ಹಕ್ಕುಗಳು ಬೇಕು ಆದರೆ ಕರ್ತವ್ಯ ಬೇಡ ಹಿರಿಯ ವಕೀಲ ಮುಡಬೂಳ ಬೇಸರ
ಹಕ್ಕುಗಳ ಪ್ರತಿಪಾದನೆ ನಡೆದಿದೆ ಆದರೆ ಕರ್ತವ್ಯದಿಂದ ವಿಮುಕ್ತ ಮುಡಬೂಳ ಬೇಸರ
ಸಂವಿಧಾನ ಎಲ್ಲಾ ಕಾನೂನುಗಳ ತಾಯಿ
yadgiri, ಶಹಾಪುರ: ಸಂವಿಧಾನ ನಮ್ಮೆಲ್ಲರ ಸಂರಕ್ಷಣೆಗಾಗಿ ರೂಪಿಸಲಾಗಿದೆ. ಪ್ರತಿಯೊಬ್ಬರು ಸಂವಿಧಾನ ಅಧ್ಯಯನ ಮಾಡಬೇಕು. ಅಲ್ಲದೆ ಜನಸೇವೆ ಮಾಡಲು ಅಧಿಕಾರ ನೀಡಿರುವದು ಸಂವಿಧಾನ ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು ಎಂದು ಹಿರಿಯ ವಕೀಲ ಭಾಸ್ಕರರಾವ್ ಮುಡಬೂಳ ತಿಳಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಸಂವಿಧಾನ ಎಲ್ಲಾ ಕಾನೂನುಗಳ ತಾಯಿಯಂತೆ. ಸಂವಿಧಾನ ರಕ್ಷಣೆಯಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಬೇಕು. ದುರಂತವೆಂದರೆ ಹಕ್ಕುಗಳ ಬಗ್ಗೆ ಪ್ರತಿಪಾದನೆ ಮಾಡುತ್ತಿದ್ದೇವೆ ವಿನಃ ಕರ್ತವ್ಯದಿಂದ ನಾವು ವಿಮುಖರಾಗುತ್ತಿದ್ದೇವೆ ಇದು ಸರಿಯಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಮಾತನಾಡಿ, 1950ರಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂದಿತು. ಅದರಂತೆ 2015ರಿಂದ ದೇಶದ ತುಂಬೆಲ್ಲ ಸಂವಿಧಾನದ ದಿನಾರಚಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನ.19ರಿಂದ25ವರೆಗೆ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಕಾನೂನು ಸೇವೆಗಳ ಅಧ್ಯಕ್ಷರು ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಭಾಮಿನಿ, ಹಿರಿಯ ವಕೀಲರಾದ ಶ್ರೀನಿವಾಸರಾವ್ ಕುಲಕರ್ಣಿ, ಎಪಿಪಿಗಳಾದ ವಿನಾಯಕ ಕೋಡ್ಲಾ, ದಿವ್ಯಾರಾಣಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ರಾಂಪುರೆ, ಕಾರ್ಯದರ್ಶಿ ಸಂದೀಪ ದೇಸಾಯಿ, ಸಯ್ಯದ್ ಇಬ್ರಾಹಿಂ ಜಮದಾರ, ಯೂಸೂಫ್ ಸಿದ್ದಕಿ, ಮಲ್ಕಣ್ಣ ಪಾಟೀಲ್, ರಮೇಶ ಸೇಡಂಕರ್, ಮಲ್ಲಿಕಾರ್ಜುನ ಬಕ್ಕಲ್, ಬಿ.ಎಂ.ರಾಂಪುರೆ, ಆಯಿಷಾ ಪರ್ವೀನ್ ಜಮಖಂಡಿ, ಬಲ್ಕಿಷ್ ಫಾತಿಮಾ, ನಿಂಗಣ್ಣ ದೋರನಹಳ್ಳಿ, ನಾಗೇಂದ್ರ ಬಳಬಟ್ಟಿ ಇದ್ದರು.