ಅರಣ್ಯ ನಾಶದಿಂದ ಜೀವ ಸಂಕುಲಕ್ಕೆ ಆಪತ್ತು
ಅರಣ್ಯ ಕೃಷಿಯ ಕರಳು ಬಳ್ಳಿ ಃ ನ್ಯಾ.ಭಾಮಿನಿ
yadgiri, ಶಹಾಪುರ: ಅರಣ್ಯ ನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಬಂದಿದೆ. ಅಭಿವೃದ್ಧಿಯ ನೆಪದಲ್ಲಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಕೊರೊನಾ ಹಾವಳಿಯ ಲಾಕ್ ಡೌನ್ ಸಂದರ್ಭದಲ್ಲಿ ಅದೆಷ್ಟು ಜೀವ ಸಂಕುಲ ರಸ್ತೆ ಮೇಲೆ ಓಡಾಡಿದ್ದವು ಎಂಬುವುದನ್ನು ರೈತರು ಮರೆಯಬಾರದು ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಭಾಮಿನಿ ತಿಳಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ ಕೃಷಿಯ ಕರಳು ಬಳ್ಳಿಯಾಗಿದೆ. ರೈತರು ಅರಣ್ಯ ಅಭಿವೃದ್ಧಿಗೆ ಕೈಜೋಡಿಸಬೇಕು. ಬಯಲು ಸೀಮೆ ಎಂಬ ಹಣೆಪಟ್ಟಿ ಹೊತ್ತಿರುವ ಇಲ್ಲಿನ ಪ್ರದೇಶದಲ್ಲಿ ಹೆಚ್ಚು ಹೆಚ್ಚಾಗಿ ಮರಗಳನ್ನು ಬೆಳೆಸಬೇಕು. ಕಡು ಬಿಸಿಲಿನ ತಾಪವನ್ನು ತಣಿಸಲು ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಸಸಿ ನೆಡುವುದರ ಜೊತೆಯಲ್ಲಿ ಅದರ ಆರೈಕೆ ಮಾಡಬೇಕು.
ಪರಿಸರವೆಂದರೆ ಕೇವಲ ಮರಗಿಡ ಅಲ್ಲ. ಅದರ ಜೊತೆಯಲ್ಲಿ ನಮ್ಮ ಸುತ್ತಮುತ್ತಲಿನ ಪ್ರದೇಶದ ವಾತಾವರಣವು ಆತ್ಮೀಯವಾಗಿ ಸೌಹಾರ್ಧಯುತವಾಗಿ ಇರಬೇಕು. ಅವಿಭಕ್ತ ಕುಟುಂಬದಲ್ಲಿ ಇದ್ದಷ್ಟು ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ ಎಂದರು.
ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ಸರ್ಕಾರಿ ಸಹಾಯಕ ಅಭಿಯೋಜಕ ವಿನಾಯಕ ಕೋಡ್ಲಾ, ದಿವ್ಯಾರಾಣಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ರಾಂಪುರೆ, ಕಾರ್ಯದರ್ಶಿ ಸಂದೀಪ ದೇಸಾಯಿ, ಹಿರಿಯ ವಕೀಲರಾದ ಆರ್.ಎಂ.ಹೊನ್ನಾರಡ್ಡಿ, ಮಲ್ಲಿಕಾರ್ಜುನ ಬಕ್ಕಲ್, ಯೂಸೂಫ್ ಸಿದ್ದಿಕಿ, ಅಮರೇಶ ದೇಸಾಯಿ, ರಮೇಶ ಸೇಡಂಕರ್, ಎಸ್.ಆರ್.ಠಾಕೂರ, ಶ್ರೀಮಂತ ಕಂಚಿ, ಗುರುರಾಜ ದೇಶಪಾಂಡೆ, ಸಂತೋಷ ದೇಶಮುಖ, ಶರಬಣ್ಣ ರಸ್ತಾಪುರ, ವಿಶ್ವನಾಥ ಫಿರಂಗಿ, ನಾಜಿಮಾ ಬೇಗಂ, ಆಯಿಷ್ ಪರ್ವಿನ್ ಜಮಖಂಡಿ, ಬಿ.ಎಂ.ರಾಂಪುರೆ, ಬಲ್ಕಿಷ್ ಫಾತಿಮಾ ಇದ್ದರು.