ಶಹಾಪುರದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸ್ಥಾಪನೆಗೆ ಮನವಿ
ಹೆಚ್ಚುವರಿ ಜಿಲ್ಲಾ ಸೇಷನ್ಸ್ ನ್ಯಾಯಾಲಯ ಸ್ಥಾಪನೆಗೆ ಆಗ್ರಹ
ಯಾದಗಿರಿ, ಶಹಾಪುರಃ ಇಲ್ಲಿನ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸ್ಥಾಪಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸನ್ ಓಕಾ ಅವರಿಗೆ ತಾಲೂಕಾ ವಕೀಲರ ಸಂಘ ಮನವಿ ಸಲ್ಲಿಸಿದೆ.
ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಮುಖ್ಯ ನ್ಯಾಯಾಧೀಶ ಓಕಾ ಅವರನ್ನು ಭೇಟಿ ಮಾಡಿದ ಇಲ್ಲಿನ ವಕೀಲರ ನಿಯೋಗ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸ್ಥಾಪಿಸುವ ಕುರಿತು ಮನವಿ ಮಾಡಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ರಾಂಪೂರೆ ತಿಳಿಸಿದ್ದಾರೆ.
ಸಕರಾತ್ಮಕವಾಗಿ ಸ್ಪಂಧಿಸಿದ ನ್ಯಾಯಮೂರ್ತಿ ಓಕಾ ಅವರು, ರಾಜ್ಯದಲ್ಲಿಯೇ ಅತ್ಯಂತ ಅವ್ಯವಸ್ಥೆಯಿಂದ ಕೂಡಿದ ಜಿಲ್ಲಾ ಸಂಕೀರ್ಣವೆಂದರೆ ಯಾದಗಿರಿದ್ದಾಗಿದೆ. ಮೊದಲು ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಬೇಕಾಗುವ ಜಮೀನು ಪಡೆದುಕೊಂಡು ಸುಸಜ್ಜಿತ ಕಟ್ಟಡ ನಿರ್ಮಿಸುವ ಉದ್ದೇಶವಿದೆ.
ನಂತರದ ದಿನಗಳಲ್ಲಿ ಜಿಲ್ಲಾ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯ ಸ್ಥಾಪನೆಗೆ ಸಹಕರಿಸಲಾಗುವುದು ಎಂದು ನಿಯೋಗಕ್ಕೆ ತಿಳಿಸಿದ್ದಾರೆ ಎಂದು ರಾಂಪೂರೆ ಅವರು ವಿವರಿಸಿದರು.
ಶಹಾಪುರ ಮತ್ತು ಸುರಪುರ ನ್ಯಾಯಾಲಯದ ನಡುವೆ 920 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದುಕೊಂಡಿವೆ. ಸುಮಾರು 174 ಹಳ್ಳಿಗಳು ಬರುತ್ತವೆ. ಜಿಲ್ಲಾ ಕೇಂದ್ರದಿಂದ 120 ಕೀ.ಮೀ. ದೂರ ಆ ಹಳ್ಳಿಗಳಿಂದ ಅಂತವಿದ್ದು, ಸರಿಯಾದ ಸಂಚಾರ ವ್ಯವಸ್ಥೆ ಇಲ್ಲ. ಅಲ್ಲದೆ ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್, ವಡಿಗೇರಾ ಮತ್ತು ತಾಲೂಕಿನ ಹೆಚ್ಚು ಪ್ರಕರಣಗಳು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳಾಗಿವೆ.
ಶಹಾಪುರದಲ್ಲಿ ಹೊಸದಾಗಿ ನ್ಯಾಯಾಲಯ ಸ್ಥಾಪನೆಯಿಂದ ಕಕ್ಷಿದಾರರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೆ ಭೀಮರಾಯನ ಗುಡಿಯಲ್ಲಿ ಕೆಬಿಜೆಎನ್‍ಎಲ್ ನಿಗಮದ ಭವ್ಯ ಕಟ್ಟಡಗಳು ಇವೆ. ಇದರಿಂದ ನ್ಯಾಯಾಲಯ ಸ್ಥಾಪಿಸುವಂತೆ ಮೂಲ ಸೌಕರ್ಯದ ಕೊರತೆ ಕಾಣಿಸುವದಿಲ್ಲ ಎಂದು ನಿಯೋಗದಲ್ಲಿ ಹಾಜರಿದ್ದ ಹಿರಿಯ ವಕೀಲ ಶ್ರೀನಿವಾಸರಾವ್ ಕುಲಕರ್ಣಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಾಧೀಶ, ಯಾದಗಿರಿ ಜಿಲ್ಲಾ ಆಡಳಿತ್ಮಾಕ ನ್ಯಾಯಾಧೀಶರು ಆಗಿರುವ ಕೆ.ಎನ್.ಮುದಗಲ್, ಹೈಕೋರ್ಟ್ ರಿಜಿಸ್ಟರ್ ಜನರಲ್ ವಿ.ಶ್ರೀಶಾನಂದ ಹಾಗೂ ವಕೀಲರ ಸಂಘದ ಹಿರಿಯ ವಕೀಲರಾದ ಭಾಸ್ಕರರಾವ್ ಮುಡಬೂಳ, ಸಂಘದ ಕಾರ್ಯದರ್ಶೀ ಸಂದೀಪ ದೇಸಾಯಿ, ವಿನೋದ ನಾಯಕ, ಲಕ್ಷ್ಮೀಕಾಂತ ಶಿಬರಬಂಡಿ, ದೊಡ್ಡೇಶ ದರ್ಶನಾಪುರ, ಚಂದ್ರಶೇಖರ ದೇಸಾಯಿ, ಸಯ್ಯದ್ ಇಬ್ರಾಹಿಂಸಾಬ, ಆರ್.ಎಂ,ಹೊನ್ನಾರಡ್ಡಿ, ಎಸ್.ಗೋಪಾಲ್, ಯೂಸೂಫ್ ಸಿದ್ದಿಕಿ, ಎಚ್ಚ.ಸಿ.ರಡ್ಡಿ. ಅಮರೀಶ ನಾಯಕ, ವಿಶ್ವನಾಥರಡ್ಡಿ ಇತರರಿದ್ದರು.