ಕನ್ನಡದ ಕಿರೀಟ, ಸಗರನಾಡಿನ ಸಾಹಿತ್ಯ ದೊರೆ ಎ.ಕೃಷ್ಣಾ ಅಗಲಿಕೆಗೆ ಹಲವರ ಕಂಬನಿ
ಸಾಹಿತ್ಯ ಲೋಕದ ಭೀಷ್ಮ ಎ.ಕೃಷ್ಣಾ ಅಗಲಿಕೆಗೆ ಅಶ್ರುತರ್ಪಣ..ಸಾಹಿತಿಗಳು, ವಿದ್ಯಾರ್ಥಿಗಳು, ಗಣ್ಯರು, ಖ್ಯಾತನಾಮರು ಅಭಿಮಾನಿಗಳಿಂದ ನುಡಿ ನಮನ. ನೂರಾರು ಜನ ಎ. ಕೃಷ್ಣಾ ಅವರ ಅಗಲಿಕೆ ಕುರಿತು ವಿನಯವಾಣಿಗೆ ನುಡಿ ನಮನ ಬರೆದು ಕಳುಹಿಸಿದ್ದು, ಮೊದಲಿಗೆ ಬಂದ ಎರಡು ನುಡಿ ನಮನಗಳನ್ನ ಮಾತ್ರ ಪ್ರಕಟಿಸಲಾಗಿದೆ. ಎಲ್ಲವೂ ಪ್ರಕಟಿಸಲು ಅಸಾಧ್ಯವಾದದು ಎಂಬುದನ್ನು ತಮ್ಮ ಅರಿವಿಗಿದೆ ಎಂದು ತಿಳಿದಿದ್ದು, ಯಾರು ಅನ್ಯತಾ ಭಾವಿಸದಿರಿ ಎಂದು ವಿನಯವಾಣಿ ಸಂಪಾದಕಿಯ, ಹಿತೈಷಿಗಳ ಮಂಡಳಿ ಕೋರುತ್ತದೆ.
—– ಸಂ —-
ಅಯ್ಯೋ, ಖ್ಯಾತ ಹಿರಿಯ ಕವಿ ಎ.ಕೃಷ್ಣ ಸುರಪುರ ಇನ್ನಿಲ್ಲ.ಇದೆಂತಹ ಸುದ್ದಿ.ನಾ ಗಮನಿಸಲೇ ತಡವಾಯಿತು.ಅವರು ನಮ್ಮ ಸಗರ ನಾಡಿನ ಹೆಮ್ಮೆಯ ಕವಿ.ನಾ ನನ್ನ ಜೀವನದಲ್ಲಿ ನೋಡಿದ ಮೊದಲ ಕವಿ ಇವರು.
ಸುರಪುರದಲ್ಲಿ ಪಿಯು ಓದುವಾಗಿ ಫೇಲಾಗಿ ದು:ಖದಲ್ಲಿ ಇದ್ದಾಗ ನಾವಿದ್ದ ರೂಮಿನ ಮುಂದಿನಿಂದ ಸದಾ ಬಿಳೀ ಶರ್ಟು,ಪೈಜಾಮ್ ಹಾಕಿಕೊಂಡು ಕೈಯಲ್ಲಿ ಸದಾ ಒಂದು ಪುಸ್ತಕ ಹಿಡಿದುಕೊಂಡು ಆಕಾಶದ ಕಡೆಗೆ ಜಾಸ್ತಿ ದೃಷ್ಟಿ ನೆಟ್ಟು ತಿರುಗಾಡುತ್ತಿದ್ದ ಇವರನ್ನು ಕವಿಗಳೆಂದು ತೋರಿಸಿದ್ದರು.
ಕವಿಗಳೆಂದರೆ ಹೀಗೆ ಇರುತ್ತಾರೆ ಅಂತ ಅಂದುಕೊಂಡಿದ್ದೆ.ನನಗೆ ತುಂಬಾ ಪ್ರೀತಿ ಪಾತ್ರರು.ಗೌರವ.ಅವರ ಅಗಲಿಕೆ ಕಲ್ಯಾಣ ಕರ್ನಾಟಕ ಕ್ಕೆ ತುಂಬಲಾರದ ನಷ್ಟ.ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಅವರ ಕುಟುಂಬ ಕ್ಕೆ ದು:ಖ ಭರಿಸುವ ಶಕ್ತಿ ಸಿಗಲೆಂದು ಹಾರೈಸುವೆ. ಕಂಬನಿಯುಕ್ತ ಅಶ್ರುತರ್ಪಣ.🌹💐🙏🙏🌹🌹
–ಸಿದ್ಧರಾಮ ಹೊನ್ಕಲ್. ಸಾಹಿತಿ.ಶಹಾಪುರ.
——————
ಕರ್ನಾಟಕದ ಅಪರೂಪದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದ ಎ. ಕೃಷ್ಣ ಸುರಪುರ ಅವರ ನಿಧನದಿಂದ ನಾಡಿನ ಸಾರಸ್ವತ ಲೋಕ ಬಡವಾಗಿದೆ. ಎ.ಕೃಷ್ಣ ಸುರಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರ ಸಮ್ಮುಖದಲ್ಲಿ ಮರೆಯಲಾಗದ ಸಾಹಿತಿಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ್ದೆ.
ಅದು ನನ್ನ ಪುಣ್ಯ ಎಂದು ಭಾವಿಸಿದ್ದೆ. ಕಲ್ಯಾಣ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಎ ಕೃಷ್ಣ ಸುರಪುರ ಅವರ ಕೊಡುಗೆ ಅಪಾರವಾದದ್ದು. ಅಮೂಲ್ಯ ಸಾಹಿತ್ಯ ಕೃತಿಗಳ ಮೂಲಕ ನಾಡಿನ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತಿಗಳಲ್ಲಿ ಎ. ಕೃಷ್ಣ ಸುರಪುರ ಅವರು ಪ್ರಮುಖರಾಗಿದ್ದಾರೆ.
ಇಂದು ಎ.ಕೃಷ್ಣಾ ಅವರು ಇನ್ನಿಲ್ಲ ಎಂಬ ಸುದ್ದಿ ನಾಡಿನ ಸಾಹಿತ್ಯ ಲೋಕಕ್ಕೆ ಗರ ಬಡಿದಂತಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ.
–ರಾಘವೇಂದ್ರ ಹಾರಣಗೇರಾ. ಸಮಾಜಶಾಸ್ತ್ರ ಉಪನ್ಯಾಸಕರು.