‘ನೋಬಾಲ್, ರನೌಟ್, ಬ್ಯಾಡ್ ಲಕ್, ಮತ್ತೆ ಮ್ಯಾಚ್’ : ರಾಜೂಗೌಡರ ಮಾತಿನ ಮರ್ಮ?
ಬೆಂಗಳೂರು : ಯಡಿಯೂರಪ್ಪ ಸಾಹೇಬರ ಸಂಪುಟದಲ್ಲಿ ನಾನು ಸಚಿವನಾಗುತ್ತೇನೆ ಎಂಬ ವಿಶ್ವಾಸವಿತ್ತು. ನಮ್ಮ ಬೆಂಬಲಿಗರು, ಕ್ಷೇತ್ರದ ಜನರೂ ಸಾಕಷ್ಟು ಆಸೆಪಟ್ಟಿದ್ದರು. ಯಡಿಯೂರಪ್ಪ ಸಾಹೇಬರು ಸಹ ನನ್ನ ಹೆಸರನ್ನು ದೆಹಲಿಗೆ ಕಳಿಸಿದ್ದರು. ಆದರೆ, ಬ್ಯಾಡ್ ಲಕ್ ನನಗೆ ಈಸಲ ಸಚಿವ ಸ್ಥಾನ ಸಿಕ್ಕಿಲ್ಲ, ನನಗೇನು ದುಖ: ಇಲ್ಲ. ನನಗಿನ್ನೂ ಚಿಕ್ಕ ವಯಸ್ಸಿದೆ ಪಕ್ಷಕ್ಕಾಗಿ ನಾನು ಶಿಸ್ತಿನ ಸಿಪಾಯಿಯಾಗಿ ದುಡಿಯುತ್ತೇನೆ. ಸಿಎಂ ಯಡಿಯೂರಪ್ಪ ಸೂಚನೆಯಂತೆ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತೇನೆ ಎಂದು ಸುರಪುರದ ಬಿಜೆಪಿ ಶಾಸಕ ರಾಜೂಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಾನೋರ್ವ ಸ್ಪೋರ್ಟ್ಸ್ ಮ್ಯಾನ್ ಆಗಿದ್ದು ಸೋಲು ಗೆಲುವುಗಳನ್ನು ಚಿಕ್ಕಂದಿನಿಂದಲೇ ಸ್ವೀಕರಿಸುತ್ತ ಬಂದಿದ್ದೇನೆ. ಆದರೆ, ಈಗ ನೋಬಾಲ್ ಗೆ ರನೌಟ್ ಆಗಿದ್ದೇನೆ ಎಂಬುದೇ ಬೇಸರದ ಸಂಗತಿ. ಆದರೆ, ನೋಬಾಲ್ ಎಸೆದವರು ಯಾರೆಂಬುದು ಮುಖ್ಯವಲ್ಲ. ನಾನು ರನ್ ಔಟ್ ಆಗಿದ್ದೇನೆಂಬುದು ಸತ್ಯ. ಆದರೆ, ಮತ್ತೆ ಇನ್ನೊಂದು ಮ್ಯಾಚ್ ನಲ್ಲಿ ಚನ್ನಾಗಿ ಆಡುತ್ತೇನೆಂಬ ವಿಶ್ವಾಸ ನನಗಿದೆ ಎಂದರು. ನನಗೆ ಸಚಿವ ಸ್ಥಾನಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಮತ್ತು ಅಡ್ಡ ಬಂದವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಬಯಸುತ್ತೇನೆಂದರು.
ಆದರೆ, ಈಗಾಗಲೇ ನಾವು ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ನೀಡುವಂತೆ ನ್ಯಾಯಬದ್ಧ ಬೇಡಿಕೆ ಇಟ್ಟಿದ್ದೇವೆ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ಹೋರಾಟ ನಡೆಸಿದ್ದು ಯಡಿಯೂರಪ್ಪ ಸಾಹೇಬರ ನಮ್ಮ ಬೇಡಿಕೆ ಈಡೇರಿಸಿದರೆ ಸಾಕು. ನಾನು ಮುಖ್ಯಮಂತ್ರಿ ಆದಷ್ಟು ಖುಷಿ ಪಡುತ್ತೇನೆ ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ 16 ಜನ ಶಾಸಕರಿದ್ದು ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ಕೊಡುವ ಭರವಸೆ ಇದೆ ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.
ರಾಜೂಗೌಡರ ಹೇಳಿಕೆ ಗಮನಿಸಿದರೆ ಈಸಲ ಅತಿಯಾದ ಆತ್ಮವಿಶ್ವಾಸದಲ್ಲಿ ಆಡಲು ಹೋದ ಮಾಜಿ ಸಚಿವ, ಸುರಪುರದ ಹಾಲಿ ಬಿಜೆಪಿ ಶಾಸಕ ರಾಜೂಗೌಡರು ಕೆಟ್ಟ ಗಳಿಗೆಯಲ್ಲಿ ರನೌಟ್ ಆಗಿದ್ದಾರೆ. ಆದರೆ, ಮುಂದಿನ ಮ್ಯಾಚ್ ನಲ್ಲಿ ಎಚ್ಚರಿಕೆಯ ಆಟವಾಡಿ ಗೆದ್ದು ಬರುವ ಮೂಲಕ ಮತ್ತೆ ಸಚಿವ ಸಂಪುಟ ಸೇರುವುದು ಗ್ಯಾರಂಟಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.