂವಿಧಾನಕ್ಕೆ ಬದ್ಧನಾಗಿರಬೇಕು. ಸಂವಿಧಾನದ ಬಗ್ಗೆ ಅವಹೇಳಕಾರಿ ಮಾತನಾಡುವುದು ದೇಶದ್ರೋಹಕ್ಕೆ ಸಮ. ಸಂವಿಧಾನದ ಬಗ್ಗೆ ಅಗೌರವ ತೋರುವ ಇಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂವಿಧಾನ ಯಾವುದೇ ಧರ್ಮ ಗ್ರಂಥವಲ್ಲ. ಅದು ದೇವರಿಂದ ಬರೆಯಲ್ಪಟ್ಟಿಲ್ಲ ಎಂಬ ಹೇಳಿಕೆ ನೀಡಿದ್ದು ಸಾಮರಸ್ಯ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ, ಕೂಡಲೇ ಸಂವಿಧಾನವನ್ನು ಅಪಮಾನಿಸಿದ ಕಾರಣ ಗೋ.ಮಧುಸೂದನ್ ಮತ್ತು ಅಜೀತ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡುತ್ತ ಆರಕ್ಷಕ ನಿರೀಕ್ಷಕರಿಗೆ ದೂರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಮುಖಂಡರಾದ ಸಯ್ಯದ್ ಖಾದ್ರಿ, ಶಿವಣ್ಣ ಇಜೇರಿ, ಶಿವಕುಮಾರ ತಳವಾರ, ಶಿವಪುತ್ರ ಜವಳಿ, ಶರಣು ಬೀರನೂರ, ನಿಜಗುಣ ದೋರನಹಳ್ಳಿ, ರಾಮಣ್ಣ ಸಾದ್ಯಾಪುರ, ರಾಜು ಸಲಾದಪುರ, ಪರಸುರಾಮ ರೋಜಾ, ಭೀಮರಾಯ ಮದ್ರಿಕಿ, ದೇವು ಬಡಿಗೇರ, ಶಿವಶರಣಪ್ಪ ಚಿಕ್ಕಮೇಟಿ, ಈರಣ್ಣ ಕ್ರಾಂತಿ ಗಂಗನಾಳ, ಶಿವು ಶಿರವಾಳ, ಮಲ್ಲಿಕಾರ್ಜುನ ನಾಟೇಕಾರ, ಅನ್ವರ್ ಪಟೇಲ್, ಖಾಜಾ ಪಟೇಲ್ ಸೇರಿದಂತೆ ಇತರರಿದ್ದರು.