ಅನಿಷ್ಟ ಪದ್ದತಿ ಅಳಿಸಲು ಶ್ರಮಿಸಿದ ಕರ್ಮಯೋಗಿ ಶ್ರೀಸಿದ್ಧರಾಮೇಶ್ವರ
ಧಾರ್ಮಿಕ ಬದಲಾವಣೆ ತಂದುಕೊಟ್ಟ ಮೇಧಾವಿ
ಯಾದಗಿರಿ: 12ನೇ ಶತಮಾನದಲ್ಲಿ ಸಾಮಾಜಿಕ, ಅನಿಷ್ಟ ಪದ್ಧತಿಗಳ ವಿರುದ್ಧ ಮಹಾಕ್ರಾಂತಿ ಜರುಗಿತು. ಆ ಸಂದರ್ಭದಲ್ಲಿ ಧಾರ್ಮಿಕ ಬದಲಾವಣೆಗಳನ್ನು ತಂದು ಕೊಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಮೇಧಾವಿ ಶಿವಯೋಗಿ ಸಿದ್ಧರಾಮೇಶ್ವರರು ಎಂದು ನಗರ ಸಭೆಯ ಉಪಾಧ್ಯಕ್ಷ ಸ್ಯಾಮಸನ್ ಮಾಳಿಕೇರಿ ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ನಗರ ಸಭೆ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಿತಿ ಯಾದಗಿರಿ ಇವರ ಸಂಯುಕ್ತಾಯಶ್ರಯದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಉದ್ಫಾಟಿಸಿ ಮಾತನಾಡಿದರು.
ಸಿದ್ಧರಾಮೇಶ್ವರರು ಸೊನ್ನಲಿಯಲ್ಲಿ ರೈತ ಕುಟುಂಬದಲ್ಲಿ ಜನಸಿದರು. ಸಾಮಾಜಿಕ ಹಾಗೂ ಧಾರ್ಮಿಕ ಅನಿಷ್ಟ ಪದ್ಧತಿಗಳ ಆಚರಣೆಯ ವಿರುದ್ಧ 12ನೇ ಶತಮಾನದಲ್ಲೇ ಜನರಲ್ಲಿ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದ ಶೇಷ್ಠ ವಚನಕಾರರಾಗಿದ್ದಾರೆ.
ಅಲ್ಲದೆ ಅನ್ನಛತ್ರ, ಸಾಮೂಹಿಕ ವಿವಾಹ ಹಾಗೂ ಕೆರೆ ಕಟ್ಟೆ ನಿರ್ಮಿಸಿ ಜನರಿಗೆ ಉಪಕಾರ ಮಾಡಿರುವುದಲ್ಲದೆ, ಅಂದಿನ ಸ್ತ್ರೀಯರಲ್ಲಿ ಸಮಾನತೆ ಮೂಡಿಸಿ, ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿದ ಮಹಾ ಪುರುಷ ಎಂದರು.
ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರು ಮಾತನಾಡಿ, ಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ 68 ಸಾವಿರ ವಚನಗಳನ್ನು ರಚಿಸಿದ್ದರು. ಆದರೆ ಇಂದು 1300 ವಚನಗಳು ಲಭ್ಯವಿದ್ದು, ಶ್ರೀ ಸಿದ್ಧಾರಾಮೇಶ್ವರರು ಮಾಡಿರುವ ಸಾಮಾಜಿಕ ಮತ್ತು ಧಾರ್ಮಿಕ ಹಾಗೂ ನೀರಾವರಿಗಾಗಿ ಕೆರೆಗಳ ನಿರ್ಮಾಣ ಮುಂತಾದ ಮಹತ್ತರ ಸಾಧನೆಗಳ ಸ್ಮರಣಾರ್ಥವಾಗಿ ಸರ್ಕಾರವು ಅಧಿಕೃತವಾಗಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜಯಂತಿಯನ್ನು ಆಚರಣೆ ಮಾಡುತ್ತಿದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆಯ ಪೌರಾಯುಕ್ತ ಸಂಗಪ್ಪ ಉಪಾಸೆ, ಲೋಕ ಕಲ್ಯಾಣಾರ್ಥವಾಗಿ ಕೆರೆ–ಕಟ್ಟೆ ನಿರ್ಮಿಸಿ ಜನರಿಗೆ ನೀರಿನ ದಾಹ ತೀರಿಸಿದ ಮಹಾನ್ ಕರ್ಮಯೋಗಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು, ಕಲ್ಲಲ್ಲಿ ಕಲೆ ಅರಳಿಸುವ, ಕಲಾತ್ಮಕತೆಯಲ್ಲಿ ನಿಸ್ಸೀಮರಾಗಿರುವ ಬೋವಿ ಜನಾಂಗದ ಮೂಲ ಪುರುಷ ಹಾಗೂ ಐತಿಹಾಸಿಕ ವ್ಯಕ್ತಿಯ ನೆನಪಿಗಾಗಿ ಸರ್ಕಾರ ಅವರ ಜಯಂತಿಯನ್ನು ಆಚರಿಸುತ್ತಿರುವುದು ಸ್ವಾಗತರ್ಹ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜೀವನ ಕುರಿತು ದೇವೆಂದ್ರಪ್ಪ ದೋತ್ರೆ ಅವರು ಉಪನ್ಯಾಸ ನೀಡಿದರು. ಗುರುಪ್ರಸಾದ ವೈದ್ಯ ನಿರೂಪಿಸಿದರು. ಹಣಮಂತ ವಲ್ಯಾಪುರ ವಂದಿಸಿದರು. ಭೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.