ಪ್ರಮುಖ ಸುದ್ದಿ
‘ಸಮ್ಮಿಶ್ರ ಸಭೆ’ ಬಳಿಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದೇನು?
ಬೆಂಗಳೂರು: ರೈತರ ಸಾಲಮನ್ನಾ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಸಂಘರ್ಷವಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಣಾಳಿಕೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರ ಯಾವುದೇ ಅಡಚಣೆ ಇಲ್ಲದೆ ಐದು ವರ್ಷ ಕಾಲಾವಧಿ ಪೂರೈಸಲಿದೆ ಎಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ಸಿದ್ಧತಾ ಸಮಿತಿ ಸಭೆ ಬಳಿಕ ಸಮಿತಿಯ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಸಾಲಮನ್ನಾದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆಗಬಹುದಾದ ನಷ್ಟದ ಬಗ್ಗೆಯೂ ಚರ್ಚಿಸಲಾಗಿದ್ದು ಕೊನೆಗೆ ರೈತರ ಸಾಲ ಮನ್ನಾ ಮಾಡುವ ಜವಾಬ್ದಾರಿಯನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ. ಅಂತೆಯೇ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯ ಪ್ರಮುಖ ಯೋಜನೆಗಳನ್ನು ಮುಂದುವರೆಸುವುದು. ಜಲಸಂಪನ್ಮೂಲ ಇಲಾಖೆಗೆ ಮುಂದಿನ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ.ಅನುದಾನ ಒದಗಿಸುವುದು ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.